
Big Boss | ಮುಂದಿನ ಬಾರಿ ಇಲ್ಲ ಎಂದಿದ್ದ ಸುದೀಪ್! ಇನ್ನೂ ನಾಲ್ಕು ಸೀಸನ್‌ಗಳಿಗೆ ಒಪ್ಪಂದ
"ನಾನು ಇದನ್ನು ಸಂಭಾವನೆ ಏರಿಸಿಕೊಳ್ಳುವುದಕ್ಕೋ ಅಥವಾ ಬೇರೆ ಯಾವದೋ ಕಾರಣಕ್ಕೆ ಮಾಡಿದ್ದಲ್ಲ. ಕಳೆದ ವರ್ಷ ಕಾರ್ಯಕ್ರಮ ಮುಗಿದ ನಂತರ ನಮ್ಮ ನಡುವೆ ಹಲವು ಮೀಟಿಂಗ್‍ಗಳಾಗಿವೆ," ಎಂದು ಸುದೀಪ್ ಹೇಳಿದ್ದಾರೆ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಇನ್ನು ಮುಂದೆ ನಡೆಸಿಕೊಡುವುದಿಲ್ಲ ಎಂದು ಸುದೀಪ್ ಕಳೆದ ವರ್ಷ ಹೇಳಿದ್ದರು. ಆದರೆ, ‘ಬಿಗ್ ಬಾಸ್’ ಕಾರ್ಯಕ್ರಮದ 12ನೇ ಅವತರಣಿಕೆಯನ್ನು ಸುದೀಪ್ ಈ ವರ್ಷ ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ಹಾಗಂತ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ.
‘ಬಿಗ್ ಬಾಸ್ - ಸೀಸನ್ 11’ ತಮ್ಮ ಕೊನೆಯ ಸೀಸನ್ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲೇ ಸುದೀಪ್ ಘೋಷಿಸಿದ್ದರು. ಈ ಬಾರಿಯ ಗ್ರಾಂಡ್ ಫಿನಾಲೆ ತಮ್ಮ ಕೊನೆಯ ಗ್ರಾಂಡ್ ಫಿನಾಲೆ ಆಗಲಿದೆ ಎಂದು ಸಹ ಸುದೀಪ್ ಹೇಳಿಕೊಂಡಿದ್ದರು. ಆದರೆ, ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಬಿಗ್ ಬಾಸ್ - ಸೀಸನ್ 12’ ಕಾರ್ಯಕ್ರಮದ ನಿರೂಪಣೆಯನ್ನು ಮಾಡುವುದಾಗಿ ಸುದೀಪ್ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾನು ಕಾರ್ಯಕ್ರಮವನ್ನು ನಿರೂಪಿಸುವುದಿಲ್ಲ ಎಂದು ಕಳೆದ ವರ್ಷದ ಸೀಸನ್ ಪ್ರಾರಂಭದಲ್ಲೇ ಹೇಳಿದ್ದೆ. ಮುಕ್ತಾಯದ ಹೊತ್ತಿಗೆ ಅದನ್ನು ಮತ್ತೊಮ್ಮೆ ಕನ್ಫರ್ಮ್ ಮಾಡಿದೆ. ಅದಕ್ಕೆ ಕಾರಣವಿತ್ತು. ಈಗ ವಾಪಸ್ಸು ಬರುತ್ತಿರುವುದಕ್ಕೂ ಕಾರಣವಿದೆ. ನಾನು ವಾಪಸ್ಸು ಬರುತ್ತಿರುವುದಕ್ಕೆ ಮುಖ್ಯ ಕಾರಣ, ಜನರ ಪ್ರೀತಿ. ಬಹಳಷ್ಟು ಜನ ನಾನು ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಆಸೆಪಟ್ಟಿದ್ದಾರೆ. ಕಾರ್ಯಕ್ರಮವನ್ನು ತಂಡ ನಡೆಸಿಕೊಡುತ್ತಿರುವ ರೀತಿ, ಅದು ಬೆಳೆಯುತ್ತಿರುವ ರೀತಿ, ಜನ ಅದನ್ನು ಪ್ರೀತಿಯಿಂದ ನೋಡುತ್ತಿರುವ ರೀತಿ … ಇವೆಲ್ಲ ಕಾರಣಗಳಿಂದ ನಾನು ವಾಪಸ್ಸು ಬರುವುದಕ್ಕೆ ಒಪ್ಪಿದೆ. ಕಳೆದ ಮೂರು ವರ್ಷಗಳಲ್ಲಿ ಕಾರ್ಯಕ್ರಮ ಬಹಳ ದೊಡ್ಡದಾಗಿ ಬೆಳೆದಿದೆ. ಜನ ಐಪಿಎಲ್ ಮಟ್ಟಕ್ಕೆ ಈ ಕಾರ್ಯಕ್ರಮವನ್ನು ನೋಡುತ್ತಾರೆ. ಮೂರು ತಿಂಗಳುಗಳ ಕಾಲ ಬೇರೆ ಯಾವುದೇ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ಈ ಕಾರ್ಯಕ್ರಮವನ್ನು ಇನ್ನಷ್ಟು ಚೆನ್ನಾಗಿ ರೂಪಿಸುವುದು ನಮ್ಮ ಜವಾಬ್ದಾರಿ ಸಹ ಹೌದು.
