Sandalwood In Crisis: ಕನ್ನಡ ಚಿತ್ರ ರಂಗ ಸಂಕಷ್ಟದಲ್ಲಿದೆ... ಸ್ಟಾರ್‌ ನಟರೇ,  ಸಿನಿಮಾ ಮಾಡಿ ಸ್ವಾಮಿ!
x

Sandalwood In Crisis: ಕನ್ನಡ ಚಿತ್ರ ರಂಗ ಸಂಕಷ್ಟದಲ್ಲಿದೆ... ಸ್ಟಾರ್‌ ನಟರೇ, ಸಿನಿಮಾ ಮಾಡಿ ಸ್ವಾಮಿ!

ಸ್ಟಾರ್ ನಟರ ಚಿತ್ರಗಳು ಹೆಚ್ಚು ಕೆಲಸ ಮಾಡುವುದರಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿರುತ್ತಾರೆ, ಇಲ್ಲವಾದರೆ ಚಿತ್ರಮಂದಿರಗಳಿಗೆ ಬೀಗ ಬೀಳುತ್ತವೆ. ಈ ಬಗ್ಗೆ ಶಿವರಾಜಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ.


ಕಳೆದ ವರ್ಷ ಚಿತ್ರರಂಗದ ಟ್ರೆಂಡ್‍ ನೋಡಿದರೆ, ಒಂದಂಶ ಸ್ಪಷ್ಟವಾಗುತ್ತದೆ. 2024ರಲ್ಲಿ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ, ಚಿತ್ರಮಂದಿರಗಳು ತುಂಬಿದ್ದು ಆರೇಳು ಚಿತ್ರಗಳಿಂದ ಮಾತ್ರ. ಮಿಕ್ಕಂತೆ ಹೊಸಬರ ಚಿತ್ರಗಳಿಗೆ ಜನ ಕ್ಯಾರೆ ಎನ್ನಲಿಲ್ಲ.

‘ಬ್ಲಿಂಕ್’, ‘ಶಾಖಾಹಾರಿ’ ಮುಂತಾದ ಒಳ್ಳೆಯ ಚಿತ್ರಗಳನ್ನು ಬಂದು ನೋಡಿ, ಪ್ರೋತ್ಸಾಹಿಸುವಂತೆ ಚಿತ್ರತಂಡದವರು ಗೋಗರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಟಾರ್ ಹೀರೋಗಳ ಚಿತ್ರಗಳಿಗೆ ಮಾತ್ರ ಜನ ದೊಡ್ಡ ಮಟ್ಟದಲ್ಲಿ ಬಂದರು. ‘ದುನಿಯಾ’ ವಿಜಯ್‍ ಅಭಿನಯದ ‘ಭೀಮ’, ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’, ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’, ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’, ಶ್ರೀಮುರಳಿ ಅಭಿನಯದ ‘ಬಘೀರ’, ಉಪೇಂದ್ರ ಅಭಿನಯದ ‘ಯುಐ’ ಮತ್ತು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರಗಳಿಗೆ ಜನ ದೊಡ್ಡ ಮಟ್ಟದಲ್ಲಿ ಬಂದರು.

ಹಾಗೆ ಜನ ಬಂದ ಚಿತ್ರಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಹಣ ಮಾಡಿದವು ಅಂತಲ್ಲ ಅಥವಾ ಆ ಚಿತ್ರಗಳು ಲಾಭ ಮಾಡಿದವು ಅಂತಲ್ಲ. ಆದರೆ, ಈ ಚಿತ್ರಗಳಲ್ಲಿ ಸ್ಟಾರ್ ನಟರಿದ್ದ ಕಾರಣ, ಪ್ರೇಕ್ಷಕರು ಚಿತ್ರಮಂದಿಗಳವರೆಗೂ ಬಂದರು.


ಈ ವರ್ಷವೂ ಪುನರಾವರ್ತನೆಯಾದ ಕಳೆದ ವರ್ಷದ ಟ್ರೆಂಡ್‍

2025ರ ವರ್ಷದ ಟ್ರೆಂಡ್‍ ನೋಡುತ್ತಿದ್ದರೆ, ಈ ವರ್ಷ ಸಹ ಕಳೆದ ವರ್ಷದ ಮುಂದುವರಿದ ಭಾಗದಂತಿದೆ. ಈ ವರ್ಷ ನಾಲ್ಕೂವರೆ ತಿಂಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಜನ ಯಾವ ಚಿತ್ರ ನೋಡಿದರು? ಎಂದರೆ ಉತ್ತರವಿಲ್ಲ. ಬಿಡುಗಡೆಯಾದ ಬಹುಪಾಲು ಚಿತ್ರಗಳು ಹೊಸಬರ ಚಿತ್ರಗಳಾಗಿದ್ದು, ಸ್ಟಾರ್ ಚಿತ್ರಗಳಿಲ್ಲದ ಕಾರಣ ಜನ ಚಿತ್ರಮಂದಿರಗಳತ್ತ ಬರುತ್ತಿಲ್ಲ. ಈ ವರ್ಷದ ಮೊದಲರ್ಧದಲ್ಲಿ ಯಾವುದೇ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಎಂಬುದು ಗಮನಾರ್ಹ.

