
ವರ್ಷಾಂತ್ಯಕ್ಕೆ ನಗು ಮೊಗ ಹೊತ್ತ ಕನ್ನಡ ಸಿನಿಮಾ
ಡಿಸೆಂಬರ್ 1ಕ್ಕೆ ಅಂದರೆ ಶುಕ್ರವಾರ ಆರು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ವಾರ ಬಿಡುಗಡೆಯಾದ ಐದು ಚಿತ್ರಗಳು ಸೇರಿದರೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ರ ಗಡಿ ದಾಟಿದೆ.
ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ ಕನ್ನಡ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಡಿಸೆಂಬರ್ 1ಕ್ಕೆ ಅಂದರೆ ಶುಕ್ರವಾರ ಆರು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಕಳೆದ ವಾರ ಬಿಡುಗಡೆಯಾದ ಐದು ಚಿತ್ರಗಳು ಸೇರಿದರೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ರ ಗಡಿ ದಾಟಿದೆ.
ಬಿಡುಗಡೆಯಾಗಿರುವ ಅಭಿಷೇಕ್ ಅಂಬರೀಶ್ ನಾಯಕರಾಗಿರುವ ಬ್ಯಾಡ್ ಮ್ಯಾನರ್ , ರಾಜ್ ಬಿ ಶೆಟ್ಟಿ ಅವರ ಸ್ವಾತಿ ಮುತ್ತಿನ ಮಳೆ ಹನಿಯೇ, ಶುಗರ್ ಫ್ಯಾಕ್ಟರಿ, ಎಲೆಕ್ಟ್ರಾನಿಕ್ ಸಿಟಿ, ಮತ್ತು ಸ್ಕೂಲ್ ಡೇಸ್ ಪೈಕಿ ಕೊನೆಯ ಮೂರು ಚಿತ್ರಗಳು ಹೆಚ್ಚೇನೂ ಸದ್ದು ಮಾಡಲಿಲ್ಲ. ಬ್ಯಾಡ್ ಮಾನರ್‍ಸ ನಿರೀಕ್ಷಿಸಿದಷ್ಟು ಯಶಸ್ವಿಯಾದಂತೆ ಕಾಣುತ್ತಿಲ್ಲ. ಮೂರು ದಿನಗಳಲ್ಲಿ ಈ ಚಿತ್ರ 64 ಕೋಟಿ ರೂಪಾಯಿ ಗಳಿಸಿದೆ ಎಂಬುದು ಸಿನಿಮಾ ತಂಡದ ನಿರ್ದೇಶಕ ಸೂರಿಯವರ ಹಳೆಯ ಚಿತ್ರಗಳ ಜಾಡೇ ಈ ಚಿತ್ರದಲ್ಲಿ ಪುನರಾವರ್ತನೆಯಾದಂತೆ ಕಾಣುತ್ತಿದೆ. ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದ್ದರೂ, ಬಾಕ್ಸ್ ಆಫೀಸ್ನಲ್ಲಿ ಸೋತಂತೆ ಕಾಣಿಸುತ್ತಿದೆ. ಇದು ನಟಿ ರಮ್ಯ ನಿರ್ಮಿಸಿದ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರವನ್ನು ಕಾಪಾಡಿದಂತೆ ತೋರುತ್ತಿಲ್ಲ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳು ಹೇಳಿಕೊಳ್ಳುವಂಥ ನಿರೀಕ್ಷೆಯನ್ನೇನೂ ಹುಟ್ಟಿಸುತಿಲ್ಲ.
