BIG BOSS ಶೋಗೆ ಈ ಬಾರಿ ಗೈರು | ನಟ ಕಿಚ್ಚ ಸುದೀಪ್‌ ಹೇಳಿದ್ದೇನು?
x
ನಟ ಕಿಚ್ಚ ಸುದೀಪ್‌

BIG BOSS ಶೋಗೆ ಈ ಬಾರಿ ಗೈರು | ನಟ ಕಿಚ್ಚ ಸುದೀಪ್‌ ಹೇಳಿದ್ದೇನು?

ಮುಖ್ಯವಾಗಿ ಬಿಗ್‌ ಬಾಸ್‌ ರಿಯಾಲಿಟಿ ಶೋದಿಂದ ಹೊರಗುಳಿಯಲಿದ್ದಾರೆ ಎಂಬ ಕುರಿತ ವರದಿಗಳಿಗೆ ಮಹತ್ವದ ಸ್ಪಷ್ಟನೆ ನೀಡಿದರು. ಜೊತೆಗೆ ಸೆ.2 ರಂದು ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಈ ಬಾರಿ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಅಪ್‌ಡೇಟ್‌ ನೀಡಿದರು.


Click the Play button to hear this message in audio format

ನಟ ಕಿಚ್ಚ ಸುದೀಪ್‌ ಶನಿವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ಬಿಗ್‌ ಬಾಸ್‌ ರಿಯಾಲಿಟಿ ಶೋದಿಂದ ಹೊರಗುಳಿಯಲಿದ್ದಾರೆ ಎಂಬ ಕುರಿತ ವರದಿಗಳಿಗೆ ಮಹತ್ವದ ಸ್ಪಷ್ಟನೆ ನೀಡಿದರು. ಜೊತೆಗೆ ಸೆ.2 ರಂದು ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಈ ಬಾರಿ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಅಪ್‌ಡೇಟ್‌ ನೀಡಿದರು.

ಈ ಬಾರಿಯ ಬಿಗ್‌ ಬಾಸ್‌ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಬದಲು ಬೇರೆ ಸ್ಟಾರ್ ನಟ ಬರುತ್ತಾರೆ ಎಂದು ಊಹಾಪೋಹಗಳು ಹರಿದಾಡುತ್ತಿದ್ದವು. ಈ ಬಗ್ಗೆ ಕಿಚ್ಚ ಸುದೀಪ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದು, ಬಿಗ್ ಬಾಸ್ ಮಾಡಲು ನಾನು ಎಷ್ಟು ಕಷ್ಟ ಪಡುತ್ತೇನೆ ಗೊತ್ತಾ? ಸಿನಿಮಾಗೆ ಅಂತ ಟೈಂ ಕೊಡ್ಲಾ? ಬಿಗ್‌ಬಾಸ್‌ಗೆ ಅಂತ ಟೈಂ ಕೊಡ್ಲಾ? ಅಥವಾ ನನಗೆ ಅಂತ ಟೈಂ ಕೊಡ್ಲ? ಎನ್ನುವ ಮೂಲಕ ಈ ಬಾರಿ ತಾವು ಬಿಗ್‌ ಬಾಸ್‌ ಆಗುವುದು ಅನುಮಾನ ಎಂಬ ಸಂದೇಶ ನೀಡಿದ್ದಾರೆ.

"ಮಾತುಕತೆ ನಡೆಯುತ್ತಿದೆ. 10 ವರ್ಷ ಬಿಗ್ ಬಾಸ್‌ಗೆ ಡೆಡಿಕೇಟ್ ಮಾಡಿದ್ದೀನಿ. ಬಿಗ್ ಬಾಸ್ ದೊಡ್ಡ ಶ್ರಮ. ಎಲ್ಲರಿಗೂ ನಾನು ನಡೆಸಿಕೊಟ್ಟಿದ್ದೇನೆ ಅನ್ನೋದಷ್ಟೇ ಗೊತ್ತಿದೆ. ಹೇಗೆ ನಿಂತು ಇರ್ತೀನಿ ಗೊತ್ತಾ? ಮ್ಯಾಕ್ಸ್ ಸಿನಿಮಾ ರಾತ್ರಿ ಶೂಟ್ ನಡೆದಿತ್ತು. ಬೆಳಿಗ್ಗೆ 3.30ಕ್ಕೆ ಮ್ಯಾಕ್ಸ್ ಶೂಟ್ ಮುಗಿಯುತ್ತಿತ್ತು. ವಿಮಾನ ಲೇಟ್ ಆಗುತ್ತದೆ ಎನ್ನುವ ಕಾರಣಕ್ಕೆ ಚಾಟೆರ್ಡ್ ಫ್ಲೈಟ್ ಬಾಡಿಗೆಗೆ ತೆಗೆದುಕೊಂಡಿದ್ದೆ. ಅದೂ ನನ್ನದೇ ದುಡ್ಡಲ್ಲಿ. ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಮನೆಗೆ ಬರುತ್ತಿದ್ದೆ. ನಂತರ ಬಿಗ್ ಬಾಸ್ ಸೆಟ್‌ಗೆ ಹೋಗುತ್ತಿದ್ದೆ’ ಎಂದು ಅವರು ವಿವರಿಸಿದ್ದಾರೆ.

‘ಬೆಳಿಗ್ಗೆ ಬಿಗ್ ಬಾಸ್ ಶೂಟ್ಗೆ ನಿಂತರೆ ಮಧ್ಯಾಹ್ನದವರೆಗೆ ಶೂಟ್ ಮಾಡುತ್ತಿದ್ದೆ. ಆ ಬಳಿಕ 2 ಗಂಟೆ ಗ್ಯಾಪ್. ನಂತರ ಮತ್ತೊಂದು ಎಪಿಸೋಡ್ ಶೂಟ್ ಮಾಡುತ್ತಿದ್ದೆ. ಆ ಬಳಿಕ ರಾತ್ರೋರಾತ್ರಿ ಚೆನ್ನೈಗೆ ಹೋಗುತ್ತಿದ್ದೆ. ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ತಕ್ಷಣ ಶೂಟ್ ಶುರುವಾಗುತ್ತಿತ್ತು. ನನಗೆ ಸಿನಿಮಾಗೆ ನ್ಯಾಯ ಕೊಡಲಾ? ಶೋಗೆ ನ್ಯಾಯ ಕೊಡಲಾ? ಎನಿಸುತ್ತಿತ್ತು. ಶೋನ ಎಂಜಾಯ್ ಮಾಡಿದ್ದೇನೆ, ಆಸಕ್ತಿಯೂ ಇದೆ. ಆದರೆ, ಕೆಲವೊಮ್ಮೆ ಮೂವ್ ಆನ್ ಆಗಲೇಬೇಕು. ನನಗೆ ಮಾಡೋಕೆ ಇಂಟ್ರೆಸ್ಟಿಲ್ಲ ಅಥವಾ ಅವರಿಗೆ ನಾನು ಬೇಡ ಎಂದಲ್ಲ. ಇದೆಲ್ಲ ಕಾಂಟ್ರವರ್ಸಿ. ಬಿಗ್ ಬಾಸ್ ವಿಚಾರ ಬಂದಾಗ ಅವರೇ ಹೇಳಬಹುದು’ ಎಂದೂ ಕಿಚ್ಚ ಹೇಳಿದ್ದಾರೆ.

ಅಭಿಮಾನಿಗಳಿಗೆ ಕಿಚ್ಚ ಮನವಿ

ತಮ್ಮ ಹುಟ್ಟುಹಬ್ಬದ ಕುರಿತು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ನಟ ಕಿಚ್ಚ ಸುದೀಪ್‌, ʼಸೆಪ್ಟಂಬರ್‌ 2 ರಂದು ತಮ್ಮ ಹುಟ್ಟುಹಬ್ಬ ಆಚರಣೆಗೆ ಈ ಬಾರಿ ಬೇರೆ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಹುಟ್ಟುಹಬ್ಬ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಗಿ ಗಲಾಟೆಗಳು ನಡೆದಿತ್ತು. ಇದರಿಂದ ಅಕ್ಕ- ಪಕ್ಕ ಮನೆಯವರಿಗೆ ತೊಂದರೆಯುಂಟಾಗಿದ್ದು, ಈ ವರ್ಷ ಮನೆಯ ಬಳಿ ಆಚರಣೆ ಬೇಡ ಎಂದು ನಿರ್ಧರಿಸಿದ್ದೇವೆ. ಹಾಗಾಗಿ ಜಯನಗರದ ಟೆಲಿಫೋನ್ ಎಕ್ಸ್‌ಚೇಂಜ್‌ ಎದುರು ಎಂಇಎಸ್‌ ಗ್ರೌಂಡ್ ನಲ್ಲಿ ಬೆಳಿಗ್ಗೆ 10ರಿಂದ 12ವರೆಗೆ ಇರುತ್ತೇನೆ. ಅಭಿಮಾನಿಗಳನ್ನು ಅಲ್ಲಿಯೇ ಭೇಟಿ ಮಾಡುತ್ತೇನೆ. ಯಾರೂ ಮನೆಯ ಬಳಿ ಬರಬಾರದಾಗಿ ಕೇಳಿಕೊಳ್ಳುತ್ತೇನೆ. ಆದರೆ, ಯಾರೂ ಕೇಕ್ ತರಬೇಡಿ. ಅಂತಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿಸಿ’ ಎಂದು ಕೋರಿದ್ದಾರೆ.

ದರ್ಶನ್‌ ಬಗ್ಗೆ ಸುದೀಪ್‌ ಏನೆಂದರು?

ದರ್ಶನ್‌ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ‘ನಾನು ಏನು ಹೇಳಬೇಕೋ ಅದನ್ನು ಮಾತನಾಡಿ ಆಗಿದೆ. ಅವರಿಗೆ ಅಂತ ಊರೆಲ್ಲ ಫ್ಯಾನ್ಸ್ ಇದಾರೆ. ಕುಟುಂಬದವರು ಇದ್ದಾರೆ. ನಾವು ಮಾತಾನಾಡುವುದರಿಂದ ಅವರಿಗೆ ಬೇಸರ ಆಗುತ್ತದೆ. ಇದಲ್ಲದೆ ಮತ್ತೊಂದು ಕುಟುಂಬ ಇದೆ. ಅವರಿಗೂ ನೋವಾಗಬಹುದು. ಸರ್ಕಾರ, ಕಾನೂನು ಇದೆ. ಅದನ್ನು ನಂಬಬೇಕು. ಪ್ರತಿಯೊಂದನ್ನೂ ನಂಬಬೇಕು’ ಎಂದು ಸುದೀಪ್ ಹೇಳಿದ್ದಾರೆ.

ಎರಡೂ ಒಟ್ಟಿಗೆ ಬಂದರೆ ಸಮಸ್ಯೆ

ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಬೇಕು ಅನ್ನಿಸಿತ್ತಾ? ಎನ್ನುವ ಪ್ರಶ್ನೆಗೆ, "ನಾವಿಬ್ಬರು ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ ಖಂಡಿತ ನಾನು ಹೋಗಿ ಭೇಟಿ ಮಾಡುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲವೇ? ಕೆಲವೊಮ್ಮೆ ಅಂತರ ಯಾಕೆ ಕಾಯ್ದುಕೊಳ್ತೀವಿ ಅಂದರೆ ನಾವು ಸರಿಯಿಲ್ಲ, ಅವರು ಸರಿಯಿಲ್ಲ ಅಂತಲ್ಲ. ನಾವಿಬ್ಬರೂ ಒಟ್ಟಿಗೆ ಸರಿಯಿಲ್ಲ ಎಂಬ ಕಾರಣಕ್ಕೆ. ಸೂರ್ಯ ಹಗಲು, ಚಂದ್ರ ರಾತ್ರಿ ಬರಬೇಕು, ಆಗಲೇ ಚೆಂದ. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ ಆಗುತ್ತದೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು.

Read More
Next Story