
ಗಂಡೇ ಅಮ್ಮನಾಗುವ ʼನಿಮಗೊಂದು ಸಿಹಿ ಸುದ್ದಿ!ʼ
ನೈಸರ್ಗಿಕವಾಗಿ ಗರ್ಭ ಧರಿಸುವುದು ಗಂಡಿಗೆ ಅಸಾಧ್ಯವಾದದ್ದು ಸಾಧ್ಯವೆ ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಹುಡುಕುವ ಪಯತ್ನವನ್ನು ನಟ, ನಿರ್ದೇಶಕ ರಘು ಭಟ್ ತಮ್ಮ ನಿರ್ದೇಶನದ ನಿಮಗೊಂದು ಸಿಹಿ ಸುದ್ದಿ ಚಿತ್ರದ ಮೂಲಕ ಮಾಡಿದ್ದಾರೆ.
ಮನುಷ್ಯನ ಬುದ್ದಿ ಶಕ್ತಿ ವಿಕಾಸವಾಗುತ್ತ ಹೋಗುತ್ತಿರುವಂತೆ ಮನುಷ್ಯ ಅಸಾಧ್ಯವನ್ನು ಸಾಧ್ಯ ಮಾಡುವ ಪ್ರಯತ್ನವನ್ನು ನಿರಂತರ ಮಾಡುತ್ತಲೇ ಇದ್ದಾನೆ. ಈ ನಿಟ್ಟಿನಲ್ಲಿ ಪಕೃತಿಗೆ ಸವಾಲೊಡ್ಡುತ್ತ ತನ್ನ ಗುರಿ ತಲುಪಲು ಪರಿವರ್ತನಾ ಲೋಕದಲ್ಲಿ ಮುಳುಗಿದ್ದಾನೆ.
ದೇವರು ತನ್ನ ಸೃಷ್ಟಿಯಲ್ಲಿ ಹೆಣ್ಣು ಗಂಡು ಎಂಬ ಎರಡು ಜೀವಗಳನ್ನು ಸೃಷ್ಠಿಸಿದ್ದು, ಹೆಣ್ಣಿಗೆ ಇನ್ನೊಂದು ಜೀವಕ್ಕೆ ಜೀವ ಕೊಡುವ ಶಕ್ತಿ ನೀಡಿದ್ದಾನೆ. ಹೆಣ್ಣು ಗಂಡಿನ ನಡುವೆ ದೈಹಿಕ ವ್ಯತ್ಯಾಸದ ಹೊರತಾಗಿಯೂ ನೈಸರ್ಗಿಕವಾಗಿ ಗಂಡಿಗೆ ಅಸಾಧ್ಯವಾದ ಹಾಗೂ ಹೆಣ್ಣಿಗೆ ಮಾತ್ರ ಸಾಧ್ಯವಾಗುವ ಪ್ರಕ್ರಿಯೆಯೇ ಗರ್ಭ ಧರಿಸುವುದು.
ನೈಸರ್ಗಿಕವಾಗಿ ಗರ್ಭ ಧರಿಸುವುದು ಗಂಡಿಗೆ ಅಸಾಧ್ಯವಾದದ್ದು ಸಾಧ್ಯವೆ ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಹುಡುಕುವ ಪಯತ್ನವನ್ನು ನಟ, ನಿರ್ದೇಶಕ ರಘು ಭಟ್ ತಮ್ಮ ನಿರ್ದೇಶನದ ನಿಮಗೊಂದು ಸಿಹಿ ಸುದ್ದಿ ಚಿತ್ರದ ಮೂಲಕ ಮಾಡಿದ್ದಾರೆ. ಗಂಡು ಗರ್ಭಧರಿಸಿ ಮಗುವನ್ನು ಹೆರುವ ಹೊಸ ಪರಿಕಲ್ಪನೆಯ ಕಥೆ ಬರೆದು. ಅದಕ್ಕೆ ಪೂರಕವಾದ ಚಿತ್ರಕಥೆಯನ್ನೂ ಪೋಣಿಸಿರುವ ರಘು ಭಟ್. ಸುಧೀಂದ್ರ ಅವರ ಜೊತೆಗೆ ನಿರ್ದೇಶನದ ಅರ್ಥ ಜವಾಬ್ದಾರಿನ್ನೂ ನಿಭಾಯಿಸಿದ್ದಾರೆ.
