2025ರಲ್ಲಿ ಹೊಸಬರದ್ದೇ ಪ್ರಾಬಲ್ಯ; 200ಕ್ಕೂ ಹೆಚ್ಚು ನಿರ್ದೇಶಕರು, ಕಲಾವಿದರ ಆಗಮನ
x

2025ರಲ್ಲಿ ಹೊಸಬರದ್ದೇ ಪ್ರಾಬಲ್ಯ; 200ಕ್ಕೂ ಹೆಚ್ಚು ನಿರ್ದೇಶಕರು, ಕಲಾವಿದರ ಆಗಮನ

ತಾಂತ್ರಿಕ ವರ್ಗ ಮತ್ತು ನಿರ್ಮಾಣ: ಕಳೆದ ವರ್ಷದಂತೆ ಈ ವರ್ಷವೂ ಚಿತ್ರರಂಗಕ್ಕೆ 200ಕ್ಕೂ ಹೆಚ್ಚು ಹೊಸ ನಾಯಕ-ನಾಯಕಿಯರು, ನೂರಕ್ಕೂ ಹೆಚ್ಚು ಛಾಯಾಗ್ರಾಹಕರು ಮತ್ತು ಸಂಗೀತ ನಿರ್ದೇಶಕರು ಎಂಟ್ರಿ ಕೊಟ್ಟಿದ್ದಾರೆ.


Click the Play button to hear this message in audio format

ಈ ವರ್ಷ ಕನ್ನಡ ಚಿತ್ರರಂಗದಲ್ಲಿ 250ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳ ಪೈಕಿ ಜನಪ್ರಿಯ ನಟರ ಮತ್ತು ಪರಿಚಿತ 50 ಚಿತ್ರಗಳು ಬಿಡುಗಡೆಯಾಗಿರಬಹುದು. ಹಾಗಾದರೆ, ಮಿಕ್ಕಂತೆ ಬಿಡುಗಡೆಯಾದ ಚಿತ್ರಗಳು ಯಾವುವು ಎಂದರೆ ಹೊಸಬರದ್ದು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಬಂದಿದ್ದಾರೆ. ಅದಕ್ಕೆ ಈ ವರ್ಷವೂ ತರವಲ್ಲ. ಈ ವರ್ಷವೂ ದೊಡ್ಡ ಮಟ್ಟದಲ್ಲಿ ಹೊಸಬರು ಕನ್ನಡ ಚಿತ್ರರಂಗಕ್ಕೆ ಹರಿದು ಬಂದಿದ್ದಾರೆ.

2025ರಲ್ಲಿ ಬಿಡುಗಡೆಯಾದ ಚಿತ್ರಗಳ ಪಟ್ಟಿಯನ್ನು ಹಿಡಿದು ನೋಡಿದರೆ, 200ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಕಾಣಸಿಗುತ್ತವೆ. ಕಳೆದ ವರ್ಷದಂತೆ ಈ ವರ್ಷವೂ 200ಕ್ಕೂ ಹೆಚ್ಚು ಹೊಸ ನಿರ್ದೇಶಕರು, ನಾಯಕ-ನಾಯಕಿಯರು ಬಂದಿದ್ದಾರೆ. 100ಕ್ಕೂ ಹೆಚ್ಚು ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು, ಸಂಕಲನಕಾರರು ಬಂದಿದ್ದಾರೆ. ಸುಮಾರು 10 ಹಳೆಯ ನಿರ್ಮಾಪಕರು ಚಿತ್ರ ಮಾಡಿರುವುದು ಬಿಟ್ಟರೆ ಮಿಕ್ಕೆಲ್ಲಾ ನಿರ್ಮಾಪಕರು ಹೊಸಬರೇ. ಆ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನವಾಗುತ್ತಿದೆ ಎನ್ನುವುದು ವಿಶೇಷ.

ಈ ವರ್ಷದ ಮೊದಲ ಮೂರು ಚಿತ್ರವೂ ಹೊಸಬರದ್ದೇ ಎನ್ನುವುದು ಗಮನಾರ್ಹ. ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾದ ‘ಗನ್ಸ್ ಆ್ಯಂಡ್‍ ರೋಸಸ್’, ‘ಸ್ವೇಚ್ಛಾ’ ಮತ್ತು ‘ಆಫ್ಟರ್‍ ಬ್ರೇಕಪ್‍’ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ನಾಯಕ-ನಾಯಕಿ ಎಲ್ಲರೂ ಹೊಸಬರೇ ಆಗಿದ್ದರು. ಆ ನಂತರ ಬಂದ ‘ಟೆಡ್ಡಿ ಬೇರ್’, ‘ಕಣ್ಣ ಮುಚ್ಚೆ ಕಾಡೆಗೂಡೆ’, ‘ರಾವಣಾಪುರ’, ‘ರೈಡ್’, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’, ‘ರಾವುತ’, ‘ಇಟ್ಟಿಗೆ ಗೂಡಿನಲ್ಲಿ ರಾಜ ರಾಣಿ’, ‘ಕಾಡುಮಳೆ’, ‘ನಿಮಿತ್ತ ಮಾತ್ರ’, ‘ವಿದ್ಯಾ ಗಣೇಶ್‍’, ‘ನನಗೂ ಲವ್‍ ಆಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ನಿಮಗೊಂದು ಸಿಹಿ ಸುದ್ದಿ’, ‘ನವಮಿ’, ‘ರಾಜ ರೋಜ’, ‘1990ಸ್‍’, ‘ಅಪಾಯವಿದೆ ಎಚ್ಚರಿಕೆ’, ‘ಮಾಂಕ್‍ ದಿ ಯಂಗ್‍’, ‘ವಿರಾಮದ ನಂತರ’, ‘ಸೈಕಲ್‍’, ‘ಪ್ರತ್ಯರ್ಥ’, ‘ಇಂಟರ್‍ವೆಲ್‍’, ‘ತರ್ಕ’, ‘ಆಹ್‍’, ‘ಪಾರಿತೋಷಕ’, ‘ಬರ್ಗೆಟ್‍ ಬಸ್ಯ’, ‘ಮೈಲಾಪುರ’, ‘ನಿಮ್ದೆ ಕಥೆ’, ‘ರಿಕ್ಷಾ ಚಾಲಕ’, ‘ಪ್ರೀತಿಯ ಹುಚ್ಚ’, ‘ನಾನ್‍ ಪೋಲಿ’, ‘ಅರಿಂದಮ್‍’, ‘ಉದಯ ಸೂರ್ಯ’, ‘ಲೈಟ್‍ ಹೌಸ್‍’, ‘ಠಾಣೆ’, ‘ಸ್ಕೂಲ್‍ ಲೀಡರ್’, ಕಾಲೇಜ್‍ ಕಲಾವಿದ’, ‘ನೀತಿ’, ‘ಆಸ್ಟಿನ್‍ನ ಮಹಾನ್ ಮೌನ’, ‘ಗುರಿ’, ‘ರಾಮನಗರ’, ‘ಜೊತೆಯಾಗಿ ಹಿತವಾಗಿ’, ‘ಕುಂಟೆಬಿಲ್ಲೆ’ ಮುಂತಾದ ಚಿತ್ರಗಳು ಸಂಪೂರ್ಣ ಹೊಸಬರ ಚಿತ್ರಗಳಾಗಿದ್ದವು. ಇಲ್ಲಿ ನಿರ್ಮಾಪಕರು, ನಿರ್ದೇಶಕರು, ನಾಯಕ-ನಾಯಕಿ ಮತ್ತು ತಂತ್ರಜ್ಞರು ಹೊಸಬರೇ ಆಗಿದ್ದರು.

ಇನ್ನೂ ಕೆಲವು ಚಿತ್ರಗಳಲ್ಲಿ ನಿರ್ದೇಶಕರು ಹೊಸಬರಾದರೂ, ನಾಯಕ-ನಾಯಕಿ ಗುರುತಿಸಿಕೊಂಡವರಾಗಿದ್ದರು. ‘ಅಂದೊಂದಿತ್ತು ಕಾಲ’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ನೋಡಿದವರು ಏನಂತಾರೆ’, ‘ಗಜರಾಮ’, ‘ಭುವನಂ ಗಗನಂ’, ‘ಶಭಾಷ್‍ ಬಡ್ಡಿಮಗನೆ’, ‘ಸೂರಿ ಲವ್ಸ್ ಸಂಧ್ಯಾ’, ‘ವಾಮನ’, ‘ಎಡಗೈ ಅಪಘಾತಕ್ಕೆ ಕಾರಣ’, ‘ಸು ಫ್ರಮ್‍ ಸೋ’, ‘ಜಸ್ಟ್ ಮ್ಯಾರೀಡ್‍’, ‘ಏಳುಮಲೆ’, ‘ನಿದ್ರಾದೇವಿ ನೆಕ್ಸ್ಟ್ ಡೋರ್’, ‘ಅರಸಯ್ಯನ ಪ್ರೇಮ ಪ್ರಸಂಗ’, ‘ಯಾರಿಗೂ ಹೇಳ್ಬೇಡಿ’, ‘ಫುಲ್‍ ಮೀಲ್ಸ್’ ಮುಂತಾದ ಚಿತ್ರಗಳ ಕಲಾವಿದರು ಹಳಬರಾದರೂ, ನಿರ್ದೇಶಕರು ಹೊಸಬರಾಗಿದ್ದರು.

ಈ ವರ್ಷ ಗಮನಸೆಳೆದ ನಿರ್ದೇಶಕರ ಸಂಖ್ಯೆ ಕಡಿಮೆಯೇ. ಕಥೆಯ ವಿಷಯದಲ್ಲಿ ಈ ವರ್ಷವೂ ವಿಭಿನ್ನ ಪ್ರಯತ್ನಗಳಾಗಿದ್ದು ಕಡಿಮೆಯೇ. ಹೊಸದಾಗಿ ನಿರ್ದೇಶನಕ್ಕಿಳಿದವರು ಹೆಚ್ಚಾಗಿ ನಿರ್ದೇಶಿಸಿದ್ದು ಅದೇ ಪ್ರೀತಿ, ಪ್ರೇಮ ಸುತ್ತ ಸುತ್ತವ ಕಮರ್ಷಿಯಲ್‍ ಚಿತ್ರಗಳನ್ನೇ. ಅದನ್ನು ಹೊರತುಪಡಿಸಿ ಕೆಲವರು ಒಂದಿಷ್ಟು ಬೇರೆ ತರಹದ ಪ್ರಯತ್ನಗಳನ್ನು ಮಾಡಿದರು. ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ನೋಡಿದವರು ಏನಂತಾರೆ’, ‘ಪಾರು ಪಾರ್ವತಿ’, ‘ಕಪಟ ನಾಟಕ ಸೂತ್ರಧಾರಿ’, ‘ಅನಾಮಧೇಯ ಅಶೋಕ್‍ ಕುಮಾರ್’, ‘ಫಸ್ಟ್ ಡೇ ಫಸ್ಟ್ ಶೋ’, ‘ಪಪ್ಪಿ’, ‘ರೂಮ್‍ ಬಾಯ್‍’ ಮುಂತಾದ ಚಿತ್ರಗಳು ವಿಭಿನ್ನ ಕಥಾವಸ್ತುವಿನಿಂದ ಗಮನಸೆಳೆದಿವೆ. ಈ ಚಿತ್ರಗಳು ಮಾಮೂಲೀ ಪ್ರೇಮಕಥೆಗಳು ಅಥವಾ ಬೇರೆ ತರಹದ ಕಥೆಗಳಾಗಿದ್ದವು.

ಇನ್ನೂ, ಚಿತ್ರರಂಗಕ್ಕೆ ದೊಡ್ಡ ಸಂಖ್ಯೆಯಲ್ಲಿ ಹೊಸ ನಟ-ನಟಿಯರು ಬಂದಿದ್ದಾರೆ. ಈ ಪೈಕಿ ಗಮನಸೆಳೆದವರೆಂದರೆ, ಸಂಗೀತಾ ರಾಜರಾಂ (ಕಾಡು ಮಳೆ), ವಿಕಾಸ್‍ ಉತ್ತಯ್ಯ (ಅಪಾಯವಿದೆ ಎಚ್ಚರಿಕೆ), ರಾಶಿಕಾ ಶೆಟ್ಟಿ (ಮನದ ಕಡಲು), ವಂಶಿ ಕೃಷ್ಣ (ಫೈರ್ ಫ್ಲೈ), ಕಾವ್ಯಾ ಶೈಲ (ಕೊತ್ತಲವಾಡಿ), ಪ್ರಿಯಾಂಕಾ ಆಚಾರ್‍ (ಏಳುಮಲೆ), ದುಶ್ಯಂತ್‍ (ಗತವೈಭವ), ರಕ್ಷಿತ್‍ ನಾಗ್‍ (ಕಂಗ್ರಾಜುಲೇಷನ್ಸ್ ಬ್ರದರ್‍) ಮುಂತಾದವರು ತಮ್ಮ ಪ್ರತಿಭೆಯಿಂದ ಗಮನಸೆಳೆದಿದ್ದಾರೆ. 2026ರಲ್ಲಿ ಇನ್ನಷ್ಟು ಹೊಸಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದು, ಈ ಪೈಕಿ ಯಾರೆಲ್ಲಾ ಗಮನಸೆಳೆಯುತ್ತಾರೆ ನೋಡಬೇಕಿದೆ.

Read More
Next Story