ಇಷ್ಟಕ್ಕೂ ಸುದೀಪ್ ಕಾರ್ಯಕ್ರಮ ನಡೆಸಿಕೊಡದಿರುವುದಕ್ಕೆ ತೀರ್ಮಾನಿಸಿದ್ದು ಯಾಕೆ?
ಈ ಕುರಿತು ಮಾತನಾಡಿರುವ ಅವರು, ‘ನಾನು ಕೆಲವು ಬೇಡಿಕೆಗಳನ್ನು ಇಟ್ಟಿದ್ದೆ. ಅದನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ನಾನು ವಾಪಸ್ಸು ಬಂದೆ. ನೀವು ಯಾವುದೇ ಭಾಷೆಗೆ ಬೇಕಾದರೂ ಹೋಗಿ ಕಾರ್ಯಕ್ರಮ ಮಾಡಿ, ಮೊದಲು ಕನ್ನಡಕ್ಕೆ ಪ್ರೀತಿ ತೋರಿಸಿ. ಇತ್ತೀಚೆಗೆ ನನಗೆ ಪ್ರೀತಿ ಕಾಣಲಿಲ್ಲ. ಬೇರೆ ಭಾಷೆಗಳಲ್ಲಿ ಸ್ಪರ್ಧಿಗಳಿಗೆ ಕೊಡುವ ಪ್ರಾಮುಖ್ಯತೆ ಕನ್ನಡಕ್ಕೂ ಕೊಡಿ. ಇಲ್ಲಿಯ ಸ್ಪರ್ಧಿಗಳಿಗೂ ಒಳ್ಳೆಯ ಸೌಲಭ್ಯ ಕೊಡಿ. ನಮ್ಮ ಶ‍್ರಮಕ್ಕೆ ಪ್ರೀತಿ ತೋರಿಸಿ ಎಂಬುದು ನನ್ನ ವಾದ. ಕನ್ನಡದ ‘ಬಿಗ್ ಬಾಸ್’ ಒಳ್ಳೇಯ ರಿಸಲ್ಟ್ ಕೊಟ್ಟಿದೆ. ಟಿಆರ್ಪಿಯಲ್ಲಿ ದಾಖಲೆ ಮಾಡಿದೆ. ಹಾಗಾಗಿ, ಇಲ್ಲಿನ ಕಾರ್ಯಕ್ರಮಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದರೆ. ಅದಕ್ಕೆ ಚಾನಲ್‍ನವರು ಸ್ಪಂದಿಸಿದರು. ಹಾಗಾಗಿ, ನಾನು ವಾಪಸ್ಸು ಬಂದೆ’ ಎಂದರು.
ನಾನು ಇದನ್ನು ಸಂಭಾವನೆ ಏರಿಸಿಕೊಳ್ಳುವುದಕ್ಕೋ ಅಥವಾ ಬೇರೆ ಯಾವದೋ ಕಾರಣಕ್ಕೆ ಮಾಡಿದ್ದಲ್ಲ. ಕಳೆದ ವರ್ಷ ಕಾರ್ಯಕ್ರಮ ಮುಗಿದ ನಂತರ ನಮ್ಮ ನಡುವೆ ಹಲವು ಮೀಟಿಂಗ್‍ಗಳಾಗಿವೆ. ಮೊದಲ ಎರಡು ಮೀಟಿಂಗ್‍ನಲ್ಲಿ ನಾನು ಏನೂ ಕೇಳಲಿಲ್ಲ. ಬರೀ ಊಟ, ತಿಂಡಿ ಬಗ್ಗೆ ವಿಚಾರಿಸಿದೆ. ಅವರು ಹೇಳುವುದನ್ನು ಕೇಳಿಸಿಕೊಂಡೆ. ಆ ನಂತರ ಚಾನಲ್‍ನವರು ನನ್ನ ಬೇಡಿಕೆಗಳಿಗೆ ಸ್ಪಂದಿಸಿದರು’ ಎಂದರು.
ಈ ಬಾರಿ ಕಾರ್ಯಕ್ರಮ ನಡೆವಸಿಕೊಡುವುದಕ್ಕೆ ಸುದೀಪ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರತಿ ವರ್ಷ ಮನೆ ಬಾಡಿಗೆ ಹೆಚ್ಚಾಗುತ್ತದೆ. ಮನೆ ಬಾಡಿಗೆ ವಿಷಯದಲ್ಲೂ ಪ್ರತೀ ವರ್ಷ ಶೇ. 10ರಷ್ಟು ಏರಿಕೆ ಆಗುತ್ತದೆ. ಹಾಗೆ ಇಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಇದ್ದೇ ಇರುತ್ತದೆ. ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’ ಎಂದು ಸುದೀಪ್ ಪ್ರಶ್ನಿಸಿದರು.
‘ಬಿಗ್ ಬಾಸ್ - ಸೀಸನ್ 12’ ಕಾರ್ಯಕ್ರಮದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆಯಾದರೂ, ಕಾರ್ಯಕ್ರಮ ಶುರುವಾಗುವುದಕ್ಕೆ ಇನ್ನೂ ಸಮಯವಿದೆ. ಮೊದಲಿಗೆ ಸುದೀಪ್ ಅಭಿನಯದ ಹೊಸ ಚಿತ್ರ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ ಹೊತ್ತಿಗೆ ಕಾರ್ಯಕ್ರಮ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.