
`ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL' ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌ನ ಕಾರ್ಯಕ್ರಮ ನಗರದ ದಿ ಸೋಡಾ ಫ್ಯಾಕ್ಟರಿಯಲ್ಲಿ ಅದ್ದೂರಿಯಾಗಿ ನೆರವೇರಿತು.
ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1| ಮೈದಾನಕ್ಕಿಳಿಯಲಿದ್ದಾರೆ ಚಂದನವನದ ಬೆಡಗಿಯರು
ಬೆಂಗಳೂರಿನಲ್ಲಿ ನಡೆಯಲಿರುವ ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿದ್ದು, ಚಂದನವನದ ಖ್ಯಾತ ನಾಯಕಿಯರು ಮೈದಾನಕ್ಕಿಳಿಯಲಿದ್ದಾರೆ.
ಕನ್ನಡ ಚಿತ್ರರಂಗದ ಮಹಿಳಾ ಮಣಿಯರಿಗಾಗಿ ಆಯೋಜಿಸಲಾಗಿರುವ ಬಹುನಿರೀಕ್ಷಿತ `ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1' ಟೂರ್ನಮೆಂಟ್‌ಗೆ ಈಗಿನಿಂದಲೇ ಕಳೆ ಬಂದಿದೆ. ನಿರ್ಮಾಪಕ ಮಾಧವಾನಂದ ಅವರ 'ಕನ್ನಡ ಓಟಿಟಿ' ಅರ್ಪಿಸುವ ಈ ವಿಶಿಷ್ಟ ಕ್ರೀಡಾಕೂಟದ ಅಧಿಕೃತ ಜೆರ್ಸಿ, ಟ್ರೋಫಿ ಹಾಗೂ ಪ್ರಚಾರ ಗೀತೆಯನ್ನು ನಗರದ 'ದಿ ಸೋಡಾ ಫ್ಯಾಕ್ಟರಿ'ಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಸ್ಯಾಂಡಲ್‌ವುಡ್‌ನ ಹಿರಿಯ ಕಲಾವಿದರು ಹಾಗೂ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಹಿರಿಯ ನಟಿ ತಾರಾ ಅನುರಾಧ, ಸುಂದರರಾಜ್, ಸಾ ರಾ ಗೋವಿಂದು, ಬಿ.ಆರ್. ಲಕ್ಷ್ಮಣರಾವ್, ಜೋಗಿ, ಭರಮಣ್ಣ ಉಪ್ಪಾರ್, ಎನ್.ಎಂ. ಸುರೇಶ್, ಪ್ರವೀಣ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಟ್ರೋಫಿ ಅನಾವರಣಗೊಳಿಸಿ ಟೂರ್ನಿಗೆ ಶುಭ ಹಾರೈಸಿದರು. ಚಂದನವನದ ಈ ಮಹಿಳಾ ಕ್ರಿಕೆಟ್ ಹಬ್ಬಕ್ಕೆ ರಾಜೇಶ್ ಬ್ರಹ್ಮಾವರ್ ಹಾಗೂ ಪೀಟರ್ ಅವರಂತಹ ಕ್ರೀಡಾ ಮತ್ತು ಚಿತ್ರರಂಗದ ಆಪ್ತರು ಸಾಥ್ ನೀಡಿದ್ದಾರೆ.
ಕ್ರೀಡಾಕೂಟದ ಅಧಿಕೃತ ಜೆರ್ಸಿ, ಟ್ರೋಫಿ ಬಿಡುಗಡೆಯಾಗಿದೆ.
ಈ ಬಾರಿಯ ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಸೆಣಸಾಡಲಿದ್ದು, ತಂಡದ ಮಾಲೀಕರಾದ ಶರತ್ ಕುಮಾರ್ ಎಸ್ (ಇನ್ಸೈಟ್ ವಾರಿಯರ್ಸ್), ರಘುಕುಮಾರ್ ಬಿ (ಎನ್ ಎಸ್ ಆರ್ ರೈಡರ್ಸ್), ಆರ್.ಎಸ್. ಮಹೇಶ್ (ವಿ ಪಿ ಚಾಲೆಂಜರ್ಸ್), ಪ್ರೇಮ ಗೌಡ (ಪಿ ಆರ್ ಎಮ್ ಟೈಟನ್ಸ್), ಲಕ್ಷ್ಮಣ ಉಪ್ಪಾರ್ (ಕ್ಲಾಸಿಕ್ ಕ್ವೀನ್) ಹಾಗೂ ರೇನೇಶ್ (ಆರ್ ಜೆ ರಾಯಲ್) ತಮ್ಮ ತಂಡಗಳ ಜೆರ್ಸಿಯನ್ನು ಪ್ರದರ್ಶಿಸಿದರು. ಸೆಲೆಬ್ರಿಟಿ ಆಟಗಾರ್ತಿಯರಾದ ಸ್ಫೂರ್ತಿ ವಿಶ್ವಾಸ, ಜಯಲಕ್ಷ್ಮಿ, ಕವಿತಾ ಕಂಬಾರ ಹಾಗೂ ವಾಣಿಶ್ರೀ ಉಪಸ್ಥಿತರಿದ್ದರು.
ಟೂರ್ನಿಯ ನಿರ್ಮಾಪಕ ಮಾಧವಾನಂದ ಅವರೊಂದಿಗೆ ಕುಮಾರ್, ಮೀನಾ ಗೌಡ ಮತ್ತು ರೇಣು ಶಿಖಾರಿ ಈ ಕ್ರೀಡಾಕೂಟದ ರೂವಾರಿಗಳಾಗಿದ್ದಾರೆ. ಜನವರಿ 17ರಂದು ಬೆಂಗಳೂರಿನ ಅಶೋಕ್ ರೈಸಿಂಗ್ ಸ್ಟಾರ್ ಕ್ರಿಕೆಟ್ ಮೈದಾನದಲ್ಲಿ ಈ ಎಲ್ಲಾ ಆರು ತಂಡಗಳ ನಡುವೆ ರೋಚಕ ಪಂದ್ಯಗಳು ಜರುಗಲಿವೆ. ಖ್ಯಾತ ನಿರೂಪಕ ಹರೀಶ್ ನಾಗರಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಿನಿಮಾ ರಂಗದ ನಾಯಕಿಯರು ಬ್ಯಾಟ್ ಹಿಡಿದು ಮೈದಾನಕ್ಕಿಳಿಯುವುದನ್ನು ನೋಡಲು ಈಗ ಅಭಿಮಾನಿಗಳು ಕಾತರರಾಗಿದ್ದಾರೆ.

