ಕ್ರಿಕೆಟ್, ಧಾರ್ಮಿಕ ವಿಷಯಗಳ ಸುತ್ತ ಸುತ್ತುವ ʼಲಾಲ್ ಸಲಾಮ್ʼ

ಲಾಲ್ ಸಲಾಮ್ ಚಿತ್ರ ಸ್ಪೋರ್ಟ್ಸ್‌ ಡ್ರಾಮ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಧಾರ್ಮಿಕ ವಿಷಯಗಳ ಸುತ್ತ ಕಥೆ ಹೆಣೆಯಲಾಗಿದೆ.


ಕ್ರಿಕೆಟ್, ಧಾರ್ಮಿಕ ವಿಷಯಗಳ ಸುತ್ತ ಸುತ್ತುವ ʼಲಾಲ್ ಸಲಾಮ್ʼ
x
ರಜನಿಕಾಂತ್‌ ನಟನೆಯನ್ನು ತೆರೆಮೇಲೆ ನೋಡುವುದೇ ಒಂದು ಚಂದ
Click the Play button to hear this message in audio format

ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಮ್ ಚಿತ್ರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೊಂದು ಸ್ಪೋಟ್ಸ್‌ ಡ್ರಾಮ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಧಾರ್ಮಿಕ ವಿಷಯಗಳ ಸುತ್ತ ಸಿನಿಮಾ ಸುತ್ತುತ್ತದೆ. 90 ರ ದಶಕದಲ್ಲಿ ಹಳ್ಳಿಯೊಂದರಲ್ಲಿ ಜನಪ್ರಿಯ ಕ್ರಿಕೆಟ್ ಕ್ರೀಡೆಯನ್ನು ಜನರು ಹೇಗೆ ರಾಜಕೀಯದ ಬಳಸಿಕೊಂಡ್ರು ಮತ್ತು ಅದರ ಪರಿಣಾಮ ಏನು ಎಂಬುವುದನ್ನು ಲಾಲ್ ಸಲಾಮ್ ಚಿತ್ರ ತೋರಿಸಿಕೊಟ್ಟಿದೆ.

ತಿರುನಾವುಕರಸು ಅಥವಾ ತಿರು (ವಿಷ್ಣು ವಿಶಾಲ್) ಮತ್ತು ಶಂಸುದ್ದೀನ್ (ವಿಕ್ರಾಂತ್) ಇವರಿಬ್ಬರು ಬಾಲ್ಯದ ಸ್ನೇಹಿತರು. ಶಂಸುದ್ದೀನ್ ಗ್ರಾಮದ ರಾಜಕೀಯ ವ್ಯಕ್ತಿ ಮೊಯಿದ್ದೀನ್ ಭಾಯ್ ಅವರ ಪುತ್ರ. ಗ್ರಾಮದಲ್ಲಿ ಮೊಯಿದ್ದೀನ್ ಭಾಯ್ ಸ್ಥಾಪಿಸಿದ ಸ್ಥಳೀಯ ಕ್ರಿಕೆಟ್ ತಂಡದದಲ್ಲಿ ಇವರಿಬ್ಬರು ಆಟವಾಡುತ್ತಿದ್ದರು. ಆದರೆ ತಿರುವಿನ ಯಶಸ್ಸು ಶಂಸುದ್ದೀನ್ ನನ್ನು ಉರಿಯುವಂತೆ ಮಾಡುತ್ತದೆ. ಇದೇ ಕಾರಣಕ್ಕೇ ಆತನನ್ನು ತಂಡದಿಂದ ಹೊರಹಾಕುತ್ತಾನೆ. ಇದಕ್ಕೆ ಕೋಪಗೊಂಡ ತಿರು ಇದಕ್ಕೆ ಎದುರಾಗಿ ಎಂಸಿಸಿ ತಂಡ ಕಟ್ಟುತ್ತಾನೆ. ಈ ಎರಡು ತಂಡಗಳು ಎರಡು ಪ್ರತ್ಯೇಕ ಧರ್ಮಗಳನ್ನು ಪ್ರತಿನಿಧಿಸುತ್ತವೆ. ಹಿಂದೂ ಮತ್ತು ಮುಸ್ಲಿಂ ತಂಡಗಳಾಗುತ್ತವೆ. ಈ ಹಿಂದೆ ಶಾಂತಿಯುತ ಸಾಮರಸ್ಯದಿಂದ ವಾಸಿಸುತ್ತಿದ್ದ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯವನ್ನು "ಭಾರತ ಮತ್ತು ಪಾಕಿಸ್ತಾನ" ಕ್ರಿಕೆಟ್ ಪಂದ್ಯವೆಂದು ಕರೆಯಲಾರಂಭಿಸುತ್ತಾರೆ.

ಸಿನಿಮಾದ ಮೊದಲಾರ್ಧವು ಹಳ್ಳಿ, ಅಲ್ಲಿನ ಜನರು, ಅಲ್ಲಿರುವ ಹಿಂದೂ ಮತ್ತು ಮುಸ್ಲಿಂ ಜನರ ಸಂಬಂಧದ ಸುತ್ತ ಸುತ್ತುತ್ತದೆ. ಇದೇ ಸಂದರ್ಭದಲ್ಲಿ ತಿರು ಮತ್ತು ಶಂಶು ನಡುವಿನ ಪ್ರತಿಸ್ಪರ್ಧೆಯೂ ಇರುತ್ತದೆ. ಆದರೆ ಸಿನಿಮಾದ ದ್ವಿತೀಯಾರ್ಧದಲ್ಲಿ ಚಿತ್ರ ಇನ್ನಷ್ಟು ವೇಗ ಪಡೆಯುತ್ತದೆ. ಮೊಯಿದ್ದೀನ್ ಭಾಯ್ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಾ ಇರುತ್ತಾರೆ. ಅವರಿಗೆ ಒಳ್ಳೆಯ ಆಟಗಾರನಾದ ಶಂಶು ಭಾರತಕ್ಕಾಗಿ ಆಡುವುದನ್ನು ನೋಡಬೇಕೆಂಬ ಕನಸು ಇರುತ್ತದೆ. ಆದರೆ, ಹಳ್ಳಿಯಲ್ಲಿ ನಡೆದ ಪಂದ್ಯದ ಸಂಘರ್ಷ ತಿರು ಮತ್ತು ಶಂಶು ಜೀವನದಲ್ಲಿ ಯಾವ ರೀತಿಯ ತಿರುವನ್ನು ಪಡೆದುಕೊಳ್ಳುತ್ತದೆ, ಇವರ ಸಂಘರ್ಷ ಹೇಗೆ ಕೊನೆಗೊಳ್ಳುತ್ತದೆ ಎನ್ನುವುದಕ್ಕೆ ನೀವು ಸಿನಿಮಾವನ್ನು ವೀಕ್ಷಿಸಬೇಕು.

ಕಲಾವಿದರ ಅಭಿನಯ

ಇನ್ನು ಈ ಚಿತ್ರದ ಅಭಿನಯದ ಬಗ್ಗೆ ಹೇಳುವುದಾದರೆ, ವಿಷ್ಣು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಾತ್ರ ತುಂಬಾ ಸೂಕ್ಷ್ಮವಾಗಿದ್ದರೂ, ಕಚ್ಚಾ ಮತ್ತು ಹಳ್ಳಿಗಾಡಿನ ಗ್ರಾಮೀಣ ಯುವಕನ ಪಾತ್ರವನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ವಿಷ್ಣುವಿಗೆ ಹೋಲಿಸಿದರೆ ವಿಕ್ರಾಂತ್ ಅವರ ಪಾತ್ರ ಸೀಮಿತವಾಗಿದ್ದರೂ, ದ್ವಿತೀಯಾರ್ಧದಲ್ಲಿ ಅವರ ಭಾವನಾತ್ಮಕ ನಟನೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಇನ್ನು ರಜನಿಕಾಂತ್‌ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ನಟನೆಯನ್ನು ತೆರೆಮೇಲೆ ನೋಡುವುದೇ ಒಂದು ಚಂದವಾಗಿದೆ.

ಸಿನಿಮಾದ ತಾಂತ್ರಿಕತೆ

ವಿಷ್ಣು ರಂಗಸಾಮಿ ಅವರ ಸಿನಿಮಾಟೋಗ್ರಾಫಿ ಹಾಗೂ ಎಆರ್ ರೆಹಮಾನ್ ಅವರ ಸಂಗೀತ ಮತ್ತು ‌90ರ ದಶಕದ ಗ್ರಾಮೀಣ ಚಿತ್ರವನ್ನು ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಒಟ್ಟಿನಲ್ಲಿ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನವನ್ನು ಮಾಡಿದ್ದು, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರು ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣಕ್ಕೆ ಸೂಕ್ತವಾಗುವಂತಹ ಕಥೆಯನ್ನು ಇಟ್ಟುಕೊಂಡು ನಿರ್ದೇಶನ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ಸೊಗಸಾಗಿ ನಿರ್ಮಿಸಿದೆ.

Next Story