ಐದೇ ತಿಂಗಳಲ್ಲಿ 100 ಚಿತ್ರಗಳ ಬಿಡುಗಡೆಯ ಗಡಿ ದಾಟಿದ ಕನ್ನಡ ಚಿತ್ರರಂಗ
x

ಐದೇ ತಿಂಗಳಲ್ಲಿ 100 ಚಿತ್ರಗಳ ಬಿಡುಗಡೆಯ ಗಡಿ ದಾಟಿದ ಕನ್ನಡ ಚಿತ್ರರಂಗ


ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿರುವ, ಅಥವಾ ಹಾಗೆಂದು ಭಾವಿಸಲಾಗಿರುವ ಕನ್ನಡ ಚಿತ್ರರಂಗದ್ದು ಸದ್ಯಕ್ಕೆ ʼಬೇವು-ಬೆಲ್ಲʼದ ಸ್ಥಿತಿ. ವರ್ಷದ ಮೊದಲ ಐದು ತಿಂಗಳಲ್ಲಿ ಕನ್ನಡ ಚಿತ್ರಗಳ ಬಿಡುಗಡೆ ನೂರರ ಗಡಿ ದಾಟಿ ಅಚ್ಚರಿ ಹುಟ್ಟಿಸಿದೆ. ಜೊತೆಯಲ್ಲಿಯೇ ಬಿಡುಗಡೆಯಾದ ಚಿತ್ರಗಳ ಗಟ್ಟಿ-ಜೊಳ್ಳಿನ ಲೆಕ್ಕಾಚಾರವೂ ನಡೆದಿದೆ.

ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೂ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ಲೆಕ್ಕಹಾಕಿದರೆ ವಾಡಿಕೆಗಿಂತ ಹೆಚ್ಚಾಗಿ 105 ಚಿತ್ರಗಳು ಬಿಡುಗಡೆಯಾಗಿವೆ. ಇದೊಂದು ಸಂಭ್ರಮದ ಸ್ಥಿತಿ. ಆದರೆ ಬಿಡುಗಡೆಯಾದ ಚಿತ್ರಗಳು ಚಿತ್ರಮಂದಿರದಲ್ಲಿ ನಿಲ್ಲದೇ ಇರುವುದರಿಂದ ಉದ್ಯಮದ್ದು ಒಂದು ರೀತಿಯ ಕನಲಿಕೆಯ ಸ್ಥಿತಿ. ಕಳೆದ ವರ್ಷ ಚಿತ್ರಗಳ ಬಿಡುಗಡೆ ನೂರರ ಗಡಿ ದಾಟಿದ್ದು ಜೂನ್‌ ತಿಂಗಳ ಮಧ್ಯ ಭಾಗದಲ್ಲಿ ಎಂಬುದನ್ನು ಗಮನಿಸಲೇಬೇಕು.

ಬಿಡುಗಡೆಯಾಗಿರುವ ಚಿತ್ರಗಳತ್ತ ಕಣ್ಣು ಹಾಯಿಸಿದರೆ, ಚಿತ್ರಮಂದಿರಗಳು ಮತ್ತು ನಿರ್ಮಾಪಕ ಇಬ್ಬರೂ ಸಂತುಷ್ಟರಾಗಿರುವ ಚಿತ್ರಗಳೆಂದರೆ, ಕಲಾವಿದ ಚಿಕ್ಕಣ್ಣ ಅಭಿನಯಿಸಿದ ʻಉಪಾಧ್ಯಕ್ಷʼ, ದೀಕ್ಷಿತ್‌ ಶೆಟ್ಟಿ ಅಭಿನಯದ ʻಬ್ಲಿಂಕ್‌ʼ ಮಾತ್ರ. ʻಯುವʼ, ʻಅವತಾರ ಪುರುಷʼ, ʻಕೆಟಿಎಂʼ, ʻಒಂದು ಸರಳ ಪ್ರೇಮ ಕಥೆʼ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿ ಒದರ್ಥದಲ್ಲಿ ಗೆದ್ದಿವೆ ಎಂದೇ ಹೇಳಬೇಕು.

ಕಳೆದ ಮಾರ್ಚಿ ತಿಂಗಳಲ್ಲಿ ಬಿಡುಗಡೆಯಾದ ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಅಭಿನಯದ ʻಕರಟಕ-ದಮನಕʼ ಚಿತ್ರವನ್ನು ಹೊರತು ಪಡಿಸಿದರೆ, ಈ ಐದು ತಿಂಗಳಲ್ಲಿ ಯಾವುದೇ ತಾರಾ ನಟರ ಚಿತ್ರ ಬಿಡುಗಡೆಯಾಗಿಲ್ಲ ಎನ್ನುವ ಅಸಹಾಯಕ ಸ್ಥಿತಿ ಕನ್ನಡ ಚಿತ್ರರಂಗದ್ದು. ಅಷ್ಟೇ ಅಲ್ಲ, ಆಗಸ್ಟ್‌ ೧೫ ರವರೆಗೆ ಯಾವುದೇ ತಾರಾ ನಟರ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಆಗಸ್ಟ್‌ 15 ರಂದು ʼತಾರಾʼ ನಟ ಶಿವರಾಜ್‌ ಕುಮಾರ್‌ ಅವರ ʻಭೈರತಿ ರಣಗಲ್‌ʼ ಬಿಡುಗಡೆಯಾಗುತ್ತದೆ ಎಂದು ಉದ್ಯಮದ ಮೂಲಗಳು ಹೇಳುತ್ತಿವೆ.

ಕಳೆದ ಐದು ತಿಂಗಳಲ್ಲಿ ಕೆಲ ಸದಭಿರುಚಿಯ ಚಿತ್ರಗಳು ಬಿಡುಗಡೆಗೊಂಡಿದ್ದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ಎನ್. ‍ ಸುರೇಶ. ಈ ನಡುವೆಯೂ ಕನ್ನಡದ ʻಬ್ಲಿಂಕ್‌ʼ ಚಿತ್ರ ತನ್ನ ಆರ್ಥಿಕ ಮತ್ತು ಕಲಾತ್ಮಕ ಲಾಭ-ನಷ್ಟಗಳ ಲೆಕ್ಕಾಚಾರದ ಕಾರಣದಿಂದ ಸದ್ದು ಹಾಗೂ ಸುದ್ದಿ ಮಾಡಿತು. ಚಿತ್ರಮಂದಿರದಲ್ಲಿ ಐವತ್ತು ದಿನಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತು. ಈಗ ಓಟಿಟಿ ವೇದಿಕೆಯಲ್ಲಿಯೂ ಪ್ರೇಕ್ಷಕರ ಮೆಚ್ಚಿಗೆಗಳಿಸಿ, ಸಿನಿಮಾ ಪಂಡಿತರು ಈ ಯಶಸ್ಸಿನ ಕಾರಣ ಹುಡುಕುವಂತೆ ಮಾಡಿದೆ.


Read More
Next Story