
ತುಳು ಜನಪದ, ಆಧುನಿಕತೆ ಮತ್ತು ದೌರ್ಬಲ್ಯಗಳ ನಾಜೂಕು ಅನಾವರಣವೇ ʼಇಂಬುʼ
ಕರಾವಳಿ ಭಾಗದ "ಕುಸಲ್ದರಸೆ" (Comedy King) ಎಂಬ ಅನ್ವರ್ಥನಾಮ ಪಡೆದುಕೊಂಡಿರುವ ನವೀನ್ ಡಿ. ಪಡೀಲ್ ಒಬ್ಬ ಉತ್ತಮ ನಟ ಹಾಗೂ ಕಲಾತ್ಮಕ ಚಿತ್ರಗಳಲ್ಲೂ ಗಂಭೀರ ಪಾತ್ರವಹಿಸುವ ಕಲಾವಿದನಾಗಿ ಮೇಲ್ದರ್ಜೆಗೆ ಏರಿರುವುದು ಈ ಸಿನಿಮಾದ ಹೈಲೈಟ್!
ನಂಬುನಕುಲೆಗ್ ಇಂಬು ಕೊರ್ಪುನ ದೈವ... (ನಂಬಿದವರಿಗೆ ಅಭಯ ನೀಡುವ ದೈವ) ಎಂಬುದು ಕಾಸರಗೋಡಿನಿಂದ ಉಡುಪಿಯವರೆಗೆ ವಿಸ್ತರಿಸಿರುವ ತುಳು ಭಾಷಿಕ ಪ್ರದೇಶದಲ್ಲಿ ಕೇಳಿ ಬರುವ ಜನ ಜನಿತ ಮಾತು. ಇಂಬು ಎನ್ನುವ ಶಬ್ದಾರ್ಥ ಅಭಯ, ಧೈರ್ಯ, ಆಧಾರ ಎಂಬಿತ್ಯಾದಿ. ಹಾಗಾಗಿ ತುಳುನಾಡಿನ ಭೂತಾರಾಧನೆಗೂ ಇಂಬು ಎನ್ನುವ ಶಬ್ದಕ್ಕೂ ನಂಟಿದೆ.
ಇದೇ ಶಬ್ದ ಈಗ ಇಂಬು ಆಗಿ ಬೆಳ್ಳಿ ತೆರೆಗೆ ಬರಲಿದೆ. ಕರಾವಳಿಯ ದೈವಾರಾಧನೆ, ದೈವಾರಾಧನೆಯಲ್ಲಿ ತೊಡಗಿರುವ ಜನಪದದ ಮೇಲೆ ವೈದಿಕ ಸಂಸ್ಕೃತಿಯ ಹೇರಿಕೆ, ಮುಗ್ಧತೆಯ ಹಳ್ಳಿ ಸಂಸ್ಕೃತಿ ಮೇಲೆ ಮೊಬೈಲ್ ಸಂಸ್ಕೃತಿಯ ನಿಧಾನಗತಿಯ ಪ್ರವೇಶದಿಂದಾಗುವ ವಿಪ್ಲವಗಳ ಸೂಕ್ಷ್ಮ "ಗ್ರಹಣ"ಕ್ಕೆ ಈ ಸಿನಿಮಾ "ಇಂಬು" ನೀಡಿದೆ.