ಉಬ್ಬಿದ ಹೊಟ್ಟೆ ನೋವಿನಿಂದ ಬಳಲುವ ನಾಯಕ ಅರ್ಜುನ್ ಹೆಬ್ಬಾರ್ (ರಘು ಭಟ್)ಗೆ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದಾಗ ಮಗುವೊಂದು ಜನ್ಮ ತಾಳಿ ಆ ಮಗುವಿಗೆ ಯಾರು ಜನ್ಮ ನೀಡಿದ್ದು ಎನ್ನುವುದನ್ನು ತಿಳಿಯುವ ಪ್ರಯತ್ನವೇ ಚಿತ್ರದ ತಿರುಳು. ಮದುವೆಯೂ ಆಗದೇ ಗಂಡಸಾಗಿ ತಮಗೊಂದು ಮಗು ಹುಟ್ಟಿದೆ ಎನ್ನುವುದನ್ನೇ ಅರಗಿಸಿಕೊಳ್ಳಲಾಗದ ನಾಯಕ. ಆ ಮಗುವಿನ ಜನ್ಮ ರಹಸ್ಯ ತಿಳಿಯಲು ನಡೆಸುವ ಕಸರತ್ತು ಹೊಸ ತಿರುವುಗಳನ್ನು ಪಡೆಯುತ್ತ ಹೋಗುತ್ತದೆ.
ಮೊದಲರ್ಧ ನಾಯಕ ಅರ್ಜುನ್ ಹೆಬ್ಬಾರ್. ಗೆಳೆಯ ಡಿಡಿ ಹೇಗಾದರೂ ಮಾಡಿ ಮಗುವನ್ನು ದೂರ ಮಾಡಿ ನಮ್ಮದಿಯಿಂದ ಇರಲು ನಡೆಸುವ ಪ್ರಯತ್ನ ಅವರ ಪ್ರಯತ್ನಕ್ಕೆ ಅಡುಗೆ ಮಾಡಿ ಯುಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿ ಫೇಮಸ್ ಆಗಲು ಬಯಸುವ ಪಕ್ಕದ ಮನೆಯ ಶೀಲಾಕಿ ಜವಾನಿ ಶೈಲಾ ಆಂಟಿ ಅಡ್ಡಿಯಾಗಿ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡು ಹೋಗುವ ಕಸರತ್ತು ಹೆಚ್ಚೇನು ಅಬ್ಬರವಿಲ್ಲದೇ ನಡೆದುಕೊಂಡು ಹೋಗುತ್ತದೆ. ಇವರ ಗೊಂದಲಗಳ ನಡುವೆಯೇ ಮಗುವಿನ ಅಳುವ ಧ್ವನಿಯ ನಡುವೆಯೂ, ಮಗುವಿನ ನಗುಮುಖ ಮಾತ್ರ ಮನಕ್ಕೆ ಮುದ ನೀಡುತ್ತದೆ.
ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಫೇಮಸ್ ಶೆಫ್ ಆಗಿರುವ ಅರ್ಜುನ್ ಹೆಬ್ಬಾರ್‌ಗೆ ಮದುವೆ, ಹೆಂಡತಿ ಮಕ್ಕಳು ಎಂದರೆ ಜೀವನದಲ್ಲಿ ಸಂಕೋಲೆ ಎಂದುಕೊಂಡವನು. ಅವನು ಪ್ರತಿದಿನ ಹೇಗೆ ಅಡುಗೆಯಲ್ಲಿ ಹೊಸ ಹೊಸ ರುಚಿ ಬಯಸುತ್ತಾನೋ, ಅದೇ ರೀತಿ ತನ್ನ ಜೀವನದಲ್ಲಿ ಹೆಣ್ಣನ್ನೂ ತನ್ನ ಖುಷಿಗಾಗಿ ಪ್ರತಿ ದಿನ ಹೊಸದನ್ನು ಬಯಸಬೇಕೆನ್ನುವ ಮನೋಭಾವದವನು. ಅವನ ಈ ಮನಸ್ಥಿತಿಯ ಅರಿವಿಲ್ಲದೇ ಅವನೊಂದಿಗೆ ಸ್ನೇಹ ಬೆಳೆಸುವ ನಾಯಕಿ ಅನೂಷಾ (ಕಾವ್ಯಾ ಶೆಟ್ಟಿ) ಮದುವೆಗೂ ಮೊದಲೇ ಅವನೊಂದಿಗೆ ದೈಹಿಕ ಸಂಬಂಧವನ್ನೂ ಬೆಳೆಸಿ ಸುಂದರ ಸಂಸಾರದ ಕನಸು ಕಂಡು ದೂರವಾಗುವ ಅವಳು ಮುಂದೇನು ಮಾಡುತ್ತಾಳೆ ಎನ್ನುವುದು ಚಿತ್ರದ ಸಸ್ಪೆನ್ಸ್.
