
ಮಲಯಾಳಂ ನಟ ಮೋಹನ್ಲಾಲ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಪ್ರಶಸ್ತಿಯನ್ನು ಸೆ.23ರಂದು ನಡೆಯುವ 71ನೇ ರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಮೋಹನ್ಲಾಲ್ ಅವರಿಗೆ ರಾಷ್ಟ್ರಪತಿಗಳು ವಿತರಣೆ ಮಾಡಲಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ, ಮಲಯಾಳಂನ ಖ್ಯಾತ ನಟ ಮೋಹನ್ಲಾಲ್ ಅವರು 2023ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ ಈ ಘೋಷಣೆ ಮಾಡಿದೆ.
ಕೇಂದ್ರ ಸಚಿವಾಲಯವು ತನ್ನ 'ಎಕ್ಸ್' ಖಾತೆಯಲ್ಲಿ, "ಮೋಹನ್ಲಾಲ್ ಅವರ ಸಿನಿ ಪಯಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಅವರನ್ನು ಈ ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿದೆ," ಎಂದು ತಿಳಿಸಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಿನಿ ಪಯಣದಲ್ಲಿ, ಮೋಹನ್ಲಾಲ್ ಅವರು ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ಸಹಜ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 'ತನ್ಮಾತ್ರ', 'ದೃಶ್ಯಂ', 'ವಾನಪ್ರಸ್ಥಂ', 'ಕಿರೀಡಂ', 'ಭರತಂ' ಮತ್ತು 'ಪುಲಿಮುರುಗನ್' ನಂತಹ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.
65 ವರ್ಷದ ಮೋಹನ್ಲಾಲ್ ಅವರಿಗೆ, ಸೆಪ್ಟೆಂಬರ್ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ನೀಡಲಾಗುವ ಈ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಹಿಂದೆ, ಮೋಹನ್ಲಾಲ್ ಅವರು ಅತ್ಯುತ್ತಮ ನಟನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಒಂಬತ್ತು ಕೇರಳ ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರವು ಅವರಿಗೆ 2001ರಲ್ಲಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಡಾ.ರಾಜ್ ಗೂ ಒಲಿದು ಬಂದಿತ್ತು ಫಾಲ್ಕೆ ಪ್ರಶಸ್ತಿ
ಕನ್ನಡ ಚಿತ್ರರಂಗದ ಮೇರುನಟ ವರನಟ ಡಾ.ರಾಜ್ ಕುಮಾರ್ ಅವರಿಗೂ ಕೂಡ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು 1995ರಲ್ಲಿಯೇ ಒಲಿದು ಬಂದಿತ್ತು. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ರಾಜಣ್ಣ ಭಾಜನರಾಗಿದ್ದಾರೆ. ಇನ್ನು ಮೈಸೂರು ಮೂಲದ ಖ್ಯಾತ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರಿಗೂ 2008ರಲ್ಲಿ ಈ ಪ್ರಶಸ್ತಿ ಒಲಿದು ಬಂದಿತ್ತು. ಆದರೆ ಅವರಿಗೆ ಬಾಲಿವುಡ್ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿತ್ತು.
ಸಿನಿ ರಂಗದ ಪರಮೋಚ್ಚ ಪ್ರಶಸ್ತಿ
ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕಲಾವಿದರಿಗೆ ಕೇಂದ್ರ ಸರ್ಕಾರವು ನೀಡುವ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ ಇದಾಗಿದೆ. ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೊದಲ ಬಾರಿಗೆ 1969ರಲ್ಲಿ ದೇವಿಕಾರಾಣಿ ಎಂಬ ನಟಿಗೆ ನೀಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಕೂಡ ಈ ಪ್ರಶಸ್ತಿಯನ್ನು ಪ್ರತೀ ವರ್ಷ ಕಲಾವಿದರೊಬ್ಬರಿಗೆ ಘೋಷಿಸುತ್ತಾ ಬರಲಾಗುತ್ತಿದೆ. ಈ ಪ್ರಶಸ್ತಿಯು 10 ಲಕ್ಷ ರೂಪಾಯಿ ಬಹುಮಾನ ಮತ್ತು ಸ್ವರ್ಣ ಕಮಲದ ಸ್ಮರಣಿಕೆ ಒಳಗೊಂಡಿರುತ್ತದೆ. ಇದುವರೆಗೆ 54 ಸಾಧಕರಿಗೆ ಪಾಲ್ಕೆ ಪ್ರಶಸ್ತಿ ವಿತರಿಸಲಾಗಿದೆ.