ಕಾಂತಾರ ಚಾಪ್ಟರ್​ 1: ದ ಫೆಡರಲ್ ಕರ್ನಾಟಕದ ಜೊತೆ ರಾಜಮಾತೆಯ ಮನದಾಳದ ಮಾತು
x

'ಕಾಂತಾರ ಚಾಪ್ಟರ್​ 1': 'ದ ಫೆಡರಲ್ ಕರ್ನಾಟಕದ' ಜೊತೆ 'ರಾಜಮಾತೆಯ' ಮನದಾಳದ ಮಾತು

ಮಿಂಚಿದ ಪುತ್ತೂರು ಮೂಲದ ರಮಿತಾ ಶೈಲೇಂದ್ರ ಅವರು, 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡುತ್ತಾ, ಚಿತ್ರದ ತೆರೆಮರೆಯ ಸತ್ಯಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.


ರಿಷಬ್ ಶೆಟ್ಟಿಯವರ 'ಕಾಂತಾರ ಚಾಪ್ಟರ್ 1' ಸಿನಿಮಾವು ಬಿಡುಗಡೆಯಾದ ಮೂರೇ ದಿನಕ್ಕೆ ವಿಶ್ವಾದ್ಯಂತ 200 ಕೋಟಿ ರೂಪಾಯಿ ಬಾಚಿಕೊಂಡು, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಆದರೆ, ಬೆಳ್ಳಿತೆರೆಯ ಮೇಲಿನ ಈ ಅಭೂತಪೂರ್ವ ಯಶಸ್ಸಿನ ಹಿಂದೆ, ಸಾಲು-ಸಾಲು ದುರಂತಗಳು, ವಿವಾದಗಳು ಮತ್ತು ಅಗ್ನಿಪರೀಕ್ಷೆಗಳ ನೋವಿನ ಕಥೆಯಿದೆ. ಈ ಸಿನಿಮಾದಲ್ಲಿ ನಾಯಕಿ ರುಕ್ಮಿಣಿ ವಸಂತ್ ಅವರ ತಾಯಿ, 'ರಾಜಮಾತೆ ರಾಜಲಕ್ಷ್ಮಿ' ಪಾತ್ರದಲ್ಲಿ ಮಿಂಚಿದ ಪುತ್ತೂರು ಮೂಲದ ರಮಿತಾ ಶೈಲೇಂದ್ರ ಅವರು, 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡುತ್ತಾ, ಚಿತ್ರದ ತೆರೆಮರೆಯ ಸತ್ಯಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಕಾಂತಾರ'ದ ಪಾತ್ರ ನನ್ನನ್ನು ಅರಸಿಕೊಂಡು ಬಂತು

"ನನಗೆ ಈ ಅವಕಾಶ ಸಿಕ್ಕಿದ್ದು ನಿಜಕ್ಕೂ 'ಗಾಡ್ ಗಿಫ್ಟ್'. ನಾನು ಯಾವುದೇ ಅಪೇಕ್ಷೆ ಪಟ್ಟಿರಲಿಲ್ಲ, ಈ ಪಾತ್ರವೇ ನನ್ನನ್ನು ಅರಸಿಕೊಂಡು ಬಂತು. ನಾನು ಸಮಾಜಸೇವೆ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯಳಾಗಿರುವುದರಿಂದ, ಆ ಮೂಲಕವೇ ಈ ಅವಕಾಶ ಬಂದಿರಬಹುದು," ಎಂದು ರಮಿತಾ ಅವರು ತಮ್ಮ ಸಿನಿಮಾ ಪಯಣ ಆರಂಭವಾದ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ನಾಟಕ ಮತ್ತು ಯಕ್ಷಗಾನದಲ್ಲಿ ಅನುಭವವಿದ್ದರೂ, ಇದುವೇ ಅವರ ಚೊಚ್ಚಲ ಸಿನಿಮಾ. "ನಾನು ನಟಿಸಿದ ಮೊದಲ ಸಿನಿಮಾವೇ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ," ಎನ್ನುತ್ತಾರೆ ಅವರು.

