ಲವ್ ಆಂಡ್ ವಾರ್’ ರಿಲೀಸ್ ಡೇಟ್ ಗೊಂದಲಕ್ಕೆ ತೆರೆ; ನಿಖರ ದಿನಾಂಕ ಹೇಳಿದ ಸಿನಿ ತಂಡ
x

ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಲವ್ ಆಂಡ್ ವಾರ್’ ರಿಲೀಸ್ ಡೇಟ್ ಗೊಂದಲಕ್ಕೆ ತೆರೆ; ನಿಖರ ದಿನಾಂಕ ಹೇಳಿದ ಸಿನಿ ತಂಡ

ಸಿನಿಮಾ 2027ಕ್ಕೆ ಮುಂದೂಡಲ್ಪಟ್ಟಿದೆ ಎಂಬ ವದಂತಿಗಳನ್ನು ಚಿತ್ರತಂಡದ ಮೂಲಗಳು ತಳ್ಳಿಹಾಕಿವೆ. ಸಿನಿಮಾ ನಿಗದಿಯಂತೆ 2026ರಲ್ಲೇ ತೆರೆಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.


ಬಾಲಿವುಡ್‌ನ ‘ಶೋ ಮ್ಯಾನ್’ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ‘ಲವ್ ಆ್ಯಂಡ್ ವಾರ್’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕಳೆದ ಕೆಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ಇದೀಗ ತೆರೆಬಿದ್ದಿದೆ. ಸಿನಿಮಾ 2027ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಸುದ್ದಿಯನ್ನು ಚಿತ್ರತಂಡದ ಆಪ್ತ ಮೂಲಗಳು ತಳ್ಳಿಹಾಕಿದ್ದು, ಅಂದುಕೊಂಡಂತೆ 2026ರಲ್ಲೇ ಸಿನಿಮಾ ತೆರೆಕಾಣಲಿದೆ ಎಂದು ಸ್ಪಷ್ಟಪಡಿಸಿವೆ.

ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅವರಂತಹ ಘಟಾನುಘಟಿ ಕಲಾವಿದರ ಸಂಗಮವಿರುವ ಈ ಚಿತ್ರದ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಭಾರೀ ಕುತೂಹಲವಿದೆ.

ಬಿಡುಗಡೆ ದಿನಾಂಕದ ಗೊಂದಲವೇನಿತ್ತು?

ಚಿತ್ರದ ಬಹುಪಾಲು ಶೂಟಿಂಗ್ ಇನ್ನೂ ಬಾಕಿ ಇದೆ ಮತ್ತು ವಿಎಫ್‌ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಹಿಡಿಯುವುದರಿಂದ ಸಿನಿಮಾ 2027ಕ್ಕೆ ಹೋಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ಈ ವರದಿಗಳು ಸುಳ್ಳು ಎಂದು ಬನ್ಸಾಲಿ ಆಪ್ತ ಮೂಲಗಳು ತಿಳಿಸಿವೆ. "ಚಿತ್ರೀಕರಣ ನಿಗದಿತ ವೇಗದಲ್ಲಿ ಸಾಗುತ್ತಿದೆ. ಈಗಾಗಲೇ ಪ್ರಮುಖ ದೃಶ್ಯಗಳು ಹಾಗೂ ಒಂದು ಹಾಡಿನ ಚಿತ್ರೀಕರಣವನ್ನು ಬನ್ಸಾಲಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ 2026ರಲ್ಲೇ (ಬಹುಶಃ ಮಾರ್ಚ್ ಅಥವಾ ಈದ್ ಸಮಯದಲ್ಲಿ) ಸಿನಿಮಾ ಬಿಡುಗಡೆಯಾಗುವುದು ಖಚಿತ," ಎಂದು ಸ್ಪಷ್ಟಪಡಿಸಲಾಗಿದೆ.

ಆಲಿಯಾ ಭಟ್ ‘ರೆಟ್ರೋ ಲುಕ್’ ವೈರಲ್

ಒಂದೆಡೆ ಬಿಡುಗಡೆಯ ದಿನಾಂಕದ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ಚಿತ್ರದ ಸೆಟ್‌ನಿಂದ ಲೀಕ್ ಆದ ಆಲಿಯಾ ಭಟ್ ಅವರ ಫೋಟೋ ಅಭಿಮಾನಿಗಳ ಹುಬ್ಬೇರಿಸಿದೆ. ಹೊಳೆಯುವ ಸೀರೆ ಮತ್ತು ಎತ್ತರದ ಬನ್ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿರುವ ಆಲಿಯಾ, 1960 ಮತ್ತು 70ರ ದಶಕದ ಬಾಲಿವುಡ್ ನಾಯಕಿಯರ ಗಾಂಭೀರ್ಯವನ್ನು ನೆನಪಿಸುತ್ತಿದ್ದಾರೆ. ಲೀಕ್ ಆಗಿರುವ ಫೋಟೋಗಳ ಪ್ರಕಾರ, ಇದೊಂದು ವಿಂಟೇಜ್ ಪ್ರೇಮಕಥೆಯಾಗಿದ್ದು, ರಾಜ್ ಕಪೂರ್ ಅವರ ಕ್ಲಾಸಿಕ್ ಚಿತ್ರ 'ಸಂಗಮ್' (1964) ಛಾಯೆಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಾಯುಪಡೆ ಅಧಿಕಾರಿಗಳಾಗಿ ರಣಬೀರ್-ವಿಕ್ಕಿ?

ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ, ರಣಬೀರ್ ಮತ್ತು ವಿಕ್ಕಿ ಕೌಶಲ್ ವಾಯುಪಡೆ ಅಧಿಕಾರಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬನ್ಸಾಲಿ ಬಗ್ಗೆ ರಣಬೀರ್ ಮಾತು

ಸುಮಾರು 17 ವರ್ಷಗಳ ನಂತರ (ಸಾವರಿಯಾ ಬಳಿಕ) ಬನ್ಸಾಲಿ ಜೊತೆ ಕೆಲಸ ಮಾಡುತ್ತಿರುವ ರಣಬೀರ್ ಕಪೂರ್, "ಬನ್ಸಾಲಿ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಟನ ಕನಸು. ಅವರ ಸೆಟ್‌ನಲ್ಲಿ ಕೆಲಸ ಮಾಡುವುದು ಕಠಿಣ ಹಾಗೂ ದಣಿವಿನ ಸಂಗತಿಯಾದರೂ, ಒಬ್ಬ ಕಲಾವಿದನಾಗಿ ಅದು ನೀಡುವ ತೃಪ್ತಿ ಅದ್ಭುತವಾದುದು," ಎಂದು ಹೇಳಿಕೊಂಡಿದ್ದಾರೆ.

ಸದ್ಯ ಆಲಿಯಾ ಭಟ್ 'ಅಲ್ಫಾ' ಚಿತ್ರದಲ್ಲಿ ಹಾಗೂ ರಣಬೀರ್ ಕಪೂರ್ 'ರಾಮಾಯಣ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ನಡುವೆ 'ಲವ್ ಆಂಡ್ ವಾರ್' ಚಿತ್ರೀಕರಣವೂ ಭರದಿಂದ ಸಾಗುತ್ತಿದೆ.

Read More
Next Story