ಬೆಂಗಳೂರಿನಲ್ಲಿ ಮಾಲಿವುಡ್‍; ವಿಸ್ತಾರಗೊಂಡ ಮಲಯಾಳಂ ಚಿತ್ರಗಳ ಮಾರುಕಟ್ಟೆ
x

ಬೆಂಗಳೂರಿನಲ್ಲಿ ಮಾಲಿವುಡ್‍; ವಿಸ್ತಾರಗೊಂಡ ಮಲಯಾಳಂ ಚಿತ್ರಗಳ ಮಾರುಕಟ್ಟೆ

ಸುಮಾರು 20-25 ವರ್ಷಗಳ ಹಿಂದೆ ಮಲಯಾಳಂನಲ್ಲಿ ವಯಸ್ಕರ ಚಿತ್ರಗಳ ಸಂಖ್ಯೆ ವಿಪರೀತ ಹೆಚ್ಚಾಗಿ, ಆ ಚಿತ್ರಗಳು ಬೆಂಗಳೂರಿನ ಹಲವು ಟೆಂಟ್‍ಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದವು. ಆದರೀಗ ಚಿತ್ರಣ ಬದಲಾಗಿದೆ. ಮೋಹನ್‍ ಲಾಲ್‍, ಪೃಥ್ವಿರಾಜ್‍, ಫಹಾದ್‍ ಫಾಜಿಲ್‍ ಮುಂತಾದ ಜನಪ್ರಿಯ ನಟರ ಮತ್ತು ಜನರ ಮೆಚ್ಚುಗೆ ಪಡೆದ ಚಿತ್ರಗಳು ಇಲ್ಲಿ ಬಿಡುಗಡೆಯಾಗುತ್ತವೆ.


ತೆಲುಗು ಮತ್ತು ತಮಿಳು ಚಿತ್ರಗಳ ಚಿತ್ರತಂಡಗಳು ಬೆಂಗಳೂರಿಗೆ ಬಂದು ಕರ್ನಾಟಕದಲ್ಲಿ ತಮ್ಮ ಚಿತ್ರಗಳ ಪ್ರಚಾರ ಮಾಡುವುದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮಲಯಾಳಂ ಭಾಷೆಯ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಆ ಚಿತ್ರತಂಡಗಳು ಬೆಂಗಳೂರಿಗೆ ಬಂದು ತಮ್ಮ ಚಿತ್ರಗಳ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿವೆ ಎನ್ನುವುದು ಗಮನಾರ್ಹ.

ಪೃಥ್ವಿರಾಜ್‍ ಸುಕುಮಾರನ್‍ ಅಭಿನಯದ ಮತ್ತು ನಿರ್ದೇಶನದ ‘L2E: ಎಂಪುರಾನ್’ ಚಿತ್ರವು ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರಕ್ಕೆಂದು ಪೃಥ್ವಿರಾಜ್‍ ಸುಕುಮಾರನ್‍, ಮೋಹನ್‍ ಲಾಲ್‍, ಟೊವಿನೋ ಥಾಮಸ್‍, ಮಂಜು ವಾರಿಯರ್ ಮುಂತಾದವರು ಇತ್ತೀಚೆಗೆ ಬೆಂಗಳೂರಿಗೆ ಬಂದು, ಚಿತ್ರದ ಪ್ರಚಾರ ಮಾಡಿದ್ದರು. ಈ ಚಿತ್ರವನ್ನು ಹೊಂಬಾಳೆ ಫಿಲಂಸ್‍ ಸಂಸ್ಥೆಯು ರಾಜ್ಯಾದ್ಯಂತ 1300ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದ್ದು, ಕರ್ನಾಟಕದಲ್ಲಿ ಇದುವರೆಗೂ ಯಾವುದೇ ಮಲಯಾಳಂ ಚಿತ್ರವೂ ಈ ಪ್ರಮಾಣದಲ್ಲಿ ಪ್ರದರ್ಶನ ಕಂಡಿರಲಿಲ್ಲ ಎಂಬುದು ಗಮನಾರ್ಹ.

ಮಲಯಾಳಂ ಚಿತ್ರತಂಡಗಳು ಇತ್ತೀಚೆಗೆ ತಮ್ಮ ಚಿತ್ರಗಳ ಪ್ರಚಾರಕ್ಕೆಂದು ಬೆಂಗಳೂರಿಗೆ ಬರುತ್ತಿರುವುದು ಹೊಸದೇನಲ್ಲ. ಇದಕ್ಕೂ ಮುನ್ನ ಜೋಜು ಜಾರ್ಜ್ ಅಭಿನಯದ ‘ಪಣಿ’, ಟೊವಿನೋ ಥಾಮಸ್‍ ಅಭಿನಯದ ‘ಎ.ಆರ್.ಎಂ’, ಪೃಥ್ವಿರಾಜ್‍ ಸುಕುಮಾರ್ ಅಭಿನಯದ ‘ಆಡುಜೀವಿತಂ’ ಮತ್ತು ‘ಕಡುವ’ ಚಿತ್ರಗಳಿಗೆ ಆ ಚಿತ್ರತಂಡಗಳು ಬೆಂಗಳೂರಿಗೆ ಬಂದು ಪ್ರಚಾರ ಮಾಡಿದ್ದವು. ಈ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಹಿಟ್‍ ಅಲ್ಲದಿದ್ದರೂ ಒಳ್ಳೆಯ ಗಳಿಕೆ ಕಂಡಿವೆ.

ಅತೀ ಹೆಚ್ಚು ಗಳಿಕೆ ಮಾಡಿದ ‘ಮಂಜುಮ್ಮೆಲ್‍ ಬಾಯ್ಸ್’

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಅದರಲ್ಲೂ, ಬೆಂಗಳೂರಿನಲ್ಲಿ ಮಲಯಾಳಂ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ತಯಾರಾಗುವ ಎಲ್ಲಾ ಚಿತ್ರಗಳು ಇಲ್ಲಿ ಬಿಡುಗಡೆಯಾಗುವುದಿಲ್ಲವಾದರೂ, ಕೆಲವು ಚಿತ್ರಗಳು ಇಲ್ಲಿ ಬಿಡುಗಡೆಯಾಗುತ್ತವೆ. ಮಮ್ಮೂಟ್ಟಿ, ಮೋಹನ್‍ ಲಾಲ್‍, ಪೃಥ್ವಿರಾಜ್‍, ಫಹಾದ್‍ ಫಾಜಿಲ್‍ ಮುಂತಾದ ಜನಪ್ರಿಯ ನಟರ ಮತ್ತು ಜನರ ಮೆಚ್ಚುಗೆ ಪಡೆದ ಚಿತ್ರಗಳು ಇಲ್ಲಿ ಬಿಡುಗಡೆಯಾಗುತ್ತವೆ. ಕಳೆದ ವರ್ಷ ಬಿಡುಗಡೆಯಾದ ‘ಮಂಜುಮ್ಮೆಲ್‍ ಬಾಯ್ಸ್’ ಚಿತ್ರವು ಕರ್ನಾಟಕದಲ್ಲಿ ಕರ್ನಾಟಕದಲ್ಲಿ 13 ಕೋಟಿ ರೂ. ಗಳಿಕೆ ಮಾಡಿತ್ತು ಎಂದು ಹೇಳಲಾಗುತ್ತದೆ. ಅದೇ ರೀತಿ ಫಹಾದ್‍ ಫಾಜಿಲ್‍ ಅಭಿನಯದ ‘ಆವೇಶಂ’ ಚಿತ್ರವು ಇಲ್ಲಿ 10 ಕೋಟಿ ರೂ. ಗಳಿಕೆ ಮಾಡಿದೆ. ಇದುವರೆಗೂ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘ಮಂಜುಮ್ಮೆಲ್‍ ಬಾಯ್ಸ್’ ಹೊರಹೊಮ್ಮಿದೆ.

ಬೆರಳಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಮಲಯಾಳಂ ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಹಿಂದಿ, ತಮಿಳು, ತೆಲುಗು ಚಿತ್ರಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯೇ. ಮಲಯಾಳಂ ಭಾಷಿಕರು ಹೆಚ್ಚು ಇರುವ ಕೆಲವು ಪ್ರದೇಶಗಳ ಚಿತ್ರಮಂದಿರಗಳಲ್ಲಿ ದಿನಕ್ಕೆ ಒಂದೋ, ಎರಡೋ ಪ್ರದರ್ಶನ ಕಾಣುತ್ತಿತ್ತು. ಶಿವಾಜಿನಗರದ ಸಂಗೀತ್‍, ಎಚ್‍.ಎಂ.ಟಿ ಪ್ರದೇಶದ ಎಚ್‍.ಎಂ.ಟಿ ಆಡಿಟೋರಿಯಂ, ಬೇಗೂರು ರಸ್ತೆಯ ಗೆಲ್ಯಾಕ್ಸಿ ಪ್ಯಾರಡೈಸ್‍, ಪೀಣ್ಯದ ಭಾರತಿ ಮುಂತಾದ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿತ್ತು. ಹೆಚ್ಚಾಗಿ ಮಲಯಾಳಂ ಭಾಷಿಕರೇ ಆ ಚಿತ್ರಗಳನ್ನು ನೋಡುತ್ತಿದ್ದರು. ಅದಕ್ಕೆ ಸರಿಯಾಗಿ, ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಈ ಚಿತ್ರಗಳನ್ನು ನೋಡುತ್ತಿದ್ದರು.

ವಯಸ್ಕರ ಚಿತ್ರಗಳು ಎಂಬಂತಿತ್ತು!

ಮಲಯಾಳಂ ಚಿತ್ರಗಳೆಂದರೆ ವಯಸ್ಕರ ಚಿತ್ರಗಳು ಎಂಬಂತಿತ್ತು. ಕ್ರಮೇಣ ಚಿತ್ರಣವೇ ಬದಲಾಯಿತು. ಸುಮಾರು 20-25 ವರ್ಷಗಳ ಹಿಂದೆ ಮಲಯಾಳಂನಲ್ಲಿ ವಯಸ್ಕರ ಚಿತ್ರಗಳ ಸಂಖ್ಯೆ ವಿಪರೀತ ಹೆಚ್ಚಾಗಿ, ಆ ಚಿತ್ರಗಳು ಬೆಂಗಳೂರಿನ ಹಲವು ಟೆಂಟ್‍ಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದವು. ಅದರಲ್ಲೂ ಶಕೀಲಾ, ರೇಶ್ಮಾ ಮುಂತಾದವರ ಚಿತ್ರಗಳಿಗೆ ಈ ಟೆಂಟ್‍ಗಳಲ್ಲಿ ಭಾರೀ ಬೇಡಿಕೆ ಇತ್ತು. ಮಲಯಾಳಂ ಚಿತ್ರಗಳೆಂದರೆ ವಯಸ್ಕರ ಚಿತ್ರಗಳು ಎಂಬ ಕುಖ್ಯಾತಿಯೂ ಅಂಟಿಕೊಂಡಿತ್ತು.

ಈ ಕಾಲಘಟ್ಟಕ್ಕೆ ಕೇರಳದಲ್ಲಿ ‘ಶಕೀಲ ತರಂಗಂ’ ಎಂಬ ಹೆಸರೂ ಇದೆ. ಕೆಲವು ವರ್ಷಗಳ ಕಾಲ ಶಕೀಲ ಅಭಿನಯದ ಸಾಕಷ್ಟು ವಯಸ್ಕರ ಚಿತ್ರಗಳು ಬಿಡುಗಡೆಯಾಗುವುದರ ಜೊತೆಗೆ, ಆ ಚಿತ್ರಗಳು ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಗಿ ಲಾಭ ಕಂಡಿವೆ. ಈ ಚಿತ್ರಗಳ ಮಲಯಾಳಂ ಚಿತ್ರರಂಗಕ್ಕೆ ಸಾಕಷ್ಟು ಕುಖ್ಯಾತಿ ತಂದುಕೊಟ್ಟಿದ್ದೂ ಇದೆ.

ಕೆಲವೇ ವರ್ಷಗಳಲ್ಲಿ ಬದಲಾದ ಮಲಯಾಳಂ ಚಿತ್ರಗಳ ಚಿತ್ರಣ ಕ್ರಮೇಣ ಈ ತರಹದ ಚಿತ್ರಗಳು ಕಡಿಮೆಯಾಗಿ, ಮತ್ತೆ ಮಲಯಾಳಂನಲ್ಲಿ ಕಂಟೆಂಟ್‍ ಸಿನಿಮಾಗಳು ಹೆಚ್ಚಾದವು. ‘ಉದಯನಾನುಂ ತಾರಂ’, ‘ಭ್ರಮರಂ’, ‘ಬೆಂಗಳೂರು ಡೇಸ್‍’, ‘ಉಸ್ತಾದ್‍ ಹೋಟೆಲ್‍’, ‘ತನ್ಮಾತ್ರ’, ‘ಟ್ರಾಫಿಕ್‍’, ‘ದೃಶ್ಯಂ’, ‘ಮಹೀಶಿಂಟೆ ಪ್ರತೀಕಾರಂ’, ‘ಮುಂಬೈ ಪೊಲೀಸ್‍’, ‘ಟ್ರಾನ್ಸ್’, ‘ಅಯ್ಯಪನುಂ ಕೋಶಿಯಂ’, ‘ಡ್ರೈವಿಂಗ್‍ ಲೈಸೆನ್ಸ್’, ‘ಕುಂಬಳಾಂಗಿ ನೈಟ್ಸ್’, ‘ತೊಂಡಿ ಮುತ್ತಲುಂ ದೃಕ್ಷಾಕ್ಷಿಯುಂ’ ಮುಂತಾದ ಚಿತ್ರಗಳ ಮಲಯಾಳಂ ಚಿತ್ರರಂಗಕ್ಕಿದ್ದ ಕುಖ್ಯಾತಿಯನ್ನೇ ಅಳಿಸಿ ಹಾಕಿದವು. ಮಲಯಾಳಂ ಚಿತ್ರಗಳೆಂದರೆ ಅದು ಬರೀ ವಯಸ್ಕರಿಗೆ ಮಾತ್ರ ಎನ್ನುವಂತಹ ಅಪಖ್ಯಾತಿಯನ್ನು ಈ ಎಲ್ಲಾ ಚಿತ್ರಗಳು ಅಳಿಸಿ ಹಾಕುವುದರ ಜೊತೆಗೆ, ಮಲಯಾಳಂ ಚಿತ್ರಗಳೆಂದರೆ ಎಲ್ಲರಿಗೂ ಸಲ್ಲುವಂತಹ ಕಂಟೆಂಟ್‍ ಚಿತ್ರಗಳು ಎಂದು ಈ ಚಿತ್ರಗಳು ತೋರಿಸಿಕೊಟ್ಟವು.

ಬದಲಾವಣೆಯಲ್ಲಿ ಓಟಿಟಿ, ಲಾಕ್‍ಡೌನ್‍ ಮಹತ್ವದ ಪಾತ್ರ ಹೀಗೆ ಚಿತ್ರಣ ಬದಲಾಗುವುದಕ್ಕೆ ಮಲಯಾಳಂ ಚಿತ್ರರಂಗದ ಪ್ರಯೋಗಶೀಲತೆ ಒಂದು ಕಾರಣವೆಂದರೆ, ಲಾಕ್‍ಡೌನ್‍ ಮತ್ತು ಓಟಿಟಿ ಸಹ ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ತಪ್ಪಿಲ್ಲ. ಮಲಯಾಳಂ ಚಿತ್ರಗಳಲ್ಲಿ ಎಷ್ಟೇ ಪ್ರಯೋಗವಾದರೂ, ಏನೇ ಬದಲಾವಣೆಯಾದರೂ ಅದು ಓಟಿಟಿ ಕ್ರಾಂತಿಗೂ ಮುನ್ನ ಕೇರಳಕ್ಕೆ ಸೀಮಿತವಾಗಿತ್ತು. ಹೆಚ್ಚೆಂದರೆ ಅಕ್ಕಪಕ್ಕದ ರಾಜ್ಯಗಳಿಗೆ ಗೊತ್ತಿತ್ತು. ಯಾವಾಗ ಕೋವಿಡ್‍ ಲಾಕ್‍ಡೌನ್‍ನಿಂದ ಜನ ಮನೆಯಲ್ಲಿ ಕುಳಿತು ಬಿಡುವಿನಲ್ಲಿ ಓಟಿಟಿಯಲ್ಲಿ ಮಲಯಾಳಂ ಚಿತ್ರಗಳನ್ನು ನೋಡಿದರೋ, ಆಗ ಅವರಿಗೆ ಅಲ್ಲಿನ ಬದಲಾವಣೆ ಅರ್ಥವಾಗ ತೊಡಗಿತು. ಅಲ್ಲಿ ಎಂತಹ ಚಿತ್ರಗಳು ಬರುತ್ತಿವೆ ಎಂದ ಗೊತ್ತಾಯಿತು. ಬರೀ ದಕ್ಷಿಣ ಭಾರತದಲ್ಲಷ್ಟೇ ಅಲ್ಲ, ಉತ್ತರ ಭಾರತದಲ್ಲೂ ಮಲಯಾಳಂ ಚಿತ್ರಗಳಿಗೆ ದೊಡ್ಡ ಪ್ರೇಕ್ಷಕ ವರ್ಗ ಹುಟ್ಟಿಕೊಂಡಿತು. ಇನ್ನು, ಕರ್ನಾಟಕದಲ್ಲಿ ಬರೀ ಮಲಯಾಳಂ ಭಾಷಿಕರಿಗೆ ಮಾತ್ರ ಸೀಮಿತವಾಗಿದ್ದ ಮಲಯಾಳಂ ಚಿತ್ರಗಳನ್ನು ಕನ್ನಡಿಗರೂ ದೊಡ್ಡ ಮಟ್ಟದಲ್ಲಿ ನೋಡತೊಡಗಿದರು.

ಮಲಯಾಳಂ ಬೆಂಗಳೂರಿನ ಒಂದು ಭಾಗ

ಮಲಯಾಳಂ ಚಿತ್ರಗಳಲ್ಲಿ ಬೆಂಗಳೂರು ಒಂದು ಭಾಗವಾದಾಗ ಬರೀ ವಿಭಿನ್ನ ಪ್ರಯೋಗಗಳಷ್ಟೇ ಅಲ್ಲ, ಬೇರೆ ರಾಜ್ಯಗಳ ಪ್ರಾದೇಶಿಕತೆಗೆ ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ನೀಡಲಾಗಿದ್ದು ಸಹ ಪ್ರೇಕ್ಷಕರನ್ನು ಸೆಳೆಯುವಲ್ಲಿ ಒಂದು ಪ್ರಮುಖ ಕಾರಣವಾಗಿತ್ತು. 80ರ ದಶಕದ ಕೊನೆಯಲ್ಲೇ ಮೋಹನ್‍ ಲಾಲ್‍ ಅಭಿನಯದ ‘ವಂದನಂ’ ಎಂಬ ಚಿತ್ರವನ್ನು ಸಂಪೂರ್ಣ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನಂತರದ ವರ್ಷಗಳಲ್ಲಿ ಹಲವು ಚಿತ್ರಗಳನ್ನು ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣವೆಂದರೆ ಬರೀ ಹಾಡಿಗಾಗಿ ಸೀಮಿತವಲ್ಲ. ಬೆಂಗಳೂರು ಕಥೆಯ ಒಂದು ಭಾಗವಾದ ಕೆಲವು ಚಿತ್ರಗಳಿವೆ. ‘ಬೆಂಗಳೂರು ಡೇಸ್‍’, ‘ಆವೇಶಂ’, ‘100 ಡೇಸ್‍ ಆಫ್‍ ಲವ್‍’, ‘ಬಟರ್‌ಫ್ಲೈಸ್‌’, ‘ಆಫೀಸರ್ ಆನ್‍ ಡ್ಯೂಟಿ’ ಮುಂತಾದ ಹಲವು ಚಿತ್ರಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇವೆಲ್ಲವೂ ಬೆಂಗಳೂರಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಒಳ್ಳೆಯ ಚಿತ್ರಗಳನ್ನು ಕೊಟ್ಟರೆ, ಪ್ರೇಕ್ಷಕನಿಗೆ ಭಾಷೆಯ ಹಂಗಿಲ್ಲ

ಇವೆಲ್ಲದರಿಂದ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಮಲಯಾಳಂ ಚಿತ್ರಗಳಿಗೆ ಒಂದು ದೊಡ್ಡ ಪ್ರೇಕ್ಷಕ ವರ್ಗವಿದೆ. ಈ ಕುರಿತು ಮಾತನಾಡುವ ವಿತರಕ ಮಾರ್ಸ್ ಸುರೇಶ್‍, ‘ಒಂದು ಕಾಲಕ್ಕೆ ಮಲಯಾಳಂ ಚಿತ್ರಗಳೆಂದರೆ ವಯಸ್ಕರ ಚಿತ್ರಗಳು, ಅದನ್ನು ನೋಡಿದರೆ ತಪ್ಪು ಮಾಡಿದಂತೆ, ನಾಚಿಕೆಗೇಡಿನ ವಿಷಯ ಎಂದೆಲ್ಲಾ ಹೇಳಲಾಗುತ್ತಿತ್ತು. ಅದಕ್ಕೆ ಸರಿಯಾಗಿ ಕೆಲವು ಚಿತ್ರಗಳಿಂದ, ಇಡೀ ಚಿತ್ರರಂಗಕ್ಕೆ ಕಳಂಕ ಎದುರಾಗಿತ್ತು. ಆದರೆ, ಚಿತ್ರರಂಗ ವ್ಯವಸ್ಥಿತವಾಗಿ ಆ ಕಳಂಕವನ್ನು ತೊಡೆದು ಹಾಕುವುದರ ಜೊತೆಗೆ, ಪರಿಸ್ಥಿತಿಯನ್ನು ಬದಲಾಯಿಸಿ, ಒಳ‍್ಳೆಯ ಚಿತ್ರಗಳು ಬರುವುದಕ್ಕೆ ಕಾರಣವಾಯಿತು. ಇವತ್ತು ಮಲಯಾಳಂ ಚಿತ್ರಗಳನ್ನು ನೊಡುವುದು ಹೆಮ್ಮೆಯ ವಿಷಯವಾಗಿದೆ. ಪ್ರೇಕ್ಷಕ ಬುದ್ಧಿವಂತನಾಗಿದ್ದಾನೆ. ಒಳ್ಳೆಯ ಚಿತ್ರಗಳನ್ನು ಕೊಟ್ಟರೆ, ಆತ ಭಾಷೆಯ ಹಂಗಿಲ್ಲದೆ ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾನೆ. ಮಲಯಾಳಂನಲ್ಲಿ ಗಮನ ಸೆಳೆಯುವ ಚಿತ್ರಗಳು ಬರುತ್ತಿರುವುದರಿಂದ ಸಹಜವಾಗಿಯೇ ಆ ಚಿತ್ರಗಳನ್ನು ನೋಡುತ್ತಿದ್ದಾನೆ’ ಎನ್ನುತ್ತಾರೆ.

ಮಲಯಾಳಂ ಚಿತ್ರ ವೀಕ್ಷಣೆಗೆ ಶಾಲೆಗೇ ರಜೆ!

ಒಟ್ಟಿನಲ್ಲಿ ಮಲಯಾಳಂ ಚಿತ್ರಗಳಿಗೆ ಕರ್ನಾಟಕದಲ್ಲಿ ಕೆಲವು ವರ್ಷಗಳಿಂದಿತ್ತೀಚೆಗೆ ದೊಡ್ಡ ಪ್ರೇಕ್ಷಕವರ್ಗ ಹುಟ್ಟುಕೊಂಡಿದೆ. ‘L2E: ಎಂಪುರಾನ್’ ವಿಷಯವನ್ನೇ ತೆಗೆದುಕೊಂಡರೆ, ಇಂದು ರಾಜರಾಜೇಶ್ವರಿ ನಗರದ ಗುಡ್‍ ಶೆಪರ್ಡ್ ಇನ್‍ಸ್ಟಿಟ್ಯೂಷನ್ಸ್ ಸಂಸ್ಥೆಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕವೃಂದಕ್ಕೆ ಚಿತ್ರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಕಾಲೇಜಿಗೆ ರಜೆ ನೀಡಿತ್ತು. ನರ್ಸಿಂಗ್‍ ಮತ್ತು ಅರೆವೈದ್ಯಕೀಯ ತರಬೇತಿ ನೀಡುವ ಮತ್ತು ಮಲಯಾಳಿಗಳೇ ಹೆಚ್ಚಿರುವ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಚಿತ್ರ ವೀಕ್ಷಿಸಲು ಅನುಕೂಲವಾಗುವಂತೆ ರಾಜರಾಜೇಶ್ವರಿ ನಗರದ ವೈ.ಜಿ.ಆರ್ ಮಾಲ್‍ನಲ್ಲಿ ಚಿತ್ರ ವೀಕ್ಷಿಸಲು ಅನುಕೂಲವಾಗುವಂತೆ ಎರಡು ಸ್ಕ್ರೀನ್‍ಗಳನ್ನು ಅಧಿಕೃತವಾಗಿ ಬುಕ್‍ ಮಾಡಿತ್ತು.

ಬರೀ ಮಲಯಾಳಿಗಳಷ್ಟೇ ಅಲ್ಲ, ಕನ್ನಡಿಗರು ಸಹ ದೊಡ್ಡ ಸಂಖ್ಯೆಯಲ್ಲಿ ಮಲಯಾಳಂ ಚಿತ್ರಗಳನ್ನು ನೋಡುತ್ತಿದ್ದಾರೆ. ಇಷ್ಟು ದಿನ ಮಲಯಾಳಂ ಚಿತ್ರಗಳು ಇಲ್ಲಿ ಬಿಡುಗಡೆಯಾಗುತ್ತಿದ್ದರೂ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಂತೆ ಕನ್ನಡಕ್ಕೆ ದೊಡ್ಡ ಪೈಪೋಟಿಯಾಗಿರಲಿಲ್ಲ. ಮುಂದೆ ಕನ್ನಡ ಚಿತ್ರಗಳು, ಮಲಯಾಳಂ ಚಿತ್ರಗಳಿಂದಲೂ ಪೈಪೋಟಿ ಎದುರಿಸುವ ಕಾಲ ಬಂದರೆ ಆಶ್ಚರ್ಯವಿಲ್ಲ.

Read More
Next Story