
ಕಾಂತಾರ
ಕಾಂತಾರ ಚಾಪ್ಟರ್ 1 ಅಬ್ಬರ: ವಿದೇಶಗಳ ವಿತರಣೆ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ
ಕಾಂತಾರ ಚಾಪ್ಟರ್ 1, ಅಕ್ಟೋಬರ್ 2ರಂದು ದೇಶದಾದ್ಯಂತ ಬಿಡುಗಡೆಯಾಗಲಿದ್ದು, ಈ ಸಿನಿಮಾವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದೆ.
2022 ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ 'ಕಾಂತಾರ' ಚಿತ್ರದ ಬಹುನಿರೀಕ್ಷಿತ ಪ್ರಿಕ್ವೆಲ್ 'ಕಾಂತಾರ ಚಾಪ್ಟರ್ 1', ಇದೇ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಭಾರತ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಚಿತ್ರದ ಬಗ್ಗೆ ಜೋರು ನಿರೀಕ್ಷೆಗಳಿದ್ದು, ವಿವಿಧ ದೇಶಗಳ ವಿತರಣಾ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ.
ಈ ಚಿತ್ರವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದೆ. ಉತ್ತರ ಅಮೆರಿಕದಾದ್ಯಂತ (ಯುಎಸ್‌ಎ ಮತ್ತು ಕೆನಡಾ) ಪ್ರತ್ಯಂಗಿರಾ ಸಿನೆಮಾಸ್ ಬಿಡುಗಡೆ ಮಾಡಲಿದ್ದು, ಯುಕೆ ಸೇರಿದಂತೆ ಇತರ ಹಲವು ದೇಶಗಳಲ್ಲಿ ಫಾರ್ಸ್ ಫಿಲ್ಮ್ಸ್ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಈ ಮೂಲಕ, 30ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು, ಜಾಗತಿಕವಾಗಿ ಕನ್ನಡ ಸಿನಿಮಾದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಲು ಸಿದ್ಧವಾಗಿದೆ.
ಕೇರಳದಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾದ ವಿತರಣಾ ಹಕ್ಕನ್ನು ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರ ಸಂಸ್ಥೆ ಪಡೆದುಕೊಂಡಿದೆ. ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕೆಜಿಎಫ್', 'ಕೆಜಿಎಫ್ 2' ಮತ್ತು 'ಕಾಂತಾರ' ಚಿತ್ರಗಳನ್ನು ಕೇರಳದಲ್ಲಿ ಯಶಸ್ವಿಯಾಗಿ ವಿತರಿಸಿದ್ದ ಪೃಥ್ವಿರಾಜ್, ಇದೀಗ 'ಕಾಂತಾರ ಚಾಪ್ಟರ್ 1' ಮೂಲಕ ತಮ್ಮ ಯಶಸ್ವಿ ಸಹಭಾಗಿತ್ವವನ್ನು ಮುಂದುವರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. 2022ರ 'ಕಾಂತಾರ' ಚಿತ್ರದ ಹಿಂದಿನ ಕಥೆಯನ್ನು ಹೇಳಲಿರುವ ಈ ಚಿತ್ರವು, ಕರಾವಳಿ ಕರ್ನಾಟಕದ ದೈವಾರಾಧನೆ, ಜಾನಪದ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.