
ವಿಜಯ್ ಅಭಿನಯದ 'ಜನ ನಾಯಕನ್' ಪ್ರದರ್ಶನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ಕಾವು: ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಜನ ನಾಯಕನ್' ಪ್ರದರ್ಶನ ಸ್ಥಗಿತ
ಕಾವೇರಿ ವಿವಾದದ ನಡುವೆಯೇ ಬೆಂಗಳೂರಿನ ಪೂರ್ಣಿಮಾ, ಊರ್ವಶಿ ಸೇರಿ ಕೆಲವು ಚಿತ್ರಮಂದಿರಗಳಲ್ಲಿ ವಿಜಯ್ ಅಭಿನಯದ 'ಜನ ನಾಯಕನ್' ಪ್ರದರ್ಶನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ನೀರಿನ ಹಂಚಿಕೆ ವಿವಾದದ ಪರಿಣಾಮ ತಮಿಳು ನಟ ವಿಜಯ್ ಅಭಿನಯದ 'ಜನ ನಾಯಕನ್' ಚಿತ್ರದ ಕರ್ನಾಟಕ ಪ್ರದರ್ಶನದ ಮೇಲೆ ಮತ್ತೊಮ್ಮೆ ಬಿದ್ದಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಈ ಚಿತ್ರಕ್ಕೆ ಇದೀಗ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹೊಸ ಸವಾಲಾಗಿ ಪರಿಣಮಿಸಿದೆ.
ಶುಕ್ರವಾರ ಬೆಂಗಳೂರಿನ ಪೂರ್ಣಿಮಾ ಹಾಗೂ ಊರ್ವಶಿ ಚಿತ್ರಮಂದಿರಗಳಲ್ಲಿ 'ಜನ ನಾಯಕನ್' ಪ್ರದರ್ಶನ ನಡೆಯುತ್ತಿದ್ದ ವೇಳೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದದ್ದರು. ಕಾವೇರಿ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ ತಮಿಳು ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಚಿತ್ರಮಂದಿರ ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರದರ್ಶನ ಸ್ಥಗಿತ, ಸ್ಪೈಡರ್-ಮ್ಯಾನ್ ಚಿತ್ರ ಪ್ರದರ್ಶನ ಆರಂಭ
ಪ್ರತಿಭಟನೆಯ ಬಳಿಕ ಪೂರ್ಣಿಮಾ, ಊರ್ವಶಿ ಸೇರಿದಂತೆ ಕೆಲವು ಏಕಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳಲ್ಲಿ 'ಜನ ನಾಯಕನ್' ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು. ಅದರ ಬದಲಾಗಿ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರದ ಪ್ರದರ್ಶನ ಆರಂಭಿಸಲಾಯಿತು. ಇದೇ ವೇಳೆ ಚಿತ್ರಮಂದಿರಗಳ ಮುಂಭಾಗದಲ್ಲಿದ್ದ ವಿಜಯ್ ಅವರ ಕಟೌಟ್‌ಗಳು ಹಾಗೂ ಚಿತ್ರದ ಪ್ರಚಾರ ಬ್ಯಾನರ್‌ಗಳನ್ನು ಕೂಡ ತೆರವುಗೊಳಿಸಲಾಯಿತು. ಈ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಂಡ್ಯದಲ್ಲೂ ರದ್ದಾಗಿದ್ದ ಪ್ರದರ್ಶನ
ಇದು ಕರ್ನಾಟಕದಲ್ಲಿ 'ಜನ ನಾಯಕನ್' ಚಿತ್ರದ ಪ್ರದರ್ಶನಕ್ಕೆ ಎದುರಾದ ಎರಡನೇ ಅಡ್ಡಿಯಾಗಿದೆ. ಬುಧವಾರ ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ನಿಗದಿಯಾಗಿದ್ದ ಪ್ರದರ್ಶನವನ್ನು ಕನ್ನಡಪರ ಸಂಘಟನೆಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಕಾವೇರಿ ವಿವಾದದ ಕಾರಣ ತಮಿಳು ಚಿತ್ರದ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿತ್ತು.
ಇನ್ನೂ ಹಲವು ನಗರಗಳಲ್ಲಿ ಪ್ರದರ್ಶನ ಮುಂದುವರಿಕೆ
ಪ್ರತಿಭಟನೆಗಳ ನಡುವೆಯೂ 'ಜನ ನಾಯಕನ್' ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಉತ್ತಮ ಆರಂಭಿಕ ಗಳಿಕೆ ದಾಖಲಿಸಿದ್ದ ಚಿತ್ರ ಮೊದಲ ವಾರ ಪೂರ್ಣಗೊಂಡ ಬಳಿಕವೂ ಹಲವು ಕೇಂದ್ರಗಳಲ್ಲಿ ಪ್ರದರ್ಶನ ಮುಂದುವರಿಸಿದೆ.
ಚಿತ್ರದ ಭವಿಷ್ಯದ ಮೇಲೆ ಅನಿಶ್ಚಿತತೆ
ಹೊಸ ಪ್ರತಿಭಟನೆಗಳಿಂದಾಗಿ ಚಿತ್ರದ ಮುಂದಿನ ಪ್ರದರ್ಶನದ ಕುರಿತು ಅನಿಶ್ಚಿತತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಪ್ರದರ್ಶನದ ಮೇಲೆ ಪರಿಣಾಮ ಬೀಳಬಹುದೇ ಎಂಬುದನ್ನು ಪ್ರದರ್ಶಕರು ಗಮನಿಸುತ್ತಿದ್ದಾರೆ. ಶುಕ್ರವಾರದ ಪ್ರತಿಭಟನೆ ವೇಳೆ ಯಾವುದೇ ದೊಡ್ಡ ಕಾನೂನು-ಸುವ್ಯವಸ್ಥೆ ಸಮಸ್ಯೆ ವರದಿಯಾಗಿಲ್ಲ. ಆದರೆ ಕಾವೇರಿ ವಿವಾದವು ಮತ್ತೆ ಮನರಂಜನಾ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.
ಈ ಬೆಳವಣಿಗೆ ಕುರಿತು ಚಿತ್ರದ ನಿರ್ಮಾಪಕರು ಅಥವಾ ನಿರ್ಮಾಣ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