ಮಗುವಿನ ಮುಗ್ಧ ನಗು ಎಂತಹ ಕೊಲೆಗಾರನ ಮನಸನ್ನೂ ಬದಲಿಸುತ್ತದೆ ಎನ್ನುವುದಕ್ಕೆ ಅಂಗೂಲಿಮಾಲಾನ ಕಥೆಗೆ ಸಾಕ್ಷಿ. ಈ ಚಿತ್ರದಲ್ಲಿಯೂ ಕೂಡ ಮಗುವನ್ನು ದೂರ ಮಾಡಲು ಕಸರತ್ತು ಮಾಡುವ ನಾಯಕ ಆ ಮಗುವಿನ ಮುಗ್ಧ ನಗುವಿಗೆ ಕರಗಿ, ಆ ಮಗುವು ತನಗೆ ಹುಟ್ಟಿದೆಯೋ ಬಿಟ್ಟಿದೆಯೋ ಆದರೆ, ಆ ಮಗುವಿನ ಜವಾಬ್ದಾರಿ ತಾನೇ ನೋಡಿಕೊಳ್ಳುತ್ತೇವೆ ಎನ್ನುವಷ್ಟರ ಮಟ್ಟಿಗೆ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತಾನೆ.
ಒಬ್ಬ ಗಂಡಸಿಗೆ ಹೊಟ್ಟೆ ಬಂದು ತಾನು ಗರ್ಭ ಧರಿಸಿದ್ದೇನೆ ಎನ್ನುವ ಭಾವನೆ ಮೂಡುವಂತೆ ಮಾಡಲು ಅಗತ್ಯವಿರುವ ಡ್ರಗ್ ನೀಡುವ ಪರಿಕಲ್ಪನೆ ವೈದ್ಯಕೀಯ ಲೋಕದ ಹೊಸ ಪ್ರಯತ್ನವಾಗಿರಬಹುದು. ನಾಯಕನಿಗೆ ಆ ಭಾವನೆ ಮೂಡಿಸುವ ವೈದ್ಯ ಡಾ. ವಿವೇಕ್ ಪಾತ್ರದಲ್ಲಿ ನಟ ವಿಜಯರಾಘವೇಂದ್ರ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರ ನಾಯಕತ್ವ ಇದ್ದಿದ್ದರೆ ಚಿತಕ್ಕೆ ಇನಷ್ಟು ತೂಕ ಬರುತ್ತಿತ್ತು ಎನಿಸುತ್ತದೆ.
ಇಲ್ಲಿ ಕಥೆಯೇ ಹೊಸತನದಿಂದ ಕೂಡಿರುವುದರಿಂದ ಗಾಂಧಿನಗರದ ಗಣಿತ ಮೀರಿರುವುದರಿಂದ ಇಲ್ಲಿ ನಾಯಕನ ಬಿಲ್ಲಪ್ಪಿಗೆ ಹೆಚ್ಚಿನ ಅವಕಾಶವಿಲ್ಲ. ಸೆಕೆಂಡ್ ಆಫ್‌ನಲ್ಲಿ ಸೆಲೆಬ್ರಿಟಿ ಶೆಪ್ ಆಗಿ ಕಾಣಿಸಿಕೊಳ್ಳುವ ರಘು ಭಟ್ ಅವರು ಇನಷ್ಟು ಅದ್ಧೂರಿತನ ತೋರಿಬಹುದಿತ್ತು. ಚಿತ್ರದಲ್ಲಿ ಎರಡು ಹಾಡುಗಳನ್ನು ಸಂಪೂರ್ಣ ಇಂಗ್ಲಿಷ್‌ನಲ್ಲಿಯೇ ಹಾಡಿರುವ ಹಿಂದಿನ ಉದ್ದೇಶ ಅರ್ಥ ವಾಗಲಿಲ್ಲ. ಇನ್ನೆರಡು ಹಾಡುಗಳು ಕಿವಿಗೆ ಇಂಪುಕೊಡುತ್ತವೆ. ಕಾವ್ಯಾ ಶೆಟ್ಟಿ ಅವರ ನಗುವಿನ ಜೊತೆಗೆ ನಟನೆಯೂ ಆಪ್ತವಾಗುತ್ತದೆ. ನಟ ರಘು ಭಟ್ ಅವರಿಗೆ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವುದು ಹೊರೆಯಾಗಿದೆಯಾ ಅನಿಸುತ್ತದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳಿಲ್ಲದೇ, ಜನ ಮಾನಸದಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಯುವ ನಿರ್ದೇಶಕರು ಹೊಸ ಪ್ರಯೋಗಗಳ ಮೂಲಕ ಗಾಂಧಿ ನಗರದ ಫಿಕ್ಸ್ಡ್ ಫಾರ್ಮೂಲಾದಿಂದ ಹೊರ ಬಂದು ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡುತ್ತಿರುವುದಂತೂ ಕನ್ನಡ ಚಿತ್ರರಂಗಕ್ಕೂ ಹಾಗೂ ಕನ್ನಡ ಪೇಕ್ಷರಿಗೊಂದು ಸಿಹಿ ಸುದ್ದಿ.