
ಸಂಕ್ರಾಂತಿ ಹಬ್ಬಕ್ಕೆ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸಂಕ್ರಾಂತಿ ಹಬ್ಬಕ್ಕೆ `ಮಹಾನ್' ಚಿತ್ರದ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಬಿಡುಗಡೆ
ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಚಿತ್ರ ನಿರ್ಮಿಸುತ್ತಿದ್ದು, ಖ್ಯಾತ ನಿರ್ದೇಶಕ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ `ಮಹಾನ್' ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.
ಸಂಕ್ರಾಂತಿಗೂ ರೈತರಿಗೂ ಇರುವ ಅವಿನಾಭಾವ ಸಂಬಂಧವನ್ನು ಗೌರವಿಸುವ ದೃಷ್ಟಿಯಿಂದ ಚಿತ್ರತಂಡ ಈ ದಿನವನ್ನು ಫಸ್ಟ್ ಲುಕ್ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದೆ. 'ಮಹಾನ್' ಎಂದರೆ ಇಲ್ಲಿ ಬೇರಾರೂ ಅಲ್ಲ, ದೇಶಕ್ಕೆ ಅನ್ನ ನೀಡುವ ರೈತ ಎಂಬ ಸಂದೇಶದೊಂದಿಗೆ ಈ ಪೋಸ್ಟರ್ ಹೊರಬಂದಿದೆ. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ಸಿ.ಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ರೈತನ ಪಾತ್ರದಲ್ಲಿ ಚಿನ್ನಾರಿ ಮುತ್ತ
ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಪಕ್ಕಾ ಹಳ್ಳಿ ಹುಡುಗನಾಗಿ, ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನನ್ನ ವೃತ್ತಿ ಜೀವನದಲ್ಲೇ ಇದೊಂದು ಅತ್ಯಂತ ಮಹತ್ವದ ಚಿತ್ರವಾಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರ ಬದುಕಿನ ಬವಣೆಗಳು, ಅವರು ಎದುರಿಸುವ ಸವಾಲುಗಳು ಹಾಗೂ ಅವರ ಪರ ಧ್ವನಿ ಎತ್ತುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.
ನಿರ್ದೇಶಕ ಪಿ.ಸಿ.ಶೇಖರ್ ಮಾತನಾಡಿ, "ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೋ, ರೈತರು ಕೂಡ ಅಷ್ಟೇ ಮುಖ್ಯ. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ" ಎಂದಿದ್ದಾರೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ರಾಧಿಕಾ ನಾರಾಯಣ್ ನಟಿಸುತ್ತಿದ್ದು, ಉಳಿದಂತೆ ಮಿತ್ರ, ನಮ್ರತಾ ಗೌಡ ಮತ್ತು ವರ್ಷ ಬೊಳ್ಳಮ್ಮ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

