ಭಾರತದಲ್ಲಿ ಫೆ.18ರಿಂದ ಮಾರ್ಚ್ 9ರವರೆಗೆ ವಿಶ್ವ ಸುಂದರಿ ಸ್ಪರ್ಧೆ
71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಮೂಲಕ ದಶಕಗಳ ನಂತರ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ದೇಶಕ್ಕೆ ಮರಳುತ್ತಿದೆ.
ಹೊಸದಿಲ್ಲಿ: ಈ ಬಾರಿ ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.
1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯ ಬಾರಿಗೆ ಆಯೋಜಿಸಿತ್ತು ಇದಾದ ಮೂರು ದಶಕಗಳ ನಂತರ ಈ ಸ್ಪರ್ಧೆ ಭಾರತದಲ್ಲಿ ನಡೆಯುತ್ತಿದೆ.
ಫೆಬ್ರವರಿ 9 ರಂದು ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದಿಂದ ದೆಹಲಿಯಲ್ಲಿ ಉದ್ಘಾಟನಾ ಸಮಾರಂಭ ಮತ್ತು ಇಂಡಿಯಾ ವೆಲ್‌ಕಮ್ ದಿ ವಲ್ಡ್ ಗಾಲಾ ಪ್ರದರ್ಶನ ನಡೆಯಲಿದೆ. ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ ಮತ್ತು ಪ್ರಪಂಚದಾದ್ಯಂತ ಪ್ರಸಾರವಾಗಲಿದೆ.
ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದ್ದು, ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಸ್ತುತ ವಿಶ್ವ ಸುಂದರಿ ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ, ಮಾಜಿ ವಿಜೇತರಾದ ಟೋನಿ ಆನ್ ಸಿಂಗ್ (ಜಮೈಕಾ), ವನೆಸ್ಸಾ ಪೊನ್ಸ್ ಡಿ ಲಿಯಾನ್ (ಮೆಕ್ಸಿಕೊ), ಮಾನುಷಿ ಚಿಲ್ಲರ್ (ಭಾರತ) ಮತ್ತು ಸ್ಟೆಫನಿ ಡೆಲ್ ಸುದ್ದಿಘೋಷ್ಠಿಯಲ್ಲಿ ತಿಳಿಸಿದರು.
ಭಾರತದ ಮೇಲಿನ ನನ್ನ ಪ್ರೀತಿ ರಹಸ್ಯವಾಗಿಲ್ಲ. ಭಾರತದಲ್ಲಿ 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಬಹಳಷ್ಟು ಅರ್ಥಪೂರ್ಣವಾಗಿದೆ. ಭಾರತದಲ್ಲಿ ಸ್ಪರ್ಧೆ ಆಯೋಜನೆ ನಿಟ್ಟಿನಲ್ಲಿ ಜಮಿಲ್ ಸೈದಿ ಅವರ ಕಠಿಣ ಪ್ರಯತ್ನಗಳಿಗಾಗಿ ಧನ್ಯವಾದಗಳು. 71ನೇ ಆವೃತ್ತಿಗೆ ನಾವು ಅತ್ಯುತ್ತಮ ತಂಡವನ್ನು ಒಟ್ಟುಗೂಡಿಸಿದ್ದೇವೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತವು ಈ ಹಿಂದೆ 1996 ರಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿತ್ತು. 2017 ರಲ್ಲಿ ಕಿರೀಟವನ್ನು ಪಡೆದಿರುವ ಮಾನುಷಿ ಛಿಲ್ಲರ್ ಅವರು ಸ್ಪರ್ಧೆಯನ್ನು ಗೆದ್ದ ಇತ್ತೀಚಿನ ಭಾರತೀಯರಾಗಿದ್ದರು. ಇದಕ್ಕೂ ಮೊದಲು, ರೀಟಾ ಫರಿಯಾ ಪೊವೆಲ್, ಐಶ್ವರ್ಯಾ ರೈ, ಡಯಾನಾ ಹೇಡನ್, ಯುಕ್ತಾ ಮುಖಿ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.