"ಈ ಮಣ್ಣು" ಸಿನಿಮಾಕ್ಕಾಗಿ ರಾಜ್ಯಪ್ರಶಸ್ತಿ ಪಡೆದುಕೊಂಡ ಸಿನಿಮಾ ನಟ, ನಿರ್ದೇಶಕ ಶಿವಧ್ವಜ್ ಶೆಟ್ಟಿ ಅವರು ಕರಾವಳಿಯ ಮಣ್ಣಿನ ಗುಣವನ್ನು ತಮ್ಮ ತಾಯ್ಬಾಷೆ ಸಿನಿಮಾ "ಇಂಬು"ವಿನ ಮೂಲಕ ಪ್ರಕಟಪಡಿಸಿದ್ದಾರೆ. ಪ್ರಶಾಂತ್ ರೈ ನಿರ್ಮಾಣದ ಮೊದಲ ಚಿತ್ರ "ಇಂಬು"- ದೈವಾರಾಧನೆ, ಅದರಲ್ಲಿ ತೊಡಗಿಕೊಂಡಿರುವ ಪಾತ್ರಿ ಮತ್ತಿತರ ಪಾತ್ರಗಳ ಮೂಲಕ ನಂಬಿಕೆ-ಮೂಢನಂಬಿಕೆ, ಜಾತಿ- ಶ್ರೇಣಿ ವ್ಯವಸ್ಥೆಗಳ ಬಗ್ಗೆ ಯಾವುದೇ ಅಬ್ಬರವಿಲ್ಲದೆ ಸೂಕ್ಷ್ಮವಾಗಿ ಹೇಳುತ್ತಾ ಹೋಗಿದೆ.
ಕುಸಲ್ದರಸನ ಕಲಾತ್ಮಕ ಅಭಿನಯ
ಇಡೀ ಸಿನಿಮಾದಲ್ಲಿ ಪಾತ್ರಿಯ ಪಾತ್ರಧಾರಿ ನವೀನ್ ಡಿ. ಪಡೀಲ್ ತಮ್ಮ ಅಭಿನಯದ ಮೂಲಕ ಸಮಾಜದ ಸೂಕ್ಷ್ಮ ವಿಷಯಗಳನ್ನು ಸಂವಹನ ಮಾಡುತ್ತಲೇ ಹೋಗುತ್ತಾರೆ. ಕರಾವಳಿ ಭಾಗದ ತುಳು ಸಿನಿಮಾ, ನಾಟಕಗಳಲ್ಲಿ ಪಾತ್ರವಹಿಸಿ ಹಾಸ್ಯಪಾತ್ರಗಳ ಒಳಹೊಕ್ಕು "ಕುಸಲ್ದರಸೆ" (ಕಾಮಿಡಿ ಕಿಂಗ್) ಅನ್ವರ್ಥನಾಮ ಪಡೆದುಕೊಂಡಿರುವ ನವೀನ್ ಡಿ. ಪಡೀಲ್ ಒಬ್ಬ ಉತ್ತಮ ನಟ ಹಾಗೂ ಕಲಾತ್ಮಕ ಚಿತ್ರಗಳಲ್ಲೂ ಗಂಭೀರ ಪಾತ್ರವಹಿಸುವ ಹಾಗೂ ಒಟ್ಟು ಸಿನಿಮಾದ ಸಂದೇಶ ವಾಹಕನಾಗಿ ಅಭಿನಯಿಸಿರುವುದು ಚಿತ್ರದಲ್ಲಿ ಕಂಡುಬರುತ್ತದೆ. ದೈವದ ಪಾತ್ರಿಯಾಗಿದ್ದರೂ, ತನ್ನ ಮನೆ-ಮಗಳ ಒಳಿತಿಗಾಗಿ ಕನಸು ಕಾಣುವ ವ್ಯಕ್ತಿಯಾಗಿ, ಜತೆಗೆ ಕೋಮು ವಿಷಯಗಳಿಗೆ ಹೆಸರಾಗಿರುವ ಕರಾವಳಿಯಲ್ಲಿ ಕೋಮು ಸೌಹಾರ್ದತೆಯ ನಿಜ ತಿರುಳಿನ ರೂಪಕವಾಗಿ ನವೀನ್ ಮನೋಜ್ಞ ಅಭಿನಯ ನೀಡಿದ್ದಾರೆ ಅಥವಾ ಶಿವಧ್ವಜ್ ನಿರ್ದೇಶನವೂ ಹಾಗಿದೆ.
ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪ್ರಕಾರ, ಈ ಸಿನಿಮಾದ ಮೂಲಕ ಇತರ ಭಾಷಾ ಸಿನಿಮಾಗಳ ಅಬ್ಬರದ ನಡುವೆಯೂ ತುಳು ಸಿನಿಮಾದ ಸ್ವಂತಿಕೆಯನ್ನು ಶಿವಧ್ವಜ್ ನಿರೂಪಿಸಿದ್ದಾರೆ. ಹಾಗೆಯೇ ಭೂತಾರಾಧನೆಯಂತಹ ನೆಲದ ಸಂಸ್ಕೃತಿಗೆ ಬ್ರಾಹ್ಮಣ್ಯ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖ್ಯಾತ ನಾಟಕಕಾರ ಪ್ರೊ. ನಾ.ದಾ. ಶೆಟ್ಟಿ ಅವರು ಮಾತನಾಡಿ, ಈ ಸಿನಿಮಾದಲ್ಲಿ ಕರಾವಳಿಯಲ್ಲಿ ಕೋಮು ಸೌಹಾರ್ದತೆ ಇರುವುದನ್ನು, ಜಾತಿ, ನಂಬಿಕೆ, ಶ್ರದ್ಧೆ ಮತ್ತಿತರ ಅಂಶಗಳ ಜತೆ ತಂತ್ರಜ್ಞಾನದ ನಿಧಾನಗತಿಯ ಅನಾವರಣ.. ಹೀಗೆ ಹಲವು ವಿಷಯಗಳ ಬಗ್ಗೆ ಈ ಸಿನಿಮಾ ತಿಳಿಸುತ್ತಾ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಥಾ ಹಂದರ
ಸಾಂಪ್ರದಾಯಿಕ ಹಳ್ಳಿ ಪರಿಸರದಲ್ಲಿ ತೆರೆದು ಕೊಳ್ಳುವ ಈ ಕತೆ, ನಂಬಿಕೆ, ಆಧುನಿಕತೆ ಮತ್ತು ಮಾನವ ದೌರ್ಬಲ್ಯಗಳ ನಡುವಿನ ನಾಜೂಕು ಸಂಬಂಧವನ್ನು ಅನ್ವೇಷಿಸುತ್ತಾ ಅರಳಿಕೊಳ್ಳುತ್ತದೆ. ಕತೆಯ ನಡುವಲ್ಲಿರುವುದು ಬಾಲಣ್ಣ ಎಂಬ ದರ್ಶನ ಪಾತ್ರಿ. ತನ್ನ ಬಳಿ ಮಾರ್ಗದರ್ಶನಕ್ಕಾಗಿ ಬರುವ ಜನಸಾಮಾನ್ಯರ ಕಾರ್ಪಣ್ಯದ ಬದುಕೇ ಬಾಲಣ್ಣನ ಜಗತ್ತು. ಅವನ ಬದುಕಿನಲ್ಲೇ ಬಡತನದಂಥ ಸಾಕಷ್ಟು ಕಷ್ಟ ಕೋಟಲೆಗಳಿದ್ದರೂ, ಹುಡುಕಿಕೊಂಡು ಬರುವವರ ಪಾಲಿಗೆ ಬಾಲಣ್ಣನೆಂದರೆ ಧೈರ್ಯ, ನಂಬಿಕೆ, ಆಸರೆ. ಅನಕ್ಷರಸ್ಥ ಬಾಲಣ್ಣ ತನ್ನ ಪುಟ್ಟ ಮಗಳನ್ನು ವಿದ್ಯಾವಂತೆ ಮಾಡಲು ಪಡುವ ಶ್ರಮವನ್ನು ನೋಡಿದರೆ, ಇತರರ ಬದುಕಿನಲ್ಲಿ ಕೈಲಾದ ಬದಲಾವಣೆ ತರಬೇಕೆನ್ನುವ ಅವನ ಸಂಕಲ್ಪದ ಹುಟ್ಟು ಎಲ್ಲಿದೆಯೆಂಬುದು ತೋರುತ್ತದೆ.
ಹೀಗಿದ್ದ ಬಾಲಣ್ಣನ ಬದುಕಿನಲ್ಲಿ ಉಡುಗೊರೆಯಾಗಿ ಬಂದ ಒಂದು ಮೊಬೈಲ್ ಬಿರುಗಾಳಿಯೆಬ್ಬಿಸುತ್ತದೆ. ಬೆರಳ ತುದಿಯಲ್ಲಿ ಯಕ್ಷಗಾನವೂ ಸೇರಿದಂತೆ ಮಾಯಾಲೋಕವನ್ನೇ ತೆರೆದಿಡಬಲ್ಲ ಈ ಸಾಧನ ಅವನ ಜಗತ್ತನ್ನೇ ಬದಲಾಯಿಸುತ್ತದೆ. ಆದರೆ ತಂತ್ರಜ್ಞಾನದ ಬಗ್ಗೆ ಇದ್ದ ಅಜ್ಞಾನ ಮುಗ್ಧ ಬಾಲಣ್ಣನನ್ನು ಅಪಾಯದೆಡೆಗೂ ಕರೆದೊಯ್ಯುತ್ತದೆ. ಅಪರಿಚಿತ ಕರೆಯೊಂದು ಹೆಣೆದ ಮೋಸದ ಬಲೆಗೆ ಸಿಲುಕುವ ಬಾಲಣ್ಣನ ಪಾಲಿಗೆ ವರದಂತೆ ಕೈಗೆ ಬಂದಿದ್ದ ಮೊಬೈಲೇ ಹತಾಶೆಯತ್ತ ದೂಡುವ ಮಾರಿಯಾಗಿ ಪರಿಣಮಿಸುತ್ತದೆ. ಅದು ಹಣವೊಂದನ್ನೇ ಅಲ್ಲದೆ, ಅದುವರೆಗೆ ಹಳ್ಳಿಯಲ್ಲಿ ಬಾಲಣ್ಣ ಗಳಿಸಿದ್ದ ನಂಬಿಕೆ, ಗೌರವಗಳನ್ನೂ ದೋಚುತ್ತದೆ. ನಂಬಿ ಬಳಿ ಬರುತ್ತಿದ್ದ ಜನ ಬಾಲಣ್ಣನಲ್ಲಿ ನಂಬಿಕೆ ಕಳೆದುಕೊಳ್ಳತೊಡಗುತ್ತಾರೆ. ಕಷ್ಟ ಹೊತ್ತು ಬಂದವರ ಪ್ರಶ್ನೆಗಳಿಗೆ ಉತ್ತರ ಹೇಳಲು ಆಗದೆ ತಡವರಿಸುವ ದರ್ಶನ ಪಾತ್ರಿ ತನ್ನ ಕೆಲಸವನ್ನೂ ಬಿಟ್ಟುಕೊಡಬೇಕಾಗುತ್ತದೆ.
ವಿಶ್ವಾಸ, ನಂಬಿಕೆ ಮತ್ತು ಆಧುನಿಕತೆಯ ಅನೂಹ್ಯ ಪರಿಣಾಮಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಕತೆ ಮನ ಕಲಕುತ್ತದೆ. ಬಾಲಣ್ಣನ ಕತೆ ನೋವಿನದ್ದೇ ಆದರೂ, ಸಂಪ್ರದಾಯ ಮತ್ತು ಅಧುನಿಕತೆಗಳ ಸಂಘರ್ಷದಲ್ಲಿ ಕಳೆದುಕೊಂಡ ಶ್ರದ್ಧೆಯನ್ನು ಮರಳಿ ಕಂಡುಕೊಳ್ಳುವ ಕಥಾನಕವೂ ಹೌದು.
ಚಿತ್ರದಲ್ಲಿ ಕಥಾ ನಾಯಕ ಬಾಲಣ್ಣನಾಗಿ ನವೀನ್ ಡಿ. ಪಡೀಲ್, ಆತನ ಪತ್ನಿಯಾಗಿ ಕಾಂತಾರ ಖ್ಯಾತಿಯ ಚಂದ್ರಕಲಾ, ಮಗಳಾಗಿ ಪ್ರಶಂಸಾ, ಇತರ ಪಾತ್ರಗಳಲ್ಲಿ ಹರೀಶ್ ವಾಸು ಶೆಟ್ಟಿ, ತಮ್ಮ ಲಕ್ಷ್ಮಣ, ಶಂಕರ ಸುಳ್ಯ, ಕಾಸರಗೋಡು ಚಿನ್ನ ಮತ್ತಿತರರು ಪಾಲ್ಗೊಂಡಿದ್ದಾರೆ.