ತೆಲುಗಿನ ‘ಗೇಮ್ ಚೇಂಜರ್’ ನಿಂದ ಕನ್ನಡ ಚಿತ್ರಗಳಿಗೆ ಸಂಕಷ್ಟ
ಗೇಮ್ ಚೇಂಜ್ ವಿರುದ್ಧ ಪ್ರತಿಭಟಿಸಲು ಇಂದು ಮಧ್ಯಾಹ್ನ 02:30ಕ್ಕೆ ‘ಛೂ ಮಂತರ್’ ನಿರ್ಮಾಪಕ ತರುಣ್ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ಮತ್ತೊಮ್ಮೆ ಪರಭಾಷೆಯ ಚಿತ್ರಗಳ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ದೊಡ್ಡ ಮತ್ತು ನಿರೀಕ್ಷೆಯ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ, ಸಿಕ್ಕರೂ ಕಡಿಮೆ ಪ್ರಾಶಸ್ತ್ಯವಿರುವ ಪ್ರದರ್ಶನಗಳು ಸಿಗುತ್ತವೆ ಎಂದು ಕನ್ನಡದ ಹಲವು ನಿರ್ಮಾಪಕರು ದೂರಿದ್ದಾರೆ. ಈಗ ಪುನಃ ಅದೇ ