ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ
x

ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ನಿಧನ

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

ನಾನಾ ಪಾಟೇಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸಕ್ರಿಯರಾಗಿದ್ದರು. ಪರಿಂಡಾ, ಕ್ರಾಂತಿವೀರ್, ಅಬ್ ತಕ್ ಛಪ್ಪನ್ ಮತ್ತು ವೆಲ್‌ಕಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿನ ವಿಭಿನ್ನ ಹಾಗೂ ಶಕ್ತಿಯುತ ಅಭಿನಯದ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.


Click the Play button to hear this message in audio format

ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ನಿಧನರಾಗಿದ್ದಾರೆ. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಆರಂಭಿಕ ಮಾಹಿತಿಯ ಪ್ರಕಾರ ನಾನಾ ಪಾಟೇಕರ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಗೋವಾದ ನಿವಾಸದಲ್ಲಿ ಅವರು ಪ್ರಜ್ಞಾಹೀನರಾಗಿರುವುದು ಕಂಡುಬಂದ ಬಳಿಕ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಮೂಲಕ ಅವರನ್ನು ಬದುಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ. ಬೆಳಗ್ಗೆ 5.20ಕ್ಕೆ ವೈದ್ಯರು ನಾನಾ ಪಾಟೇಕರ್ ಮೃತಪಟ್ಟಿರುವುದನ್ನು ಘೋಷಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ

ನಾನಾ ಪಾಟೇಕರ್ ನಿಧನಕ್ಕೆ ಸಂಬಂಧಿಸಿದಂತೆ ಮೆಡಿಕೋ-ಲೀಗಲ್ ಪ್ರಕರಣ ದಾಖಲಿಸಲಾಗಿದೆ. ಅವರ ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರು ಹಾಗೂ ಅಧಿಕಾರಿಗಳಿಂದ ಈ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಹಲವು ದಶಕಗಳ ಸಿನಿಮಾ ಪಯಣ

ನಾನಾ ಪಾಟೇಕರ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿದ್ದರು. ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಹಲವು ದಶಕಗಳ ಕಾಲ ಅಭಿನಯಿಸಿರುವ ಅವರು ವಿಭಿನ್ನ ಹಾಗೂ ಗಂಭೀರ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಪರಿಂಡಾ, ಕ್ರಾಂತಿವೀರ್, ಅಬ್ ತಕ್ ಛಪ್ಪನ್ ಮತ್ತು ವೆಲ್‌ಕಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿನ ಅವರ ಅಭಿನಯ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಭಾರತೀಯ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ತಮ್ಮ ವಿಭಿನ್ನ ಅಭಿನಯ ಶೈಲಿ, ಗಂಭೀರ ಧ್ವನಿ ಮತ್ತು ಶಕ್ತಿಯುತ ಪಾತ್ರಗಳ ಮೂಲಕ ಅವರು ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

'ಮೀಟೂ' ಆರೋಪ

ಹಿರಿಯ ನಟ ನಾನಾ ಪಾಟೇಕರ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾದ ಘಟನೆಯೆಂದರೆ ನಟಿ ತನುಶ್ರೀ ದತ್ತಾ ಮಾಡಿದ ಲೈಂಗಿಕ ಕಿರುಕುಳದ ಆರೋಪ. 2008ರಲ್ಲಿ ಬಿಡುಗಡೆಯಾದ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ 2018ರಲ್ಲಿ ಬಹಿರಂಗವಾಗಿ ಆರೋಪಿಸಿದ್ದರು. ಈ ಆರೋಪವು ಭಾರತದಲ್ಲಿ 'ಮೀಟೂ' (#MeToo) ಅಭಿಯಾನಕ್ಕೆ ನಾಂದಿ ಹಾಡಿದ್ದಲ್ಲದೆ, ಇಡೀ ದೇಶಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು.

ಆರೋಪ ತಳ್ಳಿಹಾಕಿದ್ದ ನಾನಾ ಪಾಟೇಕರ್

ನಟಿ ತನುಶ್ರೀ ದತ್ತಾ ಮಾಡಿದ ಎಲ್ಲಾ ಆರೋಪಗಳನ್ನು ನಾನಾ ಪಾಟೇಕರ್ ಸಸಾರವಾಗಿ ನಿರಾಕರಿಸಿದ್ದರು. ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದ ನಟ, ಕಾನೂನು ಹೋರಾಟಕ್ಕೂ ಮುಂದಾಗಿದ್ದರು. ಈ ಸುದೀರ್ಘ ಪ್ರಕರಣವು ಹಲವು ವರ್ಷಗಳ ಕಾಲ ಬಾಲಿವುಡ್ ಅಂಗಳದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಕೇವಲ ಸಿನಿಮೀಯ ವಿವಾದಗಳಷ್ಟೇ ಅಲ್ಲದೆ, ನಾನಾ ಪಾಟೇಕರ್ ಅವರು ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಕುರಿತು ನೀಡುತ್ತಿದ್ದ ಹೇಳಿಕೆಗಳೂ ಸಹ ಸಾಲು ಸಾಲು ಟೀಕೆಗಳಿಗೆ ಗುರಿಯಾಗಿದ್ದವು. ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕವಾಗಿ ಅವರು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಮತ್ತು ವಿವಾದಗಳಿಗೆ ಕಾರಣವಾಗಿದ್ದವು.

Read More
Next Story