
ಸಿನಿಮಾ ಪ್ರೇಕ್ಷಕರ ಜೇಬಿಗೆ ಕತ್ತರಿ: ಟಿಕೆಟ್‌ಗೆ 5 ರಿಂದ 6 ರೂಪಾಯಿ ಹೆಚ್ಚುವರಿ ಹೊರೆ
ರಾಜ್ಯದಲ್ಲಿ ಸಿನಿಮಾ ಪ್ರೇಕ್ಷಕರಿಗೆ ಬೆಲೆ ಏರಿಕೆ ಬಿಸಿ: ಸೆಪ್ಟೆಂಬರ್ 30ರಿಂದ ಟಿಕೆಟ್‌ಗಳ ಮೇಲೆ ಸೆಸ್
ಶೇ.2ರ ಸೆಸ್ ಅನ್ನು ಸಂಪೂರ್ಣವಾಗಿ ಪ್ರೇಕ್ಷಕರಿಗೆ ವರ್ಗಾಯಿಸಿದರೆ, 300 ರೂ. ಟಿಕೆಟ್‌ಗೆ ಸುಮಾರು 6 ರೂ. ಹೆಚ್ಚುವರಿ ಹೊರೆ ಬೀಳಬಹುದು.
ರಾಜ್ಯದಲ್ಲಿ ಸಿನಿಮಾ ವೀಕ್ಷಿಸುವವರಿಗೆ ಶೀಘ್ರದಲ್ಲೇ ಹೆಚ್ಚುವರಿ ಖರ್ಚು ಎದುರಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 30ರಿಂದ ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.1ರಿಂದ ಶೇ.2ರವರೆಗೆ ಸೆಸ್ ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಈಗಿಗಿಂತ ಹೆಚ್ಚಿನ ಹಣ ಪಾವತಿಸಬೇಕಾಗುವ ಸಾಧ್ಯತೆ ಇದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಕಾಯ್ದೆಯಡಿ ಸಿನಿಮಾ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರರಂಗ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಹಣವನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಸೆಪ್ಟೆಂಬರ್ 30ರಿಂದ ಹೊಸ ಸೆಸ್ ಜಾರಿಗೆ ಬರಲಿದ್ದು, ಇದರ ಪರಿಣಾಮ ಟಿಕೆಟ್ ದರದ ಮೇಲೆ ಹೇಗೆ ಬೀಳಲಿದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಪ್ರೇಕ್ಷಕರಿಗೆ ಎಷ್ಟು ಹೊರೆ?
ಶೇ.2ರ ಸೆಸ್‌ನ ಸಂಪೂರ್ಣ ಹೊಣೆಯನ್ನು ಚಿತ್ರಮಂದಿರಗಳು ಪ್ರೇಕ್ಷಕರಿಗೆ ವರ್ಗಾಯಿಸಿದರೆ, ಟಿಕೆಟ್ ದರದಲ್ಲಿ ಹೆಚ್ಚಳವಾಗಬಹುದು. ಉದಾಹರಣೆಗೆ, 300 ರೂ. ಬೆಲೆಯ ಟಿಕೆಟ್‌ಗೆ ಶೇ.2ರ ಲೆಕ್ಕದಲ್ಲಿ 6 ರೂ. ಹೆಚ್ಚುವರಿ ಮೊತ್ತವಾಗಬಹುದು. 250 ರೂ. ಟಿಕೆಟ್‌ಗೆ 5 ರೂ. ಹೆಚ್ಚುವರಿ ಹೊರೆ ಬೀಳಬಹುದು. ಆದರೆ ಅಂತಿಮವಾಗಿ ಪ್ರೇಕ್ಷಕರು ಪಾವತಿಸಬೇಕಾದ ಮೊತ್ತವು ಸೆಸ್ ಅನ್ನು ಚಿತ್ರಮಂದಿರಗಳು ಹೇಗೆ ಜಾರಿಗೊಳಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಹೆಚ್ಚುವರಿ ಸೆಸ್‌ಗೆ ಮಲ್ಟಿಪ್ಲೆಕ್ಸ್‌ಗಳ ವಿರೋಧ
ಹೊಸ ಸೆಸ್‌ಗೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಸಿನಿಮಾ ಟಿಕೆಟ್‌ಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದರ ಮೇಲೆ ಮತ್ತೊಂದು ಸೆಸ್ ವಿಧಿಸುವುದರಿಂದ ಸಿನಿಮಾ ಪ್ರೇಕ್ಷಕರ ಮೇಲಿನ ತೆರಿಗೆ ಹೊರೆ ಮತ್ತಷ್ಟು ಹೆಚ್ಚಲಿದೆ ಎಂದು ಸಂಘಟನೆ ಆಕ್ಷೇಪಿಸಿದೆ.
ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧ
ಚಿತ್ರರಂಗದ ಕಾರ್ಮಿಕರು ಮತ್ತು ಸಾಂಸ್ಕೃತಿಕ ಕ್ಷೇತ್ರದವರಿಗೆ ಕಲ್ಯಾಣ ಯೋಜನೆಗಳ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿರುವ ಮಲ್ಟಿಪ್ಲೆಕ್ಸ್ ವಲಯ, ಆದರೆ ಅದಕ್ಕಾಗಿ ಪ್ರೇಕ್ಷಕರ ಮೇಲೆ ಹೆಚ್ಚುವರಿ ಹೊರೆ ಹಾಕುವ ಬದಲು ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರದೊಂದಿಗೆ ಚರ್ಚೆ ನಡೆಸಲು ಸಂಘಟನೆ ಮುಂದಾಗಿದೆ.