ಒಂದು ದೃಶ್ಯಕ್ಕೆ ಒಂದು ದಿನದ ಶೂಟಿಂಗ್

ಶೂಟಿಂಗ್ ಅನುಭವದ ಬಗ್ಗೆ ಮಾತನಾಡಿದ ಅವರು, "ನನಗೆ ಒಟ್ಟು 25 ದಿನಕ್ಕೂ ಹೆಚ್ಚು ಶೂಟಿಂಗ್ ಇತ್ತು. ಇಲ್ಲಿ ನಿಮಗೆ ದಿನಗಳ ಲೆಕ್ಕ ಸಿಗಬಹುದು, ಆದರೆ ಅಲ್ಲಿ ಒಂದು ದೃಶ್ಯಕ್ಕಾಗಿ ಇಡೀ ದಿನವನ್ನೇ ಮೀಸಲಿಡುತ್ತಿದ್ದರು. ರಿಷಬ್ ಶೆಟ್ಟಿಯವರು ಅಷ್ಟೊಂದು 'ಪರ್ಫೆಕ್ಷನ್' ಬಯಸುತ್ತಾರೆ. ಅವರ ತಾಳ್ಮೆ ನನಗೆ ಹೆಚ್ಚು ಇಷ್ಟವಾಯಿತು. ಸಾವಿರಾರು ಜನರಿದ್ದರೂ, ಎಲ್ಲರಿಗೂ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. ಅಂತಹ ಮಹಾತ್ಮರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ," ಎಂದು ವಿವರಿಸಿದರು. "ಆರಂಭದಲ್ಲಿ, ಪಟ್ಟಾಭಿಷೇಕದ ದೃಶ್ಯದಲ್ಲಿ ಬರುವ 'ಸಮಂತ ರಾಣಿ'ಯ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದರೆ, ದಿಢೀರ್ ಬದಲಾವಣೆಯಲ್ಲಿ ನಾಯಕಿ ರುಕ್ಮಿಣಿ ವಸಂತ್ ಅವರ ತಾಯಿಯ ಪಾತ್ರವಾದ 'ರಾಜಮಾತೆ ರಾಜಲಕ್ಷ್ಮಿ'ಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತು," ಎಂದು ಹೇಳಿದರು.

ಸಿನಿಮಾದ ಮೇಲಿದ್ದ 'ದೈವದ ಶಾಪ'ದ ಆರೋಪ ಕಪೋಲಕಲ್ಪಿತ

ಶೂಟಿಂಗ್ ಸಮಯದಲ್ಲಿ ನಡೆದ ಅವಘಡಗಳು ಮತ್ತು ಕೆಲವರ ಹಠಾತ್ ನಿಧನದಿಂದಾಗಿ, ಸಿನಿಮಾದ ಮೇಲೆ 'ದೈವದ ಶಾಪ'ವಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ರಮಿತಾ, "ಪ್ರತಿಭಾವಂತ ನಟ ರಾಕೇಶ್ ಪೂಜಾರಿ ನನ್ನ ಸಹೋದರನಿದ್ದಂತೆ. ಅವರನ್ನು ಕಳೆದುಕೊಂಡಿದ್ದು ನಮಗೆಲ್ಲ ತುಂಬಲಾರದ ನಷ್ಟ. ಆದರೆ, ಶೂಟಿಂಗ್ ಸೆಟ್‌ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಇದೆಲ್ಲಾ ಕಪೋಲಕಲ್ಪಿತ ವಿಚಾರವಷ್ಟೇ. ದೈವದ ಅಭಯ ಮತ್ತು ರಿಷಬ್ ಶೆಟ್ಟಿಯವರ ಮೇಲಿದ್ದ ಸಂಪೂರ್ಣ ದೈವದ ಅನುಗ್ರಹದಿಂದಲೇ ಇಡೀ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯವಾಯಿತು," ಎಂದು ದೃಢವಾಗಿ ನುಡಿದರು.

ತೆರೆಯ ಹಿಂದೆ ಪ್ರಗತಿ ಶೆಟ್ಟಿ ಶ್ರಮ

ತೆರೆಯ ಹಿಂದೆ ರಿಷಬ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿಯವರ ಕಾರ್ಯವನ್ನು ಶ್ಲಾಘಿಸಿದ ಅವರು, "ಕಾಸ್ಟ್ಯೂಮ್ ಡಿಸೈನ್ ವಿಷಯದಲ್ಲಿ ಅವರ ಕೆಲಸ ಮೆಚ್ಚುವಂತಹದ್ದು. ಪ್ರತಿಯೊಂದನ್ನು ಅಳೆದು-ತೂಗಿ ಯೋಚಿಸುತ್ತಿದ್ದರು. ರಾಜಮಾತೆ ಪಾತ್ರಕ್ಕಾಗಿ ಕಾಂಜೀವರಂ ಸೀರೆಗಳನ್ನು ಸಿದ್ಧಪಡಿಸಿ, ತಮ್ಮ ತಾಯಿಯ ಹಳೆಯ ಸೀರೆಗಳನ್ನೂ ಬಳಸಿದ್ದರು. ನಮ್ಮೊಂದಿಗೆ ಸಹೋದರಿಯಂತೆ ಇದ್ದು, ಕಷ್ಟ-ಸುಖ ಹಂಚಿಕೊಳ್ಳಲು ಅವಕಾಶ ನೀಡಿದ್ದರು," ಎಂದರು.

ಸಹ ಕಲಾವಿದರಿಗೆ ಸರಿಯಾಗಿ ವೇತನ ನೀಡಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, "ನನಗೆ ಅಂತಹ ಯಾವುದೇ ಅನುಭವವಾಗಿಲ್ಲ. ನಾವು ಕೆಲಸ ಮಾಡಿದ್ದಕ್ಕೆ ನಮಗೆ ವೇತನ ಸಿಕ್ಕಿದೆ. ಆದರೆ, ಕೆಲವರಿಗೆ ಸಿಕ್ಕಿಲ್ಲ ಎಂದು ಕೇಳಿದ್ದೇನೆ. ಅದು ಚಿತ್ರತಂಡದಿಂದ ಆದ ತಪ್ಪಲ್ಲ. ಕಲಾವಿದರನ್ನು ಕರೆತಂದ ಮಧ್ಯವರ್ತಿಗಳು ಚಿತ್ರತಂಡ ನೀಡಿದ ಹಣವನ್ನು ಕಲಾವಿದರಿಗೆ ನೀಡದೆ, ಈ ಗೊಂದಲ ಸೃಷ್ಟಿಸಿರಬಹುದು. ಇದು ಸಿನಿಮಾಕ್ಕೆ ಮಸಿ ಬಳಿಯುವ ತಂತ್ರವೂ ಆಗಿರಬಹುದು," ಎಂದು ಅನುಮಾನ ವ್ಯಕ್ತಪಡಿಸಿದರು.

ಶೂಟಿಂಗ್ ಸೆಟ್‌ನಲ್ಲಿನ ಶಿಸ್ತು

ಕೊಡಚಾದ್ರಿಯ ತಪ್ಪಲಿನಲ್ಲಿ ನಡೆದ ಶೂಟಿಂಗ್ ಜಾಗದಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು. "ಗುರುತಿನ ಚೀಟಿ ಇಲ್ಲದೆ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಕಲಾವಿದರಿಗೂ ಮೊಬೈಲ್ ಫೋನ್ ಬಳಸಲು ಅವಕಾಶವಿರಲಿಲ್ಲ," ಎಂದು ಶೂಟಿಂಗ್‌ನ ಶಿಸ್ತನ್ನು ಅವರು ವಿವರಿಸಿದರು.

Read More
Next Story