
ಚಿತ್ರೀಕರಣದ ಸಮಯದಲ್ಲಿ ತಾನು ಮಾಂಸಾಹಾರ ಸೇವಿಸಿಲ್ಲ ಮತ್ತು ಚಪ್ಪಲಿ ಧರಿಸಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
Kantara Chapter -1: ಶೂಟಿಂಗ್ ವೇಳೆ ಆಧ್ಯಾತ್ಮಿಕ ನಿಯಮ ಪಾಲನೆ; ಮಾಂಸಾಹಾರ ತ್ಯಜಿಸಿದ್ದ ರಿಷಬ್
ರಿಷಬ್ ಶೆಟ್ಟಿ ನಿರ್ದೇಶನ, ಅಭಿನಯದ ಕಾಂತಾರಾ ಅಧ್ಯಾಯ-1 ಚಿತ್ರವು ಅವರಿಗೆ ಆತ್ಮೀಯ ಮತ್ತು ಆಧ್ಯಾತ್ಮಿಕವಾಗಿ ಗಾಢವಾದ ಪ್ರಯಾಣವಾಗಿತ್ತು. ಪಶ್ಚಿಮ ಘಟ್ಟಗಳ ಬಳಿಯ ಕರಾವಳಿ ಪಟ್ಟಣ ಕುಂದಾಪುರದಿಂದಲೇ ಅವರು ಮೂರು ವರ್ಷ ಈ ಲೋಕದಲ್ಲಿ ಮುಳುಗಿದ್ದರು.
ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸುವ ಕನ್ನಡ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಮುನ್ನೋಟವಾಗಿರುವ ʼಕಾಂತಾರ: ಎ ಲೆಜೆಂಡ್ ಚಾಪ್ಟರ್- 1ʼಗೆ ನಿರೀಕ್ಷೆ ಗರಿಗೆದರಿದೆ. ಮೂರು ವರ್ಷಗಳಿಂದ ತಯಾರಾದ ಈ ಚಿತ್ರ ಅ.2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಶತಮಾನಗಳ ಹಿಂದಿನ ಕಥೆಯೇ ಚಿತ್ರದ ಕಥಾವಸ್ತುವಾಗಿದೆ. ಅರಣ್ಯ ಪುರಾಣ, ಆಚರಣೆ, ನಂಬಿಕೆಗಳನ್ನು ಆಳವಾಗಿ ತೋರಿಸುವ ಈ ಚಿತ್ರ 2022ರಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈಗ ಕಾಂತಾರಾ ಅಧ್ಯಾಯ-1 ಮೂಲ ಚಿತ್ರದ ಲೋಕವನ್ನು ಇನ್ನಷ್ಟು ವಿಸ್ತರಿಸಲಿದೆ. ಮೊದಲ ಚಿತ್ರದ ವಾತಾವರಣ ಮತ್ತು ನೈಜ ಭಾವನೆಗಳನ್ನೇ ಈ ಚಿತ್ರ ಒಳಗೊಂಡಿದೆ. ಚಿತ್ರದ ಮುನ್ನೋಟವು ಭವ್ಯ ದೃಶ್ಯಾವಳಿ, ಸಾವಿರಾರು ಕಲಾವಿದರು ಭಾಗವಹಿಸಿದ ಯುದ್ಧ ದೃಶ್ಯಗಳನ್ನು ಒಳಗೊಂಡಿದೆ. ಬಲ್ಗೇರಿಯಾ, ಕನ್ನಡ ಮತ್ತು ತಮಿಳು ಸ್ಟಂಟ್ ತಜ್ಞರು ಸೇರಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಬರಹ, ನಿರ್ದೇಶನ, ಅಭಿನಯ ಇವೆಲ್ಲವನ್ನೂ ಹೊತ್ತಿರುವ ಈ ಚಿತ್ರ ಅವರಿಗೆ ಆತ್ಮೀಯ ಮತ್ತು ಆಧ್ಯಾತ್ಮಿಕವಾಗಿ ಗಾಢವಾದ ಪ್ರಯಾಣವಾಗಿದೆ. ಪಶ್ಚಿಮ ಘಟ್ಟಗಳ ಬಳಿ ಇರುವ ಕರಾವಳಿ ಪಟ್ಟಣ ಕುಂದಾಪುರದಿಂದಲೇ ಅವರು ಮೂರು ವರ್ಷ ಈ ಲೋಕದಲ್ಲಿ ಮುಳುಗಿದ್ದರು. ಮೊದಲ ಚಿತ್ರದ ಯಶಸ್ಸಿನ ಒತ್ತಡದ ನಡುವೆ ಶೆಟ್ಟಿಗೆ ಇದು ನರ್ವಸ್ ಕ್ಷಣವೂ ಆಗಿದೆ.
ಅಧ್ಯಾತ್ಮದ ಮೊರೆ ಹೋಗಿದ್ದ ರಿಷಬ್
ಕೇರಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ತಮ್ಮ ಆಧ್ಯಾತ್ಮಿಕ ಅನುಸರಣೆಗಳ ಬಗ್ಗೆ ಮಾತನಾಡಿದರು. ಮಾಂಸಾಹಾರ ತ್ಯಜಿಸಿದ್ದೀರಾ?, ಚಪ್ಪಲಿಗಳನ್ನು ಧರಿಸದೆ ಇದ್ದೀರಾ? ಎಂಬ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡುತ್ತಾ, ಶೂಟಿಂಗ್ ಸಮಯದಲ್ಲಿ ಈ ಎಲ್ಲಾ ಆಚರಣೆಗಳನ್ನು ಅನುಸರಿಸಿದ್ದೆ. ಇದು ನನಗೆ ಹೊಸ ಅನುಭವವಾಗಿತ್ತು. ಮನಸ್ಸಿನಲ್ಲಿ ಗೊಂದಲವಿರಬಾರದು ಎನ್ನುವ ಕಾರಣದಿಂದ ಮಾಡಿದೆ. ನಾನು ನಂಬುವ ದೇವರು, ಆದ್ದರಿಂದ ನಿಯಮ ಪಾಲನೆ ಮಾಡಿದೆ ಎಂದರು.
ಮೊದಲ ಚಿತ್ರ ಕಾಂತಾರ ಚಿತ್ರದಲ್ಲಿಯೂ ಭೂತ ಕೋಲ ದೃಶ್ಯಗಳಲ್ಲಿ ಅವರು ವಿಶೇಷ ಕ್ರಮ ಪಾಲಿಸಿದ್ದರು. ಶೂಟಿಂಗ್ ಮುಂಚಿನ 20–30 ದಿನ ಮಾಂಸಾಹಾರ ಬಿಟ್ಟು, ವೇಷದಲ್ಲಿ ಇರುವಾಗ ತೆಂಗಿನಕಾಯಿ ನೀರು ಮಾತ್ರ ಸೇವಿಸಿ, ಚಿತ್ರೀಕರಣದ ಮೊದಲು ಮತ್ತು ನಂತರ ಪ್ರಸಾದ ಸ್ವೀಕರಿಸಿದ್ದರು.
ಅಲ್ಲದೆ ಆ ದೃಶ್ಯಗಳಿಗೆ ಅತಿ ಕಡಿಮೆ ಸಿಬ್ಬಂದಿ ಮಾತ್ರ ಹಾಜರಾಗುವಂತೆ ನೋಡಿಕೊಂಡಿದ್ದರು. ಸಾಮಾನ್ಯವಾಗಿ ಸಾವಿರಾರು ಮಂದಿ ಸೆಟ್‌ನಲ್ಲಿ ಇರುತ್ತಾರೆ. ಆದರೆ ಈ ದೃಶ್ಯಗಳಲ್ಲಿ ನಾನು ಎಚ್ಚರಿಕೆ ವಹಿಸಿದ್ದೇನೆ. ನಂಬಿಕೆ ಪ್ರಶ್ನಿಸುವುದಿಲ್ಲ, ಗೌರವಿಸುತ್ತೇನೆ. ಅದನ್ನೇ ಪ್ರತಿಯಾಗಿ ಬಯಸುತ್ತೇನೆ ಎಂದರು.
ಕಾಂತಾರ ಈಗ ಎರಡು ಭಾಗಗಳ ಕಥೆಯಷ್ಟೇ ಅಲ್ಲ, ಪುರಾಣ, ಆಧ್ಯಾತ್ಮಿಕತೆ, ಪಾರಂಪರಿಕ ಸಂಘರ್ಷ ಒಳಗೊಂಡ ಚಲನಚಿತ್ರ ವಿಶ್ವದತ್ತ ವಿಸ್ತರಿಸುತ್ತಿದೆ. ಟ್ರೇಲರ್‌ನಲ್ಲಿ ಗ್ರಾಮವನ್ನು ರಕ್ಷಿಸಲು ಕ್ರೂರ ರಾಜನ ವಿರುದ್ಧ ಎದ್ದುನಿಲ್ಲುವ ಯೋಧನಾಗಿ ರಿಷಬ್ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ಕಂಡ ಪುರಾಣಗಳ ಮೂಲ, ಮಾನವ-ಪ್ರಕೃತಿ ಸಂಘರ್ಷ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಇದು ಆಳವಾಗಿ ಅನ್ವೇಷಿಸಲಿದೆ.
ಇನ್ನೊಂದೆಡೆ, ಕೇರಳ ಪುರಾಣದ ಆಧಾರದ ಮೇಲೆ ನಿರ್ಮಿತ ಲೋಕಹ್-ಚಾಪ್ಟರ್ -1 ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವಾಗ ಕಾಂತಾರ : ಎ ಲೆಜೆಂಡ್ ಚಾಪ್ಟರ್- 1 ಕೂಡ ಪ್ರೇಕ್ಷಕರ ಮನ ಗೆಲ್ಲುವ ನಿರೀಕ್ಷೆಯಲ್ಲಿದೆ.