ಚಲನಚಿತ್ರ ವಿಮರ್ಶೆ| ಧೀರ ಭಗತ್‍ ರಾಯ್‍: ನೆಲಮೂಲದ ಹೋರಾಟದಲ್ಲಿ ನಾಯಕನ ವಿಜೃಂಭಣೆ
x

ಚಲನಚಿತ್ರ ವಿಮರ್ಶೆ| ಧೀರ ಭಗತ್‍ ರಾಯ್‍: ನೆಲಮೂಲದ ಹೋರಾಟದಲ್ಲಿ ನಾಯಕನ ವಿಜೃಂಭಣೆ

ಕರ್ಣನ್‌ ನಿರ್ದೇಶನದ ಈ ಚಿತ್ರದಲ್ಲಿ ರಾಕೇಶ್‍ ದಳವಾಯಿ, ಸುಚರಿತಾ, ಎಂ.ಕೆ. ಮಠ, ಶರತ್‍ ಲೋಹಿತಾಶ್ವ, ಅಶ್ವತ್ಥ್ ನೀನಾಸಂ ಮುಂತಾದವರು ತಾರಾಗಣದಲ್ಲಿದ್ದಾರೆ.


ಕಳೆದ ವರ್ಷವೇ ಭೂಸುಧಾರಣಾ ಕಾಯ್ದೆಯ ಕುರಿತಾಗಿ ದರ್ಶನ್‍ ಅಭಿನಯದ ‘ಕಾಟೇರ’ ಚಿತ್ರ ಬಂದಿತ್ತು. ಅಲ್ಲಿ ಹೋರಾಟ, ಉದ್ದೇಶ, ಕಾಳಜಿ ಎಲ್ಲವೂ ಚೆನ್ನಾಗಿತ್ತಾದರೂ, ಅಂತಿಮವಾಗಿ ನಾಯಕನ ಶೌರ್ಯ ಪ್ರದರ್ಶನವೇ ಮೇಲುಗೈ ಸಾಧಿಸಿತ್ತು. ಈ ವಾರ ಬಿಡುಗಡೆಯಾದ ‘ಧೀರ ಭಗತ್‍ ರಾಯ್‍’ ಸಹ ಅದೇ ತರಹದ ಇನ್ನೊಂದು ಚಿತ್ರ.

‘ಧೀರ ಭಗತ್‍ ರಾಯ್‍’ ಚಿತ್ರದ ಕಾಳಜಿ, ಉದ್ದೇಶ, ಒಂದು ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಎಲ್ಲವನ್ನೂ ಮೆಚ್ಚತಕ್ಕದ್ದೇ. ಆದರೆ, ಇದು ಸಾಮೂಹಿಕ ಹೋರಾಟವಾಗಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಕಾನೂನಿನ ಹೋರಾಟವಾಗಿದ್ದರೆ, ಜನರಿಗೆ ಇನ್ನಷ್ಟು ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ತ ತುಂಬುತ್ತಿತ್ತು. ಆದರೆ, ನಾಯಕ ಕೊನೆಗೆ ಮಚ್ಚು ಹಿಡಿದು, ಕಡಿದು ಕತ್ತರಿಸುವುದು ಆತನ ವೈಯಕ್ತಿಕ ದ್ವೇಷದಂತೆ ಅಂತ್ಯವಾಗುತ್ತದೆ.

‘ಕಾಟೇರ’ ಚಿತ್ರವು ಭೂಸುಧಾರಣ ಕಾಯ್ದೆ ಜಾರಿಯಾದ ಸಂದರ್ಭದ ಕಾಲಘಟ್ಟವನ್ನು ವಿವರಿಸಿದರೆ, ‘ಧೀರ ಭಗತ್‍ ರಾಯ್‍’ ಚಿತ್ರವು ನಂತರ ಕಾಲಘಟ್ಟವನ್ನು ವಿವರಿಸುತ್ತಾ ಹೋಗುತ್ತದೆ. ಆ ಕಾಯ್ದೆ ಬಂದ ನಂತರ, ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳಲಾಯಿತು, ಅದರಿಂದ ಉಳುವವರು ಏನೆಲ್ಲಾ ಕಷ್ಟಪಡಬೇಕಾಯಿತು ಎಂಬುದನ್ನು ವಿವರಿಸಲಾಗುತ್ತದೆ.

ನರಗುಂದ ಎಂಬುದೊಂದು ಸಣ್ಣ ಊರು. ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ, ಅದನ್ನು ಬಳಸಿಕೊಂಡು ಮೇಲ್ವರ್ಗದ ವರದಯ್ಯ ನೂರಾರು ಎಕರೆ ಜಮೀನನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ನಾಯಕ ರಾಜನ್‍ ಆ ಊರಿಗೆ ಬರುತ್ತಾನೆ. ಮೂಲತಃ ವಕೀಲನಾಗಿರುವ ಅವನು, ಅಲ್ಲಿನ ರೈತರ ಪರ ನಿಲ್ಲುತ್ತಾನೆ. ಅವರಿಗಾಗಿರುವ ಅನ್ಯಾಯವನ್ನು ಖಂಡಿಸಿ, ಅವರ ಪರ ಕಾನೂನು ಹೋರಾಟ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ.

ತಮಿಳಿನಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ದಮನಿತರ ಮೇಲಿನ ಶೋಷಣೆ ವಿರುದ್ಧ ಧ್ವನಿ ಎತ್ತುವ ಕೆಲವು ಚಿತ್ರಗಳು ಬಂದಿವೆ. ಅವರ ಮೇಲೆ ಸವಾರಿ ಮಾಡುವ ಮತ್ತು ಅವರ ಜೀವನದ ಜೊತೆಗೆ ಚೆಲ್ಲಾಟ ಆಡುವ ಮೇಲ್ವರ್ಗದ ಜನ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವ ಕಥೆಗಳು ಬಂದಿವೆ. ‘ಜೈ ಭೀಮ್’ ಮುಂತಾದ ಕಥೆಗಳು ಬೇರೆ ಭಾಷೆಯ ಹಲವು ಚಿತ್ರಗಳಿಗೂ ಸ್ಫೂರ್ತಿಯಾಗುತ್ತಿವೆ. ಆ ಚಿತ್ರಗಳಿಂದ ಪ್ರೇರೇಪಣೆಗೊಂಡು ಬೇರೆ ಭಾಷೆಗಳಲ್ಲೂ ಅಂತಹ ಚಿತ್ರಗಳು ಬರುತ್ತಿವೆ.

ಆದರೆ, ಅಲ್ಲಿ ಒಂದು ಜನಪರ ಹೋರಾಟವಾಗಿದ್ದು, ಒಂದು ಸಮುದಾಯದ ಹೋರಾಟವಾದ ಕಥೆಗಳು ಇಲ್ಲಿ ವೈಯಕ್ತಿಕ ಹೋರಾಟಗಳಾಗುತ್ತಿವೆ. ಹಾಗಂತ ಅಲ್ಲಿ ಕಥಾನಾಯಕನ ಅಥವಾ ಹೀರೋಗೆ ಪ್ರಾಶಸ್ತ್ಯ ಇಲ್ಲ ಎಂದಲ್ಲ. ನಾಯಕನ ಪಾತ್ರದ ಜೊತೆಗೆ ಹೋರಾಟಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ಇಲ್ಲಿ ಹಾಗಿಲ್ಲ. ‘ಧೀರ ಭಗತ್‍ ರಾಯ್‍’ ನೋಡಿದ ಪ್ರೇಕ್ಷಕನಿಗೆ ಕಾಣುವುದು ಸಾಮೂಹಿಕ ಚಳವಳಿ ಅಥವಾ ಸಮಸ್ಯೆ ವಿರುದ್ಧ ಹೋರಾಟವಲ್ಲ, ಬದಲಿಗೆ ನಾಯಕನ ವಿಜೃಂಭಣೆ ಎದ್ದು ಕಾಣುತ್ತದೆ.

ದಮನಿತರಿಗೆ ನ್ಯಾಯ ಸಿಗುವುದು ಮುಖ್ಯವಾಗುವುದರ ಜೊತೆಗೆ, ಹೇಗೆ ಸಿಗುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ. ಕಾನೂನಿನ ಮೂಲಕ ಹೋರಾಟ ಮಾಡುವ ನಾಯಕ, ಕೊನೆಗೆ ಅದನ್ನು ಮಚ್ಚಿನ ಮೂಲಕ ಮುಂದುವರೆಸುತ್ತಾನೆ. ಕಾನೂನು ಮೂಲಕ ಜನರಲ್ಲಿ ಜಾಗೃತಿ ಮತ್ತು ತಿಳವಳಿಕೆ ಮೂಡಿಸಲು ಪ್ರಾರಂಭವಾದ ಹೋರಾಟ, ಕೊನೆಗೆ ಹಿಂಸೆ ಮತ್ತು ರಕ್ತಪಾತದಲ್ಲಿ ಅಂತ್ಯವಾಗುತ್ತದೆ. ಹಾಗಾಗಿ, ಹೋರಾಟವನ್ನು ವಿಜೃಂಭಿಸಲು ಚಿತ್ರ ಮಾಡಲಾಯಿತೋ ಅಥವಾ ನಾಯಕನನ್ನು ವಿಜೃಂಭಿಸುವುದಕ್ಕೆ ಚಿತ್ರ ಮಾಡಲಾಯಿತೋ ಎಂಬ ಪ್ರಶ್ನೆಯೊಂದಿಗೆ ಪ್ರೇಕ್ಷಕ ಚಿತ್ರಮಂದಿರದಿಂದ ಹೊರನಡೆಯುವಂತಾಗುತ್ತದೆ.

ಇಲ್ಲಿ ಮುಖ್ಯವಾಗಿ ಚಿತ್ರಕಥೆಯಲ್ಲಿ ಕೆಲವು ಸಮಸ್ಯೆಗಳಿವೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ರಚಿಸಿರುವ ಕರ್ಣನ್‍, ಒಂದು ವಿಷಯ ಅಥವಾ ಸಮಸ್ಯೆಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಕಮರ್‍ಷಿಯಲ್‍ ಚಿತ್ರಗಳ ಪಾರ್ಮುಲಾಗೆ ಅನುಗುಣವಾಗಿ ಚಿತ್ರಕಥೆ ರಚಿಸಿರುವಂತೆ ಕಾಣುತ್ತದೆ. ಇಂಥಾ ಚಿತ್ರಗಳಲ್ಲಿ ಮನರಂಜನೆಗಿಂತ ಆಶಯ ಮತ್ತು ಉದ್ದೇಶ ಮುಖ್ಯ. ಮನರಂಜನೆಯ ಭರದಲ್ಲಿ ಆ ಉದ್ದೇಶವೇ ಕೆಲವೊಮ್ಮೆ ಹಿಂದೆ ಸರಿಯುತ್ತದೆ. ಹಾಗೆ ನೋಡಿದರೆ, ಚಿತ್ರ ಪ್ರಾರಂಭವಾಗುವುದೇ ದ್ವಿತೀಯಾರ್ಧದಲ್ಲಿ. ಮೊದಲಾರ್ಧದಲ್ಲಿ ಕರ್ಣನ್ ಪರಿಸರ ಸೆಟ್‍ ಮಾಡುವುದರ ಜೊತೆಗೆ ಒಂದು ಪ್ರೇಮಕಥೆ ಹೇಳುವುದರಲ್ಲಿ ಕಳೆದು ಹೋಗುತ್ತಾರೆ. ದ್ವಿತೀಯಾರ್ಧದದಲ್ಲಿ ಚಿತ್ರಕ್ಕೊಂದು ಫೋಕಸ್‍ ಸಿಗುತ್ತದೆ. ಬರೀ ಕಾಳಜಿ, ಉದ್ದೇಶವಷ್ಟೇ ಮುಖ್ಯವಲ್ಲ, ಅದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತೂ ಯೋಚನೆ ಮುಖ್ಯ. ಈ ನಿಟ್ಟಿನಲ್ಲಿ ಮುಂದಿನ ಚಿತ್ರಗಳಲ್ಲಿ ತಮ್ಮ ತಪ್ಪುಗಳ ಬಗ್ಗೆ ಕರ್ಣನ್ ಗಮನಹರಿಸಬೇಕು.


ನಾಯಕ ರಾಕೇಶ್‍ ದಳವಾಯಿ ಮತ್ತು ನಾಯಕಿ ಸುಚರಿತಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಶರತ್‍ ಲೋಹಿತಾಶ್ವ, ಅಶ್ವತ್ಥ್ ನೀನಾಸಂ, ಎಂ.ಕೆ. ಮಠ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಹಾಡುಗಳು ಮೆಲುಕು ಹಾಕುವಂತಿದೆ.

ಚಿತ್ರ ಮುಗಿದರೂ ಕಾಡುವ ಒಂದು ಪ್ರಶ್ನೆ ಎಂದರೆ, ಅದು ಚಿತ್ರಕ್ಕೆ ‘ಧೀರ ಭಗತ್‍ ರಾಯ್‍’ ಹೆಸರು ಯಾಕೆ ಇಡಲಾಗಿದೆ ಎಂದು. ಕಥೆಗೂ, ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ. ಹೋಗಲಿ ಶೀರ್ಷಿಕೆ ಇಟ್ಟಿದ್ದಕ್ಕೆ ಸಮಜಾಯಿಷಿಯೂ ಇಲ್ಲ, ಸಮರ್ಥನೆಯೂ ಇಲ್ಲ.

(ಈ ಚಿತ್ರವನ್ನು ವೈಟ್‍ಲೋಟಸ್ ಎಂಟರ್‍ಟೈನ್‍ಮೆಂಟ್‍ ಮತ್ತು ಶ್ರೀ ಓಮ್‍ ಸಿನಿ ಎಂಟರ್‍ಟೈನರ್ಸ್ ನಿರ್ಮಾಣ ಮಾಡಿದೆ.)


Read More
Next Story