
ಸ್ಮೃತಿ ಇರಾನಿ
'ಕ್ಯುಂಕಿ ಸಾಸ್ ಭೀ ಕಭೀ ಬಹು ಥಿ- 2' ಪ್ರೋಮೊದಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್
ಬಿಡುಗಡೆಯಾದ ಪ್ರೋಮೋದಲ್ಲಿ ಬಿಲ್ ಗೇಟ್ಸ್ ಅವರು ವಿಡಿಯೋ ಕಾಲ್ ಮೂಲಕ ಸ್ಮೃತಿ ಇರಾನಿ ಅವರ ಜನಪ್ರಿಯ ಪಾತ್ರ 'ತುಳಸಿ'ಯೊಂದಿಗೆ ಸಂವಾದ ನಡೆಸುತ್ತಿರುವುದು ಕಂಡುಬರಲಿದೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇದೇ ಮೊದಲ ಬಾರಿಗೆ ಭಾರತೀಯ ದೂರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಮತ್ತು ರಾಜಕಾರಣಿ ಸ್ಮೃತಿ ಇರಾನಿ ಅವರ ಜನಪ್ರಿಯ ಧಾರಾವಹಿ 'ಕ್ಯುಂಕಿ ಸಾಸ್ ಭೀ ಕಭೀ ಬಹು ಥಿ -2' ನಲ್ಲಿ ಬಿಲ್ ಗೇಟ್ಸ್ ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುತೂಹಲಕಾರಿ ಸಂಚಿಕೆಯ ಪ್ರೋಮೋವನ್ನು ಧಾರಾವಾಹಿ ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ಸಂಚಿಕೆಯು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ತುಳಸಿಗೆ 'ಜೈ ಶ್ರೀ ಕೃಷ್ಣ' ಎಂದ ಬಿಲ್ ಗೇಟ್ಸ್
ಬಿಡುಗಡೆಯಾದ ಪ್ರೋಮೋದಲ್ಲಿ, ಬಿಲ್ ಗೇಟ್ಸ್ ಅವರು ವಿಡಿಯೋ ಕಾಲ್ ಮೂಲಕ ಸ್ಮೃತಿ ಇರಾನಿ ಅವರ ಜನಪ್ರಿಯ ಪಾತ್ರ 'ತುಳಸಿ'ಯೊಂದಿಗೆ ಸಂವಾದ ನಡೆಸುತ್ತಿರುವುದು ಕಂಡುಬರುತ್ತದೆ.
"ಜೈ ಶ್ರೀ ಕೃಷ್ಣ" ಎಂದು ತುಳಸಿಗೆ ಶುಭಾಶಯ ಕೋರಿದ ಬಿಲ್ ಗೇಟ್ಸ್ ಅವರನ್ನು ಸ್ಮೃತಿ ಇರಾನಿ ಸ್ವಾಗತಿಸಿದರು. "ನೀವು ನೇರವಾಗಿ ಅಮೆರಿಕಾದಿಂದ ನನ್ನ ಕುಟುಂಬದೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ತಿಳಿದು ತುಂಬಾ ಸಂತೋಷವಾಯಿತು. ನಾವೆಲ್ಲರೂ ನಿಮಗಾಗಿ ಕಾತರದಿಂದ ಕಾಯುತ್ತಿದ್ದೇವೆ," ಎಂದು ತುಳಸಿ (ಸ್ಮೃತಿ ಇರಾನಿ) ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಬಿಲ್ ಗೇಟ್ಸ್, "ಥ್ಯಾಂಕ್ ಯೂ ತುಳಸಿ ಜೀ" ಎಂದು ಹೇಳಿದ್ದಾರೆ.
ಈ ವಿಶೇಷ ಸಂಚಿಕೆಯ ಕುರಿತು ಮಾತನಾಡಿರುವ ಸ್ಮೃತಿ ಇರಾನಿ ಅವರು, "ತಾಯಿ ಮತ್ತು ಮಕ್ಕಳ ಆರೋಗ್ಯದಂತಹ ಪ್ರಬಲ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ನಮ್ಮೊಂದಿಗೆ ವಿಶೇಷ ಅತಿಥಿ ಇರುತ್ತಾರೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಿದೆ" ಎಂದು ಹೇಳಿದ್ದಾರೆ.
ಈ ಸಹಯೋಗದ ಕುರಿತು ವಿವರಿಸಿದ ಅವರು, "ಇದು ಅತ್ಯಂತ ಜನಪ್ರಿಯ ವೇದಿಕೆಯಾಗಿದೆ. ತಾಯಿ ಮತ್ತು ಮಕ್ಕಳ ಆರೋಗ್ಯದ ವಿಷಯವನ್ನು ಮುಂದುವರಿಸಲು ಬಿಲ್ ಗೇಟ್ಸ್ ಮತ್ತು ಅವರ ಪ್ರತಿಷ್ಠಾನದ ಸಹಯೋಗ ಕೇಳಿದೆ. ಇದನ್ನು ಒಪ್ಪಿಕೊಂಡಿದ್ದಕ್ಕಾಗಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಸಹಯೋಗವು ಶೀಘ್ರದಲ್ಲೇ ಪರದೆಯ ಮೇಲೆ ಬರಲಿದೆ," ಎಂದು ತಿಳಿಸಿದರು.
ಈ ಸಂಚಿಕೆಯು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಲೋಕೋಪಕಾರಿ ಕೆಲಸಗಳಿಗೆ ಸಂಬಂಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ಪ್ರೋಮೋಗೆ ನೆಟ್ಟಿಗರು ಅತ್ಯಂತ ಉತ್ಸುಕತೆಯಿಂದ ಪ್ರತಿಕ್ರಿಯಿಸಿದ್ದು, "ಯಾರೂ ನಿರೀಕ್ಷಿಸದಂತಹ ಅದ್ಭುತ ಸಹಯೋಗವಿದು!" ಮತ್ತು "ಎಲ್ಲ ಕೆಎಸ್‌ಬಿಕೆಬಿ (KSBKBT) ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣ" ಎಂದು ಕಾಮೆಂಟ್ ಮಾಡಿದ್ದಾರೆ.
ಬಿಲ್ ಗೇಟ್ಸ್ ಅವರು ಕಾಣಿಸಿಕೊಳ್ಳಲಿರುವ ಈ ವಿಶೇಷ ಸಂಚಿಕೆ ಇಂದು ರಾತ್ರಿ 10.30ಕ್ಕೆ ಸ್ಟಾರ್ ಪ್ಲಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ.