ಗಟ್ಟಿತನವಿಲ್ಲದ ಸಿದ್ದ ಸೂತ್ರದ ಚಂದನ್‌ ಶೆಟ್ಟಿಯ ʼಸೂತ್ರಧಾರಿʼ
x

ಗಟ್ಟಿತನವಿಲ್ಲದ ಸಿದ್ದ ಸೂತ್ರದ ಚಂದನ್‌ ಶೆಟ್ಟಿಯ ʼಸೂತ್ರಧಾರಿʼ

ಹಿನ್ನೆಲೆ ಸಂಗೀತ ಕೆಲವು ಸಾರಿ ಮಾತಿಗಿಂತ ಅದರದೇ ಅಬ್ಬರ ಹೆಚ್ಚಾಯಿತು ಎನಿಸುವಂತಿದೆ. ಒಂದೊಂದು ಸಾರಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಮೂವಿಯ ಹಿನ್ನೆಲೆ ಸಂಗೀತದಂತೆಯೇ ಭಾಸವಾಗುತ್ತದೆ.


ತಮ್ಮ ವಿಭಿನ್ನ ಶೈಲಿಯ ರಾಪ್ ಸಾಂಗ್‌ಗಳ ಮೂಲಕ ಯುವ ಸಮುದಾಯದಲ್ಲಿ ಕ್ರೇಜ್ ಹುಟ್ಟಿಸಿರುವ ರಾಪರ್‌ ಚಂದನ್ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಸೂತಧಾರಿಯ ಮೂಲಕ ಮೊದಲ ಬಾರಿ ನಾಯಕ ನಟರಾಗಿ ಪೇಕ್ಷಕರ ಮುಂದೆ ಬಂದಿದ್ದು, ಪೋಲಿ ಜೊತೆಗೆ ಪೊಲೀಸ್ ಆಫೀಸರ್ ಆಗಿದ್ದಾರೆ.

ಪೊಲೀಸ್ ಅಧಿಕಾರಿಯಾಗಿದ್ದರೂ ಮೇಲಧಿಕಾರಿಗಳು ಹಾಗೂ ಕಾನೂನಿಗೆ ಬೆಲೆ ಕೊಡದೇ ಅಪರಾಧಿಗಳ ವಿರುದ್ಧ ತನ್ನದೇ ಆದ ಶಿಕ್ಷೆ ನೀಡುವ ಕಾರಣದಿಂದ ಮೂರು ವರ್ಷದಲ್ಲಿ ನಾಲ್ಕು ಬಾರಿ ವರ್ಗಾವಣೆಯಾಗಿ ಹಲವಾರು ಬಾರಿ ಸಸ್ಪೆಂಡ್ ಆಗಿ ಮನೆಯಲ್ಲಿ ಕುಳಿತಿರುವ ವಿನಯ್ (ಚಂದನ್ ಶೆಟ್ಟಿ)ಗೆ ನಗರದಲ್ಲಿ ನಡೆಯುತ್ತಿರುವ ಕಿಡ್ನಾಪ್ ಪ್ರಕರಣ ಮತ್ತು ಅದರ ಸಾವಿಗೆ ಕಾರಣ ಹುಡುಕಲು ಸಸ್ಪೆಂಡ್ ಆಗಿದ್ದರೂ, ಹೋಮ್ ಮಿನಿಸ್ಟರ್ ಸೂಚನೆ ಮೇರೆಗೆ ಕಮಿಷನರ್ ಅನಧಿಕೃತವಾಗಿ ತನಿಖೆಯ ಜವಾಬ್ದಾರಿಯನ್ನು ವಿನಯ್‌ಗೆ ನೀಡುತ್ತಾರೆ.


ಪೊಲೀಸ್ ಅಧಿಕಾರಿಯಾಗಿ ಅಪರಾಧಿಯನ್ನು ಡೈರೆಕ್ಟಾಗಿ ಎನ್‌ಕೌಂಟರ್ ಮಾಡುವಷ್ಟು ಆವೇಶ ಹೊಂದಿರುವ ಅಧಿಕಾರಿಯಾದರೂ, ಆರಂಭದಲ್ಲಿ ಪೋಲಿಗಳ ರೀತಿ ಕಂಡ ಕಂಡ ಹೆಣ್ಣು ಮಕ್ಕಳನ್ನು ನೋಡಿ ಟೀಜ್ ಮಾಡುವುದು, ಸ್ವತಃ ಕಮಿಷನರ್ ಮನೆಯಲ್ಲಿಯೇ ಪರಿಚಯ ಇಲ್ಲದಿದ್ದರೂ ಅವರ ಮಗಳಿಗೆ ಲೈನ್ ಹೊಡೆಯುವುದು, ಅವರೆದುರೇ ಟೀಜ್ ಮಾಡುವುದು ಆಭಾಸದಂತೆ ಕಾಣಿಸುತ್ತದೆ.

ಪೊಲೀಸ್ ಅಧಿಕಾರಿಯನ್ನು ಪೋಲಿಯಾಗಿ ತೋರಿಸುವ ಪ್ರಯತ್ನ ತೆಲುಗಿನ ರವಿತೇಜ್ ಅವರ ಮ್ಯಾನರೀಸಂನ ನಕಲು ಮಾಡುವ ಪಯತ್ನದಂತೆ ಕಾಣಿಸುತ್ತದೆ. ತನ್ನ ತಂದೆ ಒಬ್ಬ ವಂಚಕ, ಅಪರಾಧಿ ಎನ್ನುವ ಭಾವನೆಯಲ್ಲಿಯೇ ಬೆಳೆದಿರುವ ವಿನಯ್‌ಗೆ ತನ್ನ ತಂದೆ ಪೊಲೀಸ್ ಇಲಾಖೆಗೆ ಮಾಡಿದ ಸೇವೆ ಮತ್ತು ತ್ಯಾಗದ ಕತೆಯನ್ನು ಸ್ವತಃ ಕಮಿಷನರ್ ಹೇಳಿದಾಗ ವಿನಯ್ ತನ್ನ ಪೊಲೀತನವನ್ನು ಬಿಟ್ಟು ಗಂಭೀರ ಅಧಿಕಾರಿಯಾಗಿ ಪ್ರಕರಣದ ತನಿಖೆಯನ್ನು ಕೈಗೊಳ್ಳಲು ಮುಂದಾಗುತ್ತಾನೆ. ಅಲ್ಲಿಗೆ ಚಿತ್ರ ಇಂಟರ್‌ವಲ್‌ ಬಂದು ನಿಲ್ಲುತ್ತದೆ.

ಇದೊಂದು ಕ್ರೈಮ್ ಥಿಲ್ಲರ್ ಕಥೆಯಾಗಿದ್ದು, ದ್ವಿತಿಯಾರ್ಧದಿಂದಲೇ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತ ಥಿಲ್ ಕೊಡುತ್ತ ಹೋಗುತ್ತದೆ. ಕಿಡ್ನ್ಯಾಪ್ ಆಗುವ ವ್ಯಕ್ತಿಗಳು ಎರಡು ದಿನಗಳ ನಂತರ ಬಿಡುಗಡೆಯಾದ ಎರಡು ಗಂಟೆಯಲ್ಲಿ ತಾವೇ ಆತ್ಮಹತ್ಯೆ ಮಾಡಿಕೊಳ್ಳುವ ಮಿಸ್ಟರಿಯನ್ನು ಪತ್ತೆ ಹಚ್ಚಲು, ಇದೆಲ್ಲದರ ಹಿಂದೆ ಇರುವ ಸೂತಧಾರಿ ಯಾರು ಎಂದು ಕಂಡು ಹಿಡಿಯುವುದೇ ಚಿತ್ರದ ಸಸ್ಪೆನ್ಸ್. ನಿಜವಾದ ಸೂತಧಾರಿ ಯಾರು ಎನ್ನುವುದನ್ನು ತಿಳಿಯಲು ಥೇಟರ್‌ಗೆ ಹೋಗಿ ಒಮ್ಮೆ ನೋಡಬಹುದು.


ಕಥೆ ಸ್ಯಾಂಡಲ್‌ವುಡ್ ನ ಸಿದ್ಧ ಸೂತದಲ್ಲಿಯೇ ಸಿದ್ಧವಾಗಿದ್ದು, ಚಿತ್ರ ಸಾಗುತ್ತ ಹೋದಂತೆ ಶಂಕರ್‌ನಾಗ್, ಅಂಬರೀಶ್ ಅವರ ಅನೇಕ ಚಿತ್ರಗಳು ನೆನಪಾಗುತ್ತವೆ. ಎಡಿಟಿಂಗ್‌ನಲ್ಲಿ ಇನ್ನಷ್ಟು ಆಟ ಆಡಿದ್ದರೆ ಒಂದಷ್ಟು ವೇಗ ಮತ್ತು ಇನ್ನಷ್ಟು ಥ್ರಿಲ್ ನೀಡಬಹುದಿತ್ತು. ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕ ನವರಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ ಪಾತಕ್ಕೆ ಇನ್ನಷ್ಟು ಒತ್ತು ನೀಡಬೇಕಿತ್ತು. ಚಂದನ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೈಟು, ವೇಟಿನಲ್ಲಿ ಮಸ್ತ್ ಲುಕ್ ಬಂದಿದ್ದು, ಹಾವ ಭಾವದಲ್ಲಿ ಗತ್ತು ಗಾಂಭಿರ್ಯದಲ್ಲಿ ಇನ್ನಷ್ಟು ಮಾಗಬೇಕು. ನಟಿ ಸಂಜನಾ ಆನಂದ್ ಬೋಲ್ಡ್ ಆಗಿ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ತಬಲಾ ನಾಣಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾಮಿಡಿ ಮಾಡುತ್ತಲೇ ಕಥೆಯ ತಿರುವಿಗೆ ಪ್ರಮುಖ ಪಾತಧಾರಿಯಾಗಿ ಗಮನ ಸೆಳೆಯುತ್ತಾರೆ.

ಚಿತ್ರಕ್ಕೆ ಚಂದನ್ ಶೆಟ್ಟಿ ಅವರದೇ ಸಂಗೀತ ಇರುವುದರಿಂದ ಎರಡು ಹಾಡುಗಳನ್ನು ಅವರದೇ ಶೈಲಿಯಲ್ಲಿ ಮಾಡಿದ್ದು ನೋಡುವಂತಿವೆ. ಆದರೆ, ಹಿನ್ನೆಲೆ ಸಂಗೀತ ಕೆಲವು ಸಾರಿ ಮಾತಿಗಿಂತ ಅದರದೇ ಅಬ್ಬರ ಹೆಚ್ಚಾಯಿತು ಎನಿಸುವಂತಿದೆ. ಒಂದೊಂದು ಸಾರಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಮೂವಿಯ ಹಿನ್ನೆಲೆ ಸಂಗೀತದಂತೆಯೇ ಭಾಸವಾಗುತ್ತದೆ.

Read More
Next Story