
ಈ ವರ್ಷವೇ ಬಿಡುಗಡೆಯಾಗಲಿದೆ ಸುದೀಪ್ ಅಭಿನಯದ ‘ಮ್ಯಾಕ್ಸ್’!
ʼಮ್ಯಾಕ್ಸ್ʼ ಈ ವರ್ಷ ಬಿಡುಗಡೆ ಆಗುವುದಿಲ್ಲ, 2025ರ ಜನವರಿ 26ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಇದರಿಂದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿತ್ತು.
ಅಭಿಮಾನಿಗಳು ನಿಜಕ್ಕೂ ಆಸೆ ಬಿಟ್ಟಿದ್ದರು. ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬಿಡುಗಡೆಯಾಗಲಿಕ್ಕಿಲ್ಲ ಎಂದೇ ಭಾವಿಸಿದ್ದರು. ಆದರೆ, ಇದೀಗ ‘ಮ್ಯಾಕ್ಸ್’ ಚಿತ್ರವು ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಬುಧವಾರ (ನ.27) ಅಧಿಕೃತ ಪ್ರಕಟಣೆಯೂ ಹೊರಬೀಳಲಿದೆ.
ಸುದೀಪ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ, ಎರಡೂವರೆ ವರ್ಷಗಳೇ ಆಗಿವೆ. 2022ರ ಜುಲೈನಲ್ಲಿ ‘ವಿಕ್ರಾಂತ್ ರೋಣ’, ಸುದೀಪ್ ಪೂರ್ಣಪ್ರಮಾಣವಾಗಿ ನಾಯಕರಾಗಿ ಕಾಣಿಸಿಕೊಂಡ ಕೊನೆಯ ಚಿತ್ರವಾಗಿದೆ. ಅದರ ನಂತರ ಸುದೀಪ್, ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿಕ್ಕಂತೆ ಅವರು ‘ಮ್ಯಾಕ್ಸ್’ ಚಿತ್ರದಲ್ಲಿ ನಟಿಸಿದ್ದಾರೆ.
‘ಮ್ಯಾಕ್ಸ್’ ಚಿತ್ರದ ಘೋಷಣೆ 2022ರಲ್ಲೇ ಆದರೂ, ಚಿತ್ರೀಕರಣ ಪ್ರಾರಂಭವಾಗಿದ್ದು 2023ರಲ್ಲಿ. ಇನ್ನು, ಮುಕ್ತಾಯವಾಗಿದ್ದು 2024ರ ಮೇ ತಿಂಗಳಲ್ಲಿ. ಚಿತ್ರದ ಚಿತ್ರೀಕರಣ ಮುಗಿದರೂ, ಚಿತ್ರದ ಬಿಡುಗಡೆಯ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಮಧ್ಯೆ, ಸುದೀಪ್ ಮತ್ತು ಚಿತ್ರದ ನಿರ್ಮಾಪಕರ ನಡುವೆ ಎಲ್ಲವೂ ಸರಿ ಇಲ್ಲ, ಚಿತ್ರದ ಬಜೆಟ್ ಹೆಚ್ಚಾದ ಕಾರಣ ಅವರು ಬೇಸರಗೊಂಡಿದ್ದಾರೆ, ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಮಾರಾಟವಾಗದ ಕಾರಣ ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಸುದ್ದಿಗಳು ಕೇಳಿಬಂದವು. ಈ ಕುರಿತು ಸುದೀಪ್ ಕಡೆಯಿಂದಾಗಲೀ, ನಿರ್ಮಾಪಕರ ಕಡೆಯಿಂದಾಗಲೀ ಯಾವುದೇ ಸ್ಪಷ್ಟೀಕರಣ ಇರಲಿಲ್ಲ.
ಈ ಕುರಿತು ‘ಬಿಗ್ ಬಾಸ್ 11’ ಪತ್ರಿಕಾಗೋಷ್ಠಿಯಲ್ಲಿ ಮೊದಲ ಬಾರಿಗೆ ಮಾತನಾಡಿದ್ದ ಸುದೀಪ್, ‘ನಿರ್ಮಾಣ ಸಂಸ್ಥೆ ತಮಿಳುನಾಡಿದು. ಅವರಿಗೆ ಅವರದ್ದೇ ಆದಂತಹ ಕೆಲವು ಸಮಸ್ಯೆಗಳಿವೆ. ನನ್ನ ಕಡೆಯಿಂದ ಏನಾಗಬೇಕೋ ಅದೆಲ್ಲವನ್ನೂ ಮುಗಿಸಿದ್ದೇನೆ. ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ಸ್ವಲ್ಪ ತಡವಾಗುತ್ತಿದೆ. ಅದನ್ನು ಹೊರತುಪಡಿಸಿದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಚಿತ್ರ ಮುಗಿದಿದೆ. ನಾನು ಸಹ ಈ ಚಿತ್ರಕ್ಕೆ ಪಾಲುದಾರ. ಪಾಲುದಾರರ ಮಧ್ಯೆ ಸಮಸ್ಯೆ ಇದ್ದರೆ ಚಿತ್ರ ಹೇಗೆ ಮುಗಿಯುವುದಕ್ಕೆ ಸಾಧ್ಯ?’ ಎಂದು ಪ್ರಶ್ನಿಸಿದ್ದರು.
ನಿರ್ಮಾಪಕರಿಗೆ ತಮ್ಮದೇ ಆದ ಸಮಸ್ಯೆಗಳಿವೆ ಎಂದಿದ್ದ ಸುದೀಪ್, ‘ಅವರು ಸಹ ಚಿತ್ರಕ್ಕೆ ದುಡ್ಡ ಹಾಕಿದ್ದಾರೆ. ಸಿನಿಮಾ ಹೊರಗೆ ಬಂದರೆ ಅವರಿಗೂ ದುಡ್ಡು ಬರುತ್ತದೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳಿವೆ ಮತ್ತು ಅದನ್ನು ನಾವು ಒಪ್ಪಿಕೊಳ್ಳಬೇಕು. ಇಲ್ಲಿ ಬೇರೆ ಏನೂ ಇಲ್ಲ. ಇಡೀ ಚಿತ್ರವನ್ನೇ ಒಟ್ಟಿಗೆ ನಡೆಸಿಕೊಂಡು ಬಂದಿದ್ದೇವೆ. ಸಿನಿಮಾ ನಿಂತಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಆದರೂ ಚಿತ್ರ ಯಾವಾಗ ಬಿಡುಗಡೆ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಕೇಳುತ್ತಲೇ ಇದ್ದರು. ಚಿತ್ರ ಈ ವರ್ಷ ಬಿಡುಗಡೆ ಆಗುವುದಿಲ್ಲ, 2025ರ ಜನವರಿ 26ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈ ವರ್ಷ ಸುದೀಪ್ ಅಭಿನಯದ ಚಿತ್ರವನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದನ್ನು ಕೇಳಿ ಬೇಸರವಾಗಿದ್ದರು, ಈ ವರ್ಷವಲ್ಲದಿದ್ದರೂ ಸುದೀಪ್ ಅಭಿನಯದ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಖುಷಿ ವ್ಯಕ್ತವಾಗಿತ್ತು.
ಇದೀಗ ಚಿತ್ರ ಬಿಡುಗಡೆಯ ಕುರಿತು ಚಿತ್ರತಂಡದಿಂದ ಸೋಷಿಯಲ್ ಮೀಡಿಯಾದಲ್ಲಿ ಮಹತ್ವದ ಘೋಷಣೆ ಹೊರಬಿದ್ದಿದೆ. ‘ವೇದಿಕೆ ಸಜ್ಜಾಗಿದೆ ಮತ್ತು ಎಲ್ಲರ ಹೃದಯಗಳನ್ನು ಗೆಲ್ಲಲು ಸುದೀಪ್ ಸದ್ಯದಲ್ಲೇ ಬರಲಿದ್ದಾರೆ. ನವೆಂಬರ್ 27ರಂದು ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ’ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.
ಅದರಂತೆ ನವೆಂಬರ್ 27ರಂದು ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಮೂಲಗಳ ಪ್ರಕಾರ, ಚಿತ್ರವು ಡಿಸೆಂಬರ್ 27ರಂದು ದೇಶಾದ್ಯಂತ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ. ಈ ಕುರಿತು ಚಿತ್ರತಂಡದವರು ಬುಧವಾರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
‘ಮ್ಯಾಕ್ಸ್’ ಒಂದು ಮಾಸ್ ಚಿತ್ರವಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣವಿದೆ.
‘ಮ್ಯಾಕ್ಸ್’ ಚಿತ್ರವನ್ನು ವಿ ಕ್ರಿಯೇಷನ್ಸ್ ಬ್ಯಾನರ್‍ನಡಿ ಕಲೈಪುಲಿ ಎಸ್. ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ.