
ಮಣಿಪುರದ ಮಣ್ಣಿನ ಕಥೆಯಾದ 'ಬೂಂಗ್' ಸಿನಿಮಾ 2024ರ ಟೊರೊಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಈ ಚಿತ್ರ.
ಬಾಫ್ಟಾ ಪ್ರಶಸ್ತಿ ಗೆದ್ದ ಮಣಿಪುರಿ ಚಿತ್ರ ‘ಬೂಂಗ್’| ಪ್ರಧಾನಿ ಮೋದಿ ಅಭಿನಂದನೆ
ಪ್ರಧಾನಿಯವರ ಈ ಸಂದೇಶಕ್ಕೆ ಚಿತ್ರದ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಕೃತಜ್ಞತೆ ಸಲ್ಲಿಸಿದ್ದು, ಇದು ಚಿತ್ರತಂಡದ ಶ್ರಮಕ್ಕೆ ಸಿಕ್ಕ ದೊಡ್ಡ ಮನ್ನಣೆ ಎಂದು ಬಣ್ಣಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಬಾಫ್ಟಾ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಮಣಿಪುರಿ ಭಾಷೆಯ ‘ಬೂಂಗ್’ ಚಿತ್ರವು ಈ ವರ್ಷದ ‘ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶೇಷವೆಂದರೆ, ಈ ಬಾರಿಯ ಭಾಫ್ಟಾ ಪ್ರಶಸ್ತಿ ರೇಸ್ನಲ್ಲಿದ್ದ ಏಕೈಕ ಭಾರತೀಯ ಚಿತ್ರ ಇದಾಗಿದ್ದು, ಹಾಲಿವುಡ್ ಚಿತ್ರಗಳಾದ ‘ಜೂಟೋಪಿಯಾ 2’ ಮತ್ತು ‘ಲಿಲೋ ಆಂಡ್ ಸ್ಟಿಚ್’ ಅಂತಹ ಸಿನಿಮಾಗಳನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿದೆ.
‘ಬೂಂಗ್’ ಸಿನಿಮಾದ ಟ್ರೇಲರ್
ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಮೋದಿ, "ಈ ಚಿತ್ರದ ಹಿಂದೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಮಣಿಪುರಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ದೇಶದ ಅಗಾಧ ಸೃಜನಶೀಲ ಪ್ರತಿಭೆಯನ್ನು ಇದು ಜಗತ್ತಿಗೆ ಸಾರಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ ಈ ಸಂದೇಶಕ್ಕೆ ಚಿತ್ರದ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಕೃತಜ್ಞತೆ ಸಲ್ಲಿಸಿದ್ದು, ಇದು ಚಿತ್ರತಂಡದ ಶ್ರಮಕ್ಕೆ ಸಿಕ್ಕ ದೊಡ್ಡ ಮನ್ನಣೆ ಎಂದು ಬಣ್ಣಿಸಿದ್ದಾರೆ.
ಲಕ್ಷ್ಮಿಪ್ರಿಯಾ ದೇವಿ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ‘ಬೂಂಗ್’, ನಾಪತ್ತೆಯಾಗಿರುವ ತನ್ನ ತಂದೆಯನ್ನು ಹುಡುಕಲು ಹೊರಡುವ ಪುಟ್ಟ ಬಾಲಕನ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ. ತನ್ನ ತಂದೆ ಮರಳಿ ಬಂದರೆ ತಾಯಿಯ ಮುಖದಲ್ಲಿ ಮತ್ತೆ ನಗು ಮೂಡಬಹುದು ಎಂಬ ಬಾಲಕನ ಮುಗ್ಧ ಆಶಯವೇ ಈ ಚಿತ್ರದ ಜೀವಾಳ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕಿ ಲಕ್ಷ್ಮಿಪ್ರಿಯಾ ದೇವಿ, ಈ ಪ್ರಶಸ್ತಿಯನ್ನು ಮಣಿಪುರದ ಸಂಘರ್ಷ ಪೀಡಿತ ಮಕ್ಕಳಿಗೆ ಅರ್ಪಿಸಿದರು. ತಮ್ಮ ರಾಜ್ಯದಲ್ಲಿ ಶಾಂತಿ ನೆಲೆಸಲಿ ಮತ್ತು ಸಂಕಷ್ಟದಲ್ಲಿರುವ ಮಕ್ಕಳು ಮತ್ತೆ ತಮ್ಮ ಬಾಲ್ಯದ ಕನಸುಗಳನ್ನು ಕಾಣುವಂತಾಗಲಿ ಎಂದು ಅವರು ಭಾವನಾತ್ಮಕವಾಗಿ ಮನವಿ ಮಾಡಿದ್ದರು.
ಮಣಿಪುರದ ಮಣ್ಣಿನ ಕಥೆಯಾದ 'ಬೂಂಗ್' ಸಿನಿಮಾ 2024ರ ಟೊರೊಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಈ ಚಿತ್ರ, ಆನಂತರ ವಾರ್ಸಾ, ಮುಂಬೈ, ಗೋವಾ ಮತ್ತು ಮೆಲ್ಬೋರ್ನ್ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಸಿನಿಮಾದಲ್ಲಿ ಗುಗುನ್ ಕಿಪ್ಜೆನ್, ಬಾಲಾ ಹಿಜಾಮ್ ನಿಂಗ್ಥೌಜಮ್ ಮತ್ತು ಅಂಗೋಮ್ ಸನಾಮತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

