'ಕೆರೆಬೇಟೆ' ಸಿನಿಮಾ | ʼಕೊನೆಯ ಪ್ರಯತ್ನದಲ್ಲಿದ್ದೀನಿʼ ಎಂದು ಭಾವುಕರಾದ ಹೀರೊ
ನಮ್ಮಲ್ಲೇ ಕೆಲವರಿಗೆ ಕನ್ನಡ ಸಿನಿಮಾ ಅಂದರೆ ತಾತ್ಸಾರ. ತಮಿಳು, ತೆಲುಗು, ಮಲಯಾಳಂನಲ್ಲಿ ನೋಡಿದ್ದೀವಿ ಅಂತ ಹೇಳಿಕೊಳ್ಳುವ ಖುಷಿ ಕನ್ನಡ ಸಿನಿಮಾ ನೋಡಿದ್ದೀವಿ ಅಂತ ಹೇಳಿಕೊಳ್ಳುವಾಗ ಇರಲ್ಲ. ಏನು ಮುಜಗರವೋ ಏನೋ ಗೊತ್ತಿಲ್ಲ.
ಮಲೆನಾಡು ಭಾಗದ ಸಿನಿಮಾ 'ಕೆರೆಬೇಟೆ' ಮೂರು ವಾರಗಳ ಹಿಂದಷ್ಟೇ (ಮಾ.15 ) ಬಿಡುಗಡೆಯಾಗಿತ್ತು. ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋನೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ ಥಿಯೇಟರ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಜನರು ಸಿನಿಮಾ ನೋಡಿಲ್ಲ. ನಿರೀಕ್ಷಿಸಿದ ಮಟ್ಟಕ್ಕೆ ಸಿನಿಮಾ ಗೆದ್ದಿಲ್ಲ. ಹೀಗಾಗಿ ಈ ಸಿನಿಮಾ ಹೀರೊ ಹಾಗೂ ನಿರ್ಮಾಪಕ, "ಕೊನೆಯ ಪ್ರಯತ್ನ ಮಾಡುತ್ತಿದ್ದೇನೆ. ಸಿನಿಮಾ ಗೆಲ್ಲಿಸಿ.." ಅಂತ ವಿಡಿಯೋ ಮಾಡಿ ಹತಾಶೆಯ ನುಡಿಗಳನ್ನಾಡಿದ್ದಾರೆ.
"ನಮ್ಮ ಕೆರೆಬೇಟೆ ರಿಲೀಸ್ ಆಗಿ ಮೂರು ವಾರಗಳಿಗೂ ಹೆಚ್ಚಾಗುತ್ತಾ ಬಂದಿದೆ. ಸಿನಿಮಾ ಬಗ್ಗೆ ತುಂಬಾ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಅದು ನಾನು ಹೇಳುತ್ತಿರೋದಲ್ಲ. ಕನ್ನಡ ಚಿತ್ರರಂಗದ ಹೆಸರಾಂತ ನಟರು, ನಿರ್ದೇಶಕರು, ಸಿನಿಮಾ ನೋಡಿದ ಪತ್ರಕರ್ತರು, ಪ್ರೇಕ್ಷಕರು ಹೇಳುತ್ತಿದ್ದಾರೆ. ಆದರೂ, ನಾವು ನಿರೀಕ್ಷೆ ಮಾಡಿದಷ್ಟು ಜನರಿಗೆ ರೀಚ್ ಆಗಿಲ್ಲ ಅನ್ನುವ ಕೊರಗು ಇದೆ. " ಎಂದು ಹೀರೊ ಗೌರಿಶಂಕರ್ ಹೇಳಿಕೊಂಡಿದ್ದಾರೆ.
"ತುಂಬಾ ಒಳ್ಳೆಯ ಸಿನಿಮಾ ಮಾಡಿದಾಗ ಆ ಸಿನಿಮಾ ಜನಕ್ಕೆ ರೀಚ್ ಆಗದೆ, ಥಿಯೇಟರ್‌ನಲ್ಲಿ ಜನ ಬಂದು ಸಿನಿಮಾ ನೋಡದೆ, ಹಾಗೆ ಕಣ್ಮರೆಯಾಗುತ್ತೆ ಅನ್ನೋದನ್ನು ನೆನಪು ಮಾಡಿಕೊಂಡರೆ ತುಂಬಾನೇ ಬೇಜಾರಾಗುತ್ತೆ. ಆ ಒಂದು ಕೊನೆಯ ಪ್ರಯತ್ನದಲ್ಲಿ ನಾನಿದ್ದೀನಿ." ಎಂದು ಭಾವುಕರಾಗಿದ್ದಾರೆ.
"ಬೆಂಗಳೂರಿನ ಕೆಲವೇ ಕೆಲವು ಮಾಲ್‌ಗಳಲ್ಲಿ ನಮ್ಮ ಸಿನಿಮಾ ಇದೆ. ಅಂದರೆ, ತುಂಬಾ ಶೋಗಳಿಲ್ಲ. ಕೆಲವೇ ಕೆಲವು ಶೋಗಳಿದ್ದಾವೆ. ಕೆಲವೇ ಕೆಲವು ಉದಾಹರಣಗಳಿವೆ. ಎರಡು ಮೂರು ವಾರ ಕೆಲವೇ ಕೆಲವು ಶೋಗಳಿದ್ದು, ಅದು ನೂರಾರು ಶೋಗಳಾದ ಉದಾಹರಣೆಯಿದೆ. ನಮ್ಮ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದರಿಂದ ಆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ" ಎಂದು ಗೌರಿ ಶಂಕರ್ ಹೇಳಿದ್ದಾರೆ.
"ನಮ್ಮಲ್ಲೇ ಕೆಲವರಿಗೆ ಕನ್ನಡ ಸಿನಿಮಾ ಅಂದರೆ ತಾತ್ಸಾರ. ಇದೇ ಸಿನಿಮಾ ತಮಿಳು, ತೆಲುಗು, ಮಲಯಾಳಂನಲ್ಲಿ ನೋಡಿದ್ದೀವಿ ಅಂತ ಹೇಳಿಕೊಳ್ಳುವ ಖುಷಿ, ಕನ್ನಡ ಸಿನಿಮಾ ನೋಡಿದ್ದೀವಿ ಅಂತ ಹೇಳಿಕೊಳ್ಳುವುದಕ್ಕೆ ಇರುವುದಿಲ್ಲ. ಏನು ಮುಜುಗರವೋ ಏನೋ ಗೊತ್ತಿಲ್ಲ. ಒಮ್ಮೆ ಸಿನಿಮಾ ನೋಡಿ, ಯಾವ ತರಹ ಸಿನಿಮಾ ಮಾಡಿದ್ದೀವಿ ಅಂತ." ಎಂದು ರವಿಶಂಕರ್ ಎಮೋಷನಲ್ ಆಗಿ ತಿಳಿಸಿದ್ದಾರೆ.
'ಕೆರೆಬೇಟೆ' ಅನ್ನೋದು ಮಲೆನಾಡಿನ ಭಾಗದ ಒಂದು ಸಂಪ್ರದಾಯ ಕ್ರೀಡೆ. ಬೇಸಿಗೆಯಲ್ಲಿ ಊರಿನ ಜನರೆಲ್ಲರೂ ಸೇರಿಕೊಂಡು ಒಟ್ಟಿಗೆ ಕೂಣಿ, ಬಲೆ ಹಿಡಿದು ಕೆರೆಗೆ ಇಳಿಯುತ್ತಾರೆ. ಪೈಪೋಟಿಗೆಗೆ ಬಿದ್ದು ಮೀನು ಹಿಡಿಯುವುದಕ್ಕೆ ಮುಂದಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಮೀನು ಹಿಡಿಯಬೇಕೆಂಬ ಹುರುಪು, ಧಾವಂತ ಎರಡೂ ಪ್ರತಿಯೊಬ್ಬರಲ್ಲೂ ಇರುತ್ತೆ. ಇದನ್ನೇ ಹಿನ್ನೆಲೆಯಾಗಿಟ್ಟು ಈ ಸಿನಿಮಾದ ಕಥೆ ಹೆಣೆಯಲಾಗಿದೆ.
ಈ ಸಿನಿಮಾ ರಾಜ್ ಗುರು ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೌರಿ ಶಂಕರ್ ಜೊತೆಗೆ ಬಿಂದು ಶಿವರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿದ್ದಾರೆ.