ಕೈವ ಸೃಷ್ಟಿಸಿದ 80ರ ದಶಕದ ಬೆಂಗಳೂರು
ಆದರೆ ಡಿಸೆಂಬರ್ 8 ರಂದು ಬಿಡುಗಡೆಯಾಗಲಿರುವ ಜಯತೀರ್ಥ ನಿರ್ದೇಶನದ ಕೈವ ಮಾತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಕಾರಣ ಇಷ್ಟೇ. ಈ ಚಿತ್ರ 1983ರ ಬೆಂಗಳೂರನ್ನು ಮತ್ತೆ ಕಟ್ಟಿಕೊಡುತ್ತದೆ. ಆ ಕಾಲಘಟ್ಟದ ಭೂಗತ ಜಗತ್ತು, ಅದನ್ನು ಆಳಿದ ಜಯರಾಜ್, ಕೋತ್ವಾಲ್ ರಾಮಚಂದ್ರ, ಮುಂತಾದವರು ರೂಪಿಸಿದ ರಕ್ತಸಿಕ್ತ ಅಧ್ಯಾಯ. ಆ ಕಾಲದಲ್ಲಿ ಸಂಭವಿಸಿದ ದುರಂತ, ಅದು ಬಲಿತಗೆದುಕೊಂಡ 123 ಮುಗ್ಧ ಜೀವಗಳು, ಗಾಯಗೊಂಡ ನೂರಾರು ಮಂದಿಯ ಮುಂದಿನ ಬದುಕು. ಇವೆಲ್ಲಕ್ಕೂ ಮೀರಿದ ಜಗದ್ವಿಖ್ಯಾತ ಬೆಂಗಳೂರು ಕರಗ, ಇವೆಲ್ಲದರ ಸೇಪಿಯಾ ನೋಟದ ಹಿನ್ನೆಲೆಯಲ್ಲಿ ಅರಳುವ ಒಂದು ಅಂತರ್ ಧರ್ಮೀಯ ಪ್ರೇಮ ಕಥನ.
ಈ ಸಂದರ್ಭದಲ್ಲಿ ಘಟಿಸಿದ್ದು ಏಳಂತಿಸ್ತಿನ ಗಂಗಾರಾಂ ಕಟ್ಟಡ. ಇದರದ್ದೇ ಒಂದು ಇತಿಹಾಸ. ಈ ಕಾಲಘಟ್ಟದ ಸಾಮಾಜಿಕ ಬದುಕಿನ ಚಲನೆಯ ಹಿನ್ನೆಲೆ ಕೈವಕ್ಕೆ ಒಂದು ಕಥಾನಕ ಚೌಕಟ್ಟು ಒದಗಿಸಿತು, ಎನ್ನುತ್ತಾರೆ ಚಿತ್ರದ ನಿರ್ದೇಶಕ ಜಯತೀರ್ಥ.
ಶವಾಗಾರದಲ್ಲಿ ಕೇಳಿದ ಕಥೆ
ಈ ಚಿತ್ರದ ಕಥೆ ಹುಟ್ಟಿದ್ದೇ ಒಂದು ವಿಚಿತ್ರ ಸಂದರ್ಭದಲ್ಲಿ. ಅದೂ ಸಹ ಶವಾಗಾರದ ಪೋಸ್ಟಮಾರ್ಟಂ ಮೇಜಿನಮೇಲೆ. ಬೆಲ್‌ಬಾಟಮ್ ಚಿತ್ರದ ಕಥೆಗಾಗಿ ಶವ ಕೊಳೆಯಲು ಕಾರಣವಾಗುವ ಮೆಗಾಟ್ಸ್ ಎಂಬ ಕ್ರಿಮಿಗಳನ್ನು ಹುಡುಕಿ ಹೊರಟ ಜಯತೀರ್ಥಗೆ ಶವ ಕತ್ತರಿಸುವಾತ ಹೇಳಿದ ಘಟನೆಯಿಂದ. ಕಥೆ ಹುಡುಕಿ ಹೊರಟಾಗ ಸಿಕ್ಕಿದ್ದು ಕರಗದ ಹಿಂದಿನ ಪ್ರೇಮ ಕಥನ. ಒಟ್ಟಲ್ಲಿ ಕಥೆಯಾದಳು ಹುಡುಗಿ ಎನ್ನುವಂತೆ.
ಜಯತೀರ್ಥ ಹೇಳುವಂತೆ ಈ ಅಂತರ್ ಧರ್ಮೀಯ ಪ್ರೇಮ ಕಥನದ ಫಲಾನುಭವಿಗಳು ಇಂದಿಗೆ ಜೀವಂತ ಸಾಕ್ಷ್ಯ. ಈ ಕಥೆಯ ನಿಜ ನಾಯಕ-ನಾಯಕಿಯ ಕಥೆ ಮಾತ್ರ ಕೇಳಬೇಡಿ ಎಂಬುದು ಜಯತೀರ್ಥ ಅವರ ಕೋರಿಕೆ. ಮೊದಲ ಸಲಕ್ಕೆ ಜಯತೀರ್ಥ ಅಪರಾಧ ಜಗತ್ತನ್ನು ಕಥೆಗೆ ಆಯ್ಕೆ ಮಾಡಿಕೊಂಡಿರುವುದು ಲಾಭವೇ ಆಯಿತೆನ್ನಬಹುದು.
ಮತ್ತೆ ಸದ್ದು ಮಾಡುತ್ತಿರುವ ಕಾಂತಾgದ ವರಾಹರೂಪಂ
ಇತ್ತೀಚೆಗೆ ಗೋವಾದಲ್ಲಿ ಮುಕ್ತಾಯವಾದ ೫೪ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಿಷಭ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ಕಾಂತಾರ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ದಕ್ಕಿದೆ. ಕನ್ನಡ ಚಿತ್ರವೊಂದು ಮೊದಲ ಬಾರಿಗೆ ಇಂಥದ್ದೋಂದು ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ಸಂಗತಿ.
ಈ ಬಾರಿಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ 15ಕ್ಕೂ ಹೆಚ್ಚು ಚಿತ್ರಗಳಿದ್ದವು. ಈ ಪೈಕಿ ಭಾರತದ ಕಾಂತಾರ ಚಿತ್ರವೂ ಸೇರಿದಂತೆ ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಕಾಂತಾರ ತನ್ನದಾಗಿಸಿಕೊಂಡಿದೆ. ರಜತ ಮಯೂರ ಶಿಲ್ಪ ಹಾಗೂ ಹದಿನೈದು ಲಕ್ಷ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದೆ. ಕಾಂತಾರ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ದೇಶದಾದ್ಯಂತ ಸದ್ದು ಮಾಡಿದ್ದೇ ಅಲ್ಲದೆ, ಹಲವು ಭಾಷೆಗಳಲ್ಲಿ ಕಾಣಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಮತ್ತು ಹಿಂದುತ್ವ ಪ್ರಾಯೋಜಕರ ಮೆಚ್ಚಿಗೆ ಹಾಗೂ ಬೆಂಬಲವನ್ನು ಪಡೆದುಕೊಂಡದ್ದು ಅಕಸ್ಮಿಕವೇನಲ್ಲ.
ಅಸಾಧಾರಣ ಯಶಸ್ಸಿನ ಅಲೆಯನ್ನೇರಿ ಹೊರಟಿರುವ ಕಾಂತಾರ ತನ್ನ ಪ್ರಭಾವ ಕಡಿಮೆಯಾಗದಂತೆ ಎಲ್ಲ ಪ್ರಯತ್ನ ಮಾಡುತ್ತಿದೆ. ಕಾಂತಾರದ ಪೂರ್ವ ಭಾಗ ಈಗ ಮತ್ತೆ ಸದ್ದು ಮಾಡುತ್ತಿದೆ.
ಕಾಂತಾರ ಪೂರ್ವದ ದಂತಕಥೆ
ನವೆಂಬರ್ 27ಕ್ಕೆ ಕಾಂತಾರ-ಪೂರ್ವದ ಮುಹೂರ್ತ. ಚಿತ್ರ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಈ ಚಿತ್ರದಲ್ಲೂ, ರಿಷಭ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಉತ್ತರ ಭಾಗದ ಟೀಸರ್ ಪೂರ್ವ ಭಾಗದಲ್ಲಿ ತನ್ನ ಛಾಪು ಮೂಡಿಸಿದೆ. ಈ ಟೀಸರ್‍ನ ವೈಶಿಷ್ಟ್ಯವೆಂದರೆ ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿರುವುದು. ಪ್ರತಿಯೊಂದು ಭಾಷೆಯ ಟೀಸರ್ ಕೂಡ ಒಂದೊಂದು ರಾಗದಲ್ಲಿ ಅಂತ್ಯವಾಗಿದೆ.
ಕಾಂತಾರ ಚಿತ್ರಕ್ಕೆ ಚಾಲನೆ ಸಿಗುವುದರ ಜೊತೆಜೊತೆಗೆ ಕಾಂತಾರ ಭಾಗ-ಒಂದರ ಮೊದಲ ನೋಟ ಕೂಡ ಬಿಡುಗಡೆಯಾಗಿದೆ. ಅದರ ಚಲನೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಕಾಂತಾರ ಜಗತ್ತನ್ನು ಪರಿಚಯಿಸುವ ಪಾತ್ರ, ಪಾತ್ರದ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿದೆ. ಉತ್ತರ ಭಾಗದ ಛಾಯೆ ಪೂರ್ವ ಭಾಗದಲ್ಲೂ ಕಾಣಿಸುತ್ತಿದೆ. ಇದೇ ಗೆಲುವಿನ ಸಂಕೇತವೇನೋ ಎಂಬಂತಿದೆ. ಒಟ್ಟಲ್ಲಿ ಹೊಸದೊಂದು ದಂತಕಥೆಯ ರೂಪವೊಂದಕ್ಕೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ. ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.