Kannada Cinema Review : ವಿದ್ಯಾ ಪತಿಯ ಸಾಕ್ಷಾತ್ಕಾರದ ಸುತ್ತ
x

Kannada Cinema Review : ವಿದ್ಯಾ ಪತಿಯ ಸಾಕ್ಷಾತ್ಕಾರದ ಸುತ್ತ

ನಾಗಭೂಷಣ್ ಅಭಿನಯದ ಚಿತ್ರಗಳ ಪೈಕಿ ಇದು ಅವರ ಅತ್ಯಂತ ಒಳ್ಳೆಯ ಅಭಿನಯ ಎಂದರೆ ತಪ್ಪಿಲ್ಲ. ಮೊದಲಾರ್ಧದಲ್ಲಿ ಬೇಜವಾಬ್ದಾರಿ ಮನುಷ್ಯನಾಗಿ, ನಂತರ ಜವಾಬ್ದಾರಿಯುತ ಮಗನಾಗಿ ಅವರು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ.


ಚಿತ್ರ: ವಿದ್ಯಾಪತಿ

ತಾರಾಗಣ: ನಾಗಭೂಷಣ್‍, ಮಲೈಕಾ ವಸುಪಾಲ್‍, ಧನಂಜಯ್‍, ಗರುಡ ರಾಮ್‍ ಮುಂತಾದವರು

ನಿರ್ದೇಶನ: ಎಷಮ್‍ ಮತ್ತು ಹಸೀನ್‍

ನಿರ್ಮಾಣ: ಧನಂಜಯ್‍

ವಿದ್ಯಾ ಮಾಡಿರೋದು ಮೂರೇ ಸಿನಿಮಾ. ಅದರಲ್ಲಿ ಮೂರು ಹಿಟ್‍, ಮೂರು ಸೂಪರ್‍ ಡೂಪರ್‍ ಹಿಟ್‍. ಹಾಗಂತ ಇದು ಅವಳ ಕಥೆ ಅಂದುಕೊಂಡರೆ ತಪ್ಪು. ಇದು ವಿದ್ಯಾ ಪತಿಯ ಕಥೆ. ಆತನ ಹೋರಾಟದ ಕಥೆ. ಹೆಂಡತಿಯ ಶ್ರೀಮಂತಿಕೆ ಮತ್ತು ದುಡ್ಡಿನಲ್ಲಿ ಮಜಾ ಮಾಡಿಕೊಂಡಿರುವ ಆತ, ಒಂದು ಹಂತದಲ್ಲಿ ಅದರಿಂದ ಆಚೆ ಬರಬೇಕಾಗುತ್ತದೆ. ತನ್ನ ಅಸ್ತಿತ್ವವನ್ನು ನಿರೂಪಿಸಬೇಕಾಗುತ್ತದೆ. ಸಿನಿಮಾ ಆದ್ದರಿಂದ ಖಂಡಿತಾ ನಿರೂಪಿಸುತ್ತಾನೆ. ಆದರೆ, ಹೇಗೆ ಎಂಬುದು ಗೊತ್ತಾಗಬೇಕಿದ್ದರೆ ‘ವಿದ್ಯಾಪತಿ’ ನೋಡಬೇಕು.

‘ವಿದ್ಯಾಪತಿ’ ಟ್ರೇಲರ್‍ ನೋಡಿದರೆ, ಚಿತ್ರ ಏನಿರಬಹುದು, ಹೇಗಿರಬಹುದು ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬಹುದು. ಇಲ್ಲಿ ಎರಡು ತರಹದ ಹೋರಾಟಗಳಿವೆ. ಒಂದು ದೈಹಿಕವಾದರೆ, ಇನ್ನೊಂದು ಮಾನಸಿಕ ಹೋರಾಟವಿದೆ. ದೈಹಿಕವಾಗಿ ಸಿದ್ದು ಎದುರು ಜಗ್ಗು ಇದ್ದರೆ, ಮಾನಸಿಕವಾಗಿ ತಾನು ವಿದ್ಯಾಪತಿಯಾದರೂ, ಅದನ್ನು ಮೀರಿದ ಒಂದು ಅಸ್ತಿತ್ವ ತನಗಿದೆ ಎಂಬುದನ್ನು ಸಿದ್ದು ನಿರೂಪಿಸಬೇಕಾಗುತ್ತದೆ. ಈ ಎರಡೂ ಹೋರಾಟಗಳನ್ನು ತಮಾಷೆಯಾಗಿ, ಇನ್ನೂ ಸ್ವಲ್ಪ ಭಾವನಾತ್ಮಕವಾಗಿ ಚಿತ್ರದಲ್ಲಿ ಹಿಡಿದಿಡಲಾಗಿದೆ.

‘ವಿದ್ಯಾಪತಿ’ ಒಂದು ಸರಳ ಚಿತ್ರ. ಮನರಂಜನೆಗೆಂದೇ ಮಾಡಿದ ಚಿತ್ರ. ಯಾವುದೇ ಗಹನವಾದ ವಿಷಯ ಅಥವಾ ಬಡಿದೆಬ್ಬಿಸುವ ಚಿತ್ರವಲ್ಲ. ಇಲ್ಲಿ ಹೋರಾಟವಿದೆ, ತಂದೆ-ಮಗನ ಸೆಂಟಿಮೆಂಟ್‍ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಒಂದಿಷ್ಟು ನಗುವಿದೆ. ಇಡೀ ಕುಟುಂಬ ನಕ್ಕು ಹಗುರಾಗುವ, ಕೆಲವೊಮ್ಮೆ ಭಾವುಕರಾಗುವ ಅಂಶಗಳು ಚಿತ್ರದಲ್ಲಿವೆ. ಇಲ್ಲಿ ನಾಯಕ ಒಬ್ಬ ಸಾಮಾನ್ಯ ಮನುಷ್ಯ. ಅಂಥವನೊಬ್ಬನು ದೈತ್ಯನೊಬ್ಬನ ವಿರುದ್ಧ ತಿರುಗಿಬಿದ್ದಾಗ ನಡೆಯುವ ವಿಷಯಗಳನ್ನು ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ. ಚಿತ್ರದ ಅವಧಿ ಎರಡು ತಾಸಾದರೂ, ಅಲ್ಲಲ್ಲಿ ಸ್ವಲ್ಪ ನಿಧಾನವಾಗಿದೆ. ಆದರೆ, ನಿರ್ದೇಶಕರು ಹಾದಿ ತಪ್ಪಿ ಏನೇನೋ ಹೇಳುವುದಕ್ಕೆ ಹೋಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ.

ನಾಗಭೂಷಣ್ ಅಭಿನಯದ ಚಿತ್ರಗಳ ಪೈಕಿ ಇದು ಅವರ ಅತ್ಯಂತ ಒಳ್ಳೆಯ ಅಭಿನಯ ಎಂದರೆ ತಪ್ಪಿಲ್ಲ. ಮೊದಲಾರ್ಧದಲ್ಲಿ ಬೇಜವಾಬ್ದಾರಿ ಮನುಷ್ಯನಾಗಿ, ನಂತರ ಜವಾಬ್ದಾರಿಯುತ ಮಗನಾಗಿ ಅವರು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಜಗ್ಗು ಪಾತ್ರದಲ್ಲಿ ‘ಗರುಡ’ ರಾಮ್‍ ಹೇಳಿ ಮಾಡಿಸಿದಂತಿದ್ದಾರೆ. ಮಲೈಕಾ ಮುದ್ದಾಗಿ ಕಾಣುತ್ತಾರೆ ಎನ್ನುವುದು ಬಿಟ್ಟರೆ, ಅವರಿಗೆ ಹೆಚ್ಚು ಕೆಲಸವಿಲ್ಲ. ಧನಂಜಯ್‍ ಚಿತ್ರಕ್ಕೆ ಹಣ ಹೂಡಿದ್ದರೂ, ಎಷ್ಟು ಬೇಕೋ ಅಷ್ಟು ಕಾಣಿಸಿಕೊಂಡಿದ್ದಾರೆ. ಕಾರ್ತಿಕ್‍ ರಾವ್‍, ಶ್ರೀವತ್ಸ ಇಷ್ಟವಾಗುತ್ತಾರೆ. ಲವಿತ್‍ ಛಾಯಾಗ್ರಹಣ ಮತ್ತು ದಾಸ್ ಮೋಡ್‍ ಹಾಡುಗಳು ಚಿತ್ರವನ್ನು ಇನ್ನಷ್ಟು ಶ್ರೀಮಂತವಾಗಿಸಿವೆ.

ಸರಳ ಮನರಂಜನೆ ಬೇಕೆನ್ನುವವರು ‘ವಿದ್ಯಾಪತಿ’ಯನ್ನು ಒಮ್ಮೆ ಆರಾಮವಾಗಿ ನೋಡಿ ನಲಿಯಬಹುದು.

Read More
Next Story