ಈ ವರ್ಷದ ಮೊದಲ ಸ್ಟಾರ್ ಚಿತ್ರವೆಂದರೆ ಅದು, ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ ಶೆಟ್ಟಿ ಅಭಿನಯದ ‘45’. ಈ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗುವುದಾಗಿ ಘೋಷಣೆಯಾಗಿದೆ. ನಂತರ ಅಕ್ಟೋಬರ್ 02ರಂದು ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಬಿಡುಗಡೆಯಾಗುತ್ತಿದೆ. ಮಿಕ್ಕಂತೆ ಯಾವುದೇ ಚಿತ್ರದ ಘೋಷಣೆಯಾಗಿಲ್ಲ.


ಯಾರು, ಯಾವಾಗ ಬರುತ್ತಾರೆ ಎಂದೇ ಸ್ಪಷ್ಟತೆ ಇಲ್ಲ

‘ದುನಿಯಾ’’ ವಿಜಯ್‍ ಅಭಿನಯದ ‘ಲ್ಯಾಂಡ್‍ಲಾರ್ಡ್‍’ ಚಿತ್ರದ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ‘ಜೋಗಿ’ ಪ್ರೇಮ್‍ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಚಿತ್ರದ ಕೆಲಸಗಳು ಬಹುತೇಕ ಮುಕ್ತಾಯವಾಗಿವೆ. ಆದರೆ, ಈ ಎರಡೂ ಚಿತ್ರಗಳ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಮಿಕ್ಕಂತೆ ಈ ವರ್ಷ ಸ್ಟಾರ್ ಚಿತ್ರಗಳೇ ಇಲ್ಲವೇನೋ ಎಂಬ ಅನುಮಾನ ಚಿತ್ರರಂಗವನ್ನು ಕಾಡುತ್ತಿದೆ.

ಅದಕ್ಕೆ ಕಾರಣವೂ ಇದೆ. ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’ ಈಗಷ್ಟೇ ಪ್ರಾರಂಭವಾಗಿದೆ. ಶ್ರೀಮುರಳಿ ಅಭಿನಯದ ‘ಪರಾಕ್‍’ ಚಿತ್ರದ ಪ್ರೀ-ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿವೆ. ರಕ್ಷಿತ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ದರ್ಶನ್‍ ಜಾಮೀನಿನ ಮೇಲೆ ಹೊರಬಂದಿದ್ದಾರಾದರೂ ‘ಡೆವಿಲ್‍’ ಯಾವಾಗ ಮುಗಿದು, ಬಿಡುಗಡೆಗೆ ರೆಡಿಯಾಗುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಗಣೇಶ್ ಅಭಿನಯದ ‘ಯುವರ್ಸ್ ಸಿನ್ಸಿಯರ್ಲಿ ರಾಮ್‍’, ‘ಪಿನಾಕ’ ಮತ್ತು ಇನ್ನೊಂದು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಈ ಮೂರರಲ್ಲಿ ಒಂದು ಚಿತ್ರ ವರ್ಷದ ಕೊನೆಗೆ ಬರುವ ಸಾಧ್ಯತೆ ಇದೆ. ಉಪೇಂದ್ರ ಅಭಿನಯದ ‘ಭಾರ್ಗವ’ ಮತ್ತು ಇನ್ನೊಂದು ಚಿತ್ರದ ಘೋಷಣೆಯಾಗಿದೆ. ಆದರೆ, ಈ ಚಿತ್ರಗಳು ಈ ವರ್ಷವೇ ಮುಗಿದು, ಬಿಡುಗಡೆಯಾಗುವುದು ಕಷ್ಟ. ಶಿವರಾಜಕುಮಾರ್ ಮತ್ತು ಧನಂಜಯ್‍ ಕೈಯಲ್ಲಿ ಒಂದಿಷ್ಟು ಚಿತ್ರಗಳಿವೆ. ಆದರೆ, ಅವು ಯಾವಾಗ ಬಿಡುಗಡೆ ಗೊತ್ತಿಲ್ಲ.


ಹೆಚ್ಚು ಚಿತ್ರ ಮಾಡಲು ಸ್ಟಾರ್ ನಟರಿಗೆ ಚಿತ್ರರಂಗದವರ ಮನವಿ

ಒಟ್ಟಾರೆ, ಈ ವರ್ಷ ನಾಲ್ಕೈದು ಸ್ಟಾರ್ ಚಿತ್ರಗಳು ಮಾತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದೂ ವರ್ಷದ ದ್ವಿತೀಯಾರ್ಧದಲ್ಲಿ. ಹೀಗಾದರೆ, ಚಿತ್ರಮಂದಿರಗಳ ಕಥೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪ್ರೇಕ್ಷಕರು ತಾವು ನೋಡೋದು ಸ್ಟಾರ್‍ ಚಿತ್ರಗಳನ್ನು ಮಾತ್ರ ಎಂದು ತೀರ್ಮಾನಿಸಿರುವುದರಿಂದ, ಚಿತ್ರಮಂದಿರಗಳಲ್ಲಿ ಹಾಜರಾತಿ ಕುಸಿದು ಹೋಗಿದೆ. ಈಗಾಗಲೇ ಕಳೆದ ಕೆಲವು ವರ್ಷಗಳಲ್ಲಿ ಪ್ರೇಕ್ಷಕರ ಅಭಾವದಿಂದ ಸಾಕಷ್ಟು ಚಿತ್ರಮಂದಿರಗಳು ಬಂದ್‍ ಆಗಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಿವರಾಜಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸ್ಟಾರ್ ನಟರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಾಡಬೇಕು ಎಂಬ ಮನವಿ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ವಲಯದಿಂದ ಕೇಳಿಬಂದಿದೆ.


ವರ್ಷಕ್ಕೆ ಪ್ರಮುಖ ನಟರ ಎರಡಾದರೂ ಸಿನಿಮಾಗಳು ಬಂದರೆ ಆಗ ಚಿತ್ರಮಂದಿರಗಳು ಉಳಿಯುತ್ತವೆ ಮತ್ತು ಪ್ರೇಕ್ಷಕರು ನಿರಂತರವಾಗಿ ಚಿತ್ರಮಂದಿರಗಳತ್ತ ಬಂದರೆ, ಆಗ ಸಣ್ಣ ಚಿತ್ರಗಳಿಗೂ ಅನುಕೂಲವಾಗುತ್ತದೆ ಎಂದು ಮನದಟ್ಟು ಮಾಡಿಕೊಟ್ಟುಬಂದಿದ್ದಾರೆ.

ಪ್ಯಾನ್‍ ಇಂಡಿಯಾ ವ್ಯಾಮೋಹದಿಂದ ಈ ಸಮಸ್ಯೆ

ಇದೆಲ್ಲಾ ಸಮಸ್ಯೆ ಆಗುತ್ತಿರುವುದು ಪ್ಯಾನ್‍ ಇಂಡಿಯಾ ವ್ಯಾಮೋಹದಿಂದ ಎಂದು ಹೇಳುತ್ತಾರೆ ವಿತರಕರೊಬ್ಬರು. ‘ಈ ಸಮಸ್ಯೆ ಶುರುವಾಗಿದ್ದೇ ಪ್ಯಾನ್‍ ಇಂಡಿಯಾ ಚಿತ್ರಗಳಿಂದ. ಒಬ್ಬರು ಪ್ಯಾನ್‍ ಇಂಡಿಯಾ ಚಿತ್ರ ಮಾಡಿ ಗೆದ್ದರು ಎಂದು ಬೇರೆಯವರು ಅದೇ ತರಹ ಮಾಡುವುದಕ್ಕೆ ಹೊರಟರು. ಇದರಿಂದ ಬಜೆಟ್‍, ಸಮಯ ಎಲ್ಲವೂ ಹೆಚ್ಚಾಯಿತು. ಚಿತ್ರಗಳೂ ಗೆಲ್ಲಲಿಲ್ಲ. ಪ್ಯಾನ್‍ ಇಂಡಿಯಾ ಚಿತ್ರಗಳಿಗೆ ಮೂರ್ನಾಲ್ಕು ವರ್ಷ ಹಾಕುವ ಬದಲು, ವರ್ಷಕ್ಕೆ ಎರಡು ಸದಭಿರುಚಿಯ ಚಿತ್ರಗನ್ನು ಮಾಡಿದರೆ ಚಿತ್ರರಂಗಕ್ಕೆ ಅನುಕೂಲವಾಗುತ್ತದೆ. ಪ್ರೇಕ್ಷಕರು ನಿರಂತರವಾಗಿ ಚಿತ್ರಮಂದಿಗಳಿಗೆ ಬಂದರೆ, ಚಿತ್ರಮಂದಿರ ಸಹ ಉಳಿಯುತ್ತದೆ’ ಎನ್ನುತ್ತಾರೆ.

ಒಟ್ಟಾರೆ, ಸ್ಟಾರ್ ಚಿತ್ರಗಳು ಹೆಚ್ಚು ಕೆಲಸ ಮಾಡುವುದರಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿರುತ್ತಾರೆ, ಇಲ್ಲವಾದರೆ ಚಿತ್ರಮಂದಿರಗಳಿಗೆ ಬೀಗ ಬೀಳುತ್ತವೆ ಎಂದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮನವಿ ಮಾಡಿದ್ದಾರೆ. ಈ ಮನವಿಯನ್ನು ಸ್ಟಾರ್ ನಟರು ಪುರಸ್ಕರಿಸುತ್ತಾರಾ? ಇನ್ನಾದರೂ ಬೇಗಬೇಗ ಕೆಲಸ ಮಾಡಿ, ಜನ ಚಿತ್ರಮಂದಿರಗಳಿಗೆ ಬರುವಂತೆ ಮಾಡುತ್ತಾರಾ ನೋಡಬೇಕು.

Read More
Next Story