ಮಯೂರ ವರ್ಮನಾದ ಪುನೀತ್‍ ರಾಜಕುಮಾರ್; ‘ಮಾರಿಗಲ್ಲು’ ವೆಬ್‍ ಸರಣಿಯಲ್ಲಿ ಎಐಮೂಲಕ ಸೃಷ್ಟಿ
x

ಮಯೂರ ವರ್ಮನಾದ ಪುನೀತ್‍ ರಾಜಕುಮಾರ್; ‘ಮಾರಿಗಲ್ಲು’ ವೆಬ್‍ ಸರಣಿಯಲ್ಲಿ ಎಐಮೂಲಕ ಸೃಷ್ಟಿ

ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇದರಲ್ಲಿ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ಈ ಸರಣಿ ತಿಳಿಸುತ್ತದೆ. ಆ ಕಾಲವನ್ನು Artificial Intelligence (AI) ಮೂಲಕ ಸೃಷ್ಟಿಸಲಾಗಿದೆ. ಕ


ಕೆಲವು ವರ್ಷಗಳ ಹಿಂದೆ ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‍ ಅವರನ್ನು ಸೃಷ್ಟಿಸಲಾಗಿತ್ತು. ‘ರಾಜಾ ಸಿಂಹ’ ಎಂಬ ಅನಿರುದ್ಧ್ ಅಭಿನಯದ ಚಿತ್ರದಲ್ಲಿ ‘ಸಿಂಹಾದ್ರಿಯ ಸಿಂಹ’ ಚಿತ್ರದಲ್ಲಿನ ನರಸಿಂಹೇಗೌಡರ ವಿಷ್ಣುವರ್ಧನ್‍ ಅಭಿನಯಿಸಿದ ಪಾತ್ರವನ್ನು ಮತ್ತೊಮ್ಮೆ ಸೃಷ್ಟಿಸಲಾಗಿತ್ತು. ಇದೀಗ ಪುನೀತ್‍ ರಾಜಕುಮಾರ್‍ ಸಹ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ, ‘ಮಯೂರ’ ಚಿತ್ರದಲ್ಲಿ ಕದಂಬರ ದೊರೆ ಮಯೂರ ವರ್ಮನ ಪಾತ್ರವನ್ನು ಡಾ. ರಾಜಕುಮಾರ್‍ ನಿರ್ವಹಿಸಿದ್ದರು. ಈಗ ಮಯೂರ ವರ್ಮನಾಗಿ ಪುನೀತ್‍ ‘ಮಾರಿಗಲ್ಲು’ ಎಂಬ ವೆಬ್‍ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮಯೂರ ವರ್ಮನ ಪಾತ್ರವನ್ನು AI ಮೂಲಕ ಸೃಷ್ಟಿ ಮಾಡಲಾಗಿದೆ.

Zee5 ಹಾಗೂ PRK ಪ್ರೊಡಕ್ಷನ್ಸ್‌ನ ಸಹಯೋಗದಲ್ಲಿ ‘ಮಾರಿಗಲ್ಲು' ಎಂಬ ಹೊಸ ವೆಬ್ ಸರಣಿ ಇದೇ ತಿಂಗಳ 31ರಿಂದ Zee5ನಲ್ಲಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ. ಅದಕ್ಕೂ ಮೊದಲು ಈ ವೆಬ್ ಸರಣಿಯ ಟೀಸರ್ ಅನಾವರಣಗೊಂಡಿದೆ.‌ ನಟ ಧನಂಜಯ ನಿರೂಪಣೆಯ ಮೂಲಕ ಶುರುವಾಗುವ ಟೀಸರ್‌ನಲ್ಲಿ, ಕದಂಬ ರಾಜವಂಶದ ಸ್ಥಾಪಕ ಮತ್ತು ಕರ್ನಾಟಕದ ಮೊದಲ ರಾಜ ಮಯೂರ ವರ್ಮನ ಪಾತ್ರದಲ್ಲಿ ದಿವಂಗತ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ.

ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇದರಲ್ಲಿ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ಈ ಸರಣಿ ತಿಳಿಸುತ್ತದೆ. ಆ ಕಾಲವನ್ನು Artificial Intelligence (AI) ಮೂಲಕ ಸೃಷ್ಟಿಸಲಾಗಿದೆ. ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿ ಹುಡುಗರ ಸುತ್ತ ಈ ಸರಣಿ ಸುತ್ತುತ್ತದೆ. ನಂಬಿಕೆ, ಸ್ವಾರ್ಥ, ದುರಾಸೆಯ ಕಥೆ ಇರುವ ಈ ಸರಣಿಯಲ್ಲಿ ಶಿರಸಿಯ ಪ್ರಖ್ಯಾತ ಬೇಡರ ವೇಷ ವೆಬ್ ಸೀರೀಸ್ ನಲ್ಲಿ ವಿಶೇಷವಾಗಿ ಕಾಣ ಸಿಗುತ್ತದೆ.

ಈ ಸರಣಿಯ ಕುರಿತು ಮಾತನಾಡಿರುವ ನಿರ್ಮಾಪಕಿ ಅಶ್ವಿನಿ ಪುನೀತ್‍ ರಾಜಕುಮಾರ್, ‘ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ‘ಮಾರಿಗಲ್ಲು’ ವಿಶೇಷವಾದ ಸ್ಥಾನ ಪಡೆಯುತ್ತದೆ. ಏಕೆಂದರೆ, ಇದು ಅಪ್ಪು ಅವರ ಕನಸುಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ ಸರಣಿಯ ಜಾಗಕ್ಕೆ ಕೊಂಡೊಯ್ಯಲು ಬಯಸುತ್ತಿದ್ದರು. ‘ಮಾರಿಗಲ್ಲು’ ಮೂಲಕ, ನಾವು ಆ ದೃಷ್ಟಿಯನ್ನು ಜೀವಂತಗೊಳಿಸಲು ಪ್ರಯತ್ನಿಸಿದ್ದೇವೆ. ಇದು ನಿಗೂಢತೆ, ಭಕ್ತಿ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಸಾರವನ್ನು ಹೊಂದಿರುವ ಸರಣಿ’ ಎಂದು ಹೇಳಿದ್ದಾರೆ.

ಈ ಸರಣಿಯಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್, ‘ಡ್ರಾಮಾ ಜೂನಿಯರ್ಸ್’ ಮೂಲಕ ಖ್ಯಾತಿ ಗಳಿಸಿರುವ ಎ.ಎಸ್. ಸೂರಜ್, ಪ್ರಶಾಂತ್ ಸಿದ್ದಿ ಮತ್ತು ನಿನಾದ ಹೃತ್ಸಾ ಮುಂತಾದವರು ನಟಿಸಿದ್ದಾರೆ. ಈ ಸರಣಿಯನ್ನು ದೇವರಾಜ್ ಪೂಜಾರಿ ಬರೆದು ನಿರ್ದೇಶಿಸಿದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನವಿದೆ.

Read More
Next Story