
ರಿಷಬ್ ಶೆಟ್ಟಿ
ಕೆಲವೇ ಗಂಟೆಗಳಲ್ಲಿ ಜನಮನ ಗೆದ್ದ 'ಕಾಂತಾರ ಚಾಪ್ಟರ್ 1' ಟ್ರೇಲರ್
ಬಿಡುಗಡೆಯಾದ 21 ಗಂಟೆಯಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಬರೋಬ್ಬರಿ 70 ಲಕ್ಷ ಜನ ವೀಕ್ಷಿಸಿದ್ದಾರೆ.
ಜನಪ್ರಿಯ ನಟ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ ಚಾಪ್ಟರ್ 1' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದ್ದು, ಕೇವಲ 21 ಗಂಟೆಯಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಬರೋಬ್ಬರಿ 70 ಲಕ್ಷ ಜನ ವೀಕ್ಷಿಸಿದ್ದಾರೆ. ಅಲ್ಲದೆ ಟ್ರೇಲರ್ ಅದ್ಭುತವಾಗಿದ್ದು, 'ಕಾಂತಾರವನ್ನು ದೇಶದ ಜನ ಮತ್ತೊಮ್ಮೆ ಮೆಚ್ಚುವಂತಾಲಿ' ಎಂದು ಶುಭಹಾರೈಸಿದ್ದಾರೆ.
ಟ್ರೇಲರ್ ಕಥಾಹಂದರ
ಬಾಲಕನೊಬ್ಬ 'ನನ್ನ ತಂದೆ ಕಾಣೆಯಾದ ಜಾಗ ಇದೇನಾ?' ಎಂದು ಕೇಳುವುದರೊಂದಿಗೆ ದಂತಕಥೆ ಬಿಚ್ಚಿಕೊಳ್ಳುತ್ತದೆ. ಕಥೆಯಲ್ಲಿ ಕಾರಣಿಕದ ಕಲ್ಲು, ರಕ್ತ ಗೋಚರದ ಜತೆಗೆ ಹಿನ್ನೆಲೆ ಧ್ವನಿಯಲ್ಲಿ 'ದೈವೀ ಸ್ವರೂಪಿ ಈಶ್ವರನು ಧರ್ಮ ರಕ್ಷಣೆಗಾಗಿ ಗಣಗಳನ್ನು ಕಳುಹಿಸಿಕೊಡುತ್ತಾನೆ' ಎಂಬುದು ಕೇಳಿಸುತ್ತದೆ. ಇದರೊಂದಿಗೆ ಭೂಮಿ ಮೇಲೆ ಜನ್ಮತಾಳುವ ಮಾನವ 'ಕಾಂತಾರ' ಎಂಬ ಊರನ್ನು ಕಟ್ಟಿಕೊಳ್ಳುತ್ತಾನೆ. ಇಲ್ಲಿ ಮತ್ತೊಂದು ವಿರೋಧಿ ಗುಂಪು ಹುಟ್ಟಿಕೊಳ್ಳಲಿದ್ದು, ಅದೇ 'ಬ್ರಹ್ಮ ರಾಕ್ಷಸ ಗಣ'.
ಕಾಡನ್ನು ಗದ್ದೆ ಮಾಡಿಕೊಂಡು, ಬೆಳೆದ ಬೆಳೆಯ ಪಾಲನ್ನು ಕೊಡುವುದು ನಿಲ್ಲಿಸಿದ್ದರಿಂದ ಬ್ರಹ್ಮ ರಾಕ್ಷಸ ಗಣವು 'ಕಾಂತಾರ' ಜನರ ವ್ಯಾಪಾರಕ್ಕೆ ಅಡ್ಡಿ ಪಡಿಸುತ್ತದೆ. ಇದಾದ ಬಳಿಕ 'ನಮ್ಮನ್ನು ನೋಡೋಕೆ ನೀವು ಬಂದಿದ್ದಿರಿ, ನಿಮ್ಮನ್ನು ನೋಡೋಕೆ ನಾವು ಬರಬಾರದೇ?' ಎಂಬ ನಾಯಕ ನಟನ ಮಾತು ನಟಿಯ ಮೊಗದಲ್ಲಿ ನಗು ತರಿಸಿ, 'ಅದಕ್ಕೇ ಹತ್ತಿರ ಬಂದಿದ್ದು' ಎನ್ನುತ್ತಾ ನಟನ ಕೈ ಹಿಡಿಯುತ್ತಾಳೆ. ಇದರೊಂದಿಗೆ ವಿರೋಧಿ ಗುಂಪಿನಲ್ಲಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ತರುವಾಯ ಯುವರಾಣಿಯು ನಟನ ಜೊತೆ ಇರುವುದನ್ನು ಗಮನಿಸುವ ಅಂಗರಕ್ಷಕ 'ಆತ ನಿಮ್ಮ ಗದ್ದುಗೆ ಮೇಲೆ ಕಣ್ಣು ಹಾಕಿದಂತಿದೆ' ಎಂದು ಎಚ್ಚರಿಸುತ್ತಾನೆ. ಇಲ್ಲಿ ಮತ್ತೊಮ್ಮೆ ರಕ್ತಚರಿತ್ರೆ ಹುಟ್ಟಿಕೊಳ್ಳುತ್ತದೆ. ಅಲ್ಲಿಗೆ ದಂತಕಥೆ ಮುಗಿದು ನಿಜ ಜೀವನ ಚರಿತ್ರೆ ತೆರೆದುಕೊಳ್ಳುತ್ತದೆ. ನಾಯಕ ನಟನು 'ಈಶ್ವರ ದೇವ ಇಲ್ಲಿಗೆ ಬಂದಿದ್ದಷ್ಟೇ ಅಲ್ಲ, ಇಲ್ಲಿಯೇ ನೆಲೆಸಿದ್ದರು' ಎಂದು ಹೇಳಿದ ಮೇಲೆ ಟ್ರೇಲರ್ ಅಂತ್ಯವಾಗುತ್ತದೆ.
ಒಟ್ಟಾರೆ ಪೂರ್ವಜರ ಗಣಗಳಾಗಿ ಕಾಣಿಸಿಕೊಳ್ಳುವ ಎರಡು ಗುಂಪಿನ ನಡುವೆ ಹೊಡೆದಾಟ, ಬಡಿದಾಟದ ನಡುವೆಯೂ ಸುಂದರವಾದ 'ಪ್ರೇಮ್ ಕಹಾನಿ' ಇದೆ ಎಂಬುದು ಸಾಬೀತಾಗುವುದಂತೂ ಸತ್ಯ. ಅಂದಹಾಗೆ ಚಿತ್ರದ ಟ್ರೇಲರ್ ಅನ್ನು ಹೃತಿಕ್ ರೋಷನ್, ಶಿವ ಕಾರ್ತಿಕೇಯನ್, ಪ್ರಭಾಸ್ ಅವರು ಬಿಡುಗಡೆ ಮಾಡಿದ್ದರು.
ನನ್ನ ಪತ್ನಿಯೇ ನನಗೆ ಶಕ್ತಿ ಎಂದ ರಿಷಬ್
ಟ್ರೇಲರ್ ಬಿಡುಗಡೆ ಬಳಿಕ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ರಿಷಬ್, ನಾನು ಚಿತ್ರ ಮಾಡುವುದರಲ್ಲೇ ಮುಳುಗಿ ಹೋಗಿದ್ದೆ. ಅಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗಿ ಚಿತ್ರ ಮಾಡದಂತಹ ಸ್ಥಿತಿಗಳು ಎದುರಾಗುತ್ತಿದ್ದವು. ಕೌಟುಂಬಿಕ ಜೀವನ, ಚಿತ್ರಕ್ಕೆ ಶಕ್ತಿಯಾಗಿ ನನ್ನ ಪತ್ನಿ ಪ್ರಗತಿ ನಿಂತಿದ್ದಳು. ಆಕೆಗೆ ಹಾಗೂ ನಿರ್ಮಾಪಕರು, ಕಲಾವಿದರು, ತಂತ್ರಜ್ಞರು, ಮಾಧ್ಯಮದವರು, ಪ್ರೇಕ್ಷಕರಿಗೆಲ್ಲರಿಗೂ ನಾನು ಹೃದಯಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರೇ ರಚಿಸಿ, ನಿರ್ದೇಶಿಸಿದ್ದು, ಬಾಲಿವುಡ್ ನಟ ಗುಲ್ಶನ್ ದೇವಯ್ಯ, 'ಸಪ್ತಸಾಗರದಾಚೆ ಎಲ್ಲೋ' ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಸೇರಿದಂತೆ ಹೊಸ ಕಲಾವಿದರು ತಾರಾಬಳಗದಲ್ಲಿ ಮಿಂಚಿದ್ದಾರೆ. ವಿಜಯ್ ಕಿರಗಂದೂರು ಮತ್ತು ಚೆಲುವೇಗೌಡ ಅವರು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಅರವಿಂದ್ ಕಶ್ಯಪ್ ಅವರು ದೃಶ್ಯಾವಳಿಗಳನ್ನು ಸುಂದರವಾಗಿ ಸೆರೆಹಿಡಿಯುವ ಮುಖೇನ ತಮ್ಮ ಕೈಚಳಕವನ್ನು ತೋರಿದ್ದಾರೆ. ಇನ್ನು ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, 'ಹೊಂಬಾಳೆ ಫಿಲಂಸ್' ಬ್ಯಾನರ್ ಅಡಿಯಲ್ಲಿ ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಒಟ್ಟು 125 ಕೋಟಿ ರೂ. ಬಂಡವಾಳ ಹೂಡಿದ್ದು, ಅ.2ರಂದು ತೆರೆಗಪ್ಪಳಿಸಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ವಿಶ್ವದೆಲ್ಲೆಡೆ ತೆರೆಕಂಡು ಜನಮನಗೆದ್ದಿತ್ತು.