ಅಜಯ್ ರಾವ್ ಚಿತ್ರಕ್ಕೆ ಮತ್ತೆ ಕುನಾಲ್ ಗಂಜಾವಾಲಾ ಧ್ವನಿ
x

ಕುನಾಲ್ ಗಂಜಾವಾಲಾ

ಅಜಯ್ ರಾವ್ ಚಿತ್ರಕ್ಕೆ ಮತ್ತೆ ಕುನಾಲ್ ಗಂಜಾವಾಲಾ ಧ್ವನಿ

'ತಾಜ್‌ಮಹಲ್' ಬಳಿಕ ನಟ ಅಜಯ್ ರಾವ್ ಚಿತ್ರಕ್ಕಾಗಿ ಮತ್ತೆ ಹಾಡಿರುವ ಕುನಾಲ್ ಗಂಜಾವಾಲಾ. 'ಪಾರ್ಟ್ನರ್' ಚಿತ್ರದ ಮೊದಲ ಹಾಡು 'ಅಮೋರಾ' ಜುಲೈ 27ರಂದು ಬಿಡುಗಡೆಯಾಗಲಿದೆ.


Click the Play button to hear this message in audio format

ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಅವರ ಈ ಕಮ್‌ಬ್ಯಾಕ್ ಕೂಡ ನಟ ಅಜಯ್‌ ರಾವ್‌ ಅಭಿನಯದ ಚಿತ್ರದ ಮೂಲಕವೇ ಆಗಿದೆ. 'ಪಾರ್ಟ್ನರ್' ಚಿತ್ರದ ಮೊದಲ ಹಾಡು 'ಅಮೋರಾ'ಗೆ ಕುನಾಲ್ ಧ್ವನಿಯಾಗಿದ್ದು, ಜುಲೈ 27ರಂದು ಈ ಹಾಡು ಬಿಡುಗಡೆಯಾಗಲಿದೆ.

ಒಂದು ಕಾಲದಲ್ಲಿ 'ತಾಜ್‌ಮಹಲ್' ಚಿತ್ರದ 'ಖುಷಿಯಾಗಿದೇ ಏಕೋ ನಿನ್ನಿಂದಲೇ' ಹಾಡಿನ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದ ಕುನಾಲ್ ಗಾಂಜಾವಾಲಾ, ಮತ್ತೊಮ್ಮೆ ಅಜಯ್ ರಾವ್ ಅಭಿನಯದ ಚಿತ್ರಕ್ಕೆ ಹಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಹಾಡು ಇಂದಿಗೂ ಕನ್ನಡದ ಅತ್ಯಂತ ಜನಪ್ರಿಯ ಪ್ರೇಮಗೀತೆಗಳಲ್ಲಿ ಒಂದಾಗಿ ಉಳಿದಿದೆ.

'ಪಾರ್ಟ್ನರ್' ಚಿತ್ರದ 'ಅಮೋರಾ' ಹಾಡಿಗೆ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಪುದುಚೇರಿಯ ಸುಂದರ ತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಚಿತ್ರವನ್ನು ನಿರ್ದೇಶಕ ಶಿವ ತೇಜಸ್ ನಿರ್ದೇಶಿಸಿದ್ದು, 'ಧೈರ್ಯಂ' ಬಳಿಕ ಅಜಯ್ ರಾವ್ ಜೊತೆಗಿನ ಅವರ ಎರಡನೇ ಸಿನಿಮಾ ಇದಾಗಿದೆ. ಆಧುನಿಕ ಸಂಬಂಧಗಳು, ಪ್ರೀತಿ, ಬ್ರೇಕಪ್, ಲಿವ್-ಇನ್ ಸಂಬಂಧಗಳು ಮತ್ತು ಅಂತಿಮವಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಲ್ಲಿ ನಂಬಿಕೆ ಹಾಗೂ ಬದ್ಧತೆಯ ಮಹತ್ವವನ್ನು ಕಥೆ ಹೇಳಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದಲ್ಲಿ ಅಜಯ್ ರಾವ್‌ಗೆ ನಾಯಕಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ 'ಪಾರ್ಟ್ನರ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Read More
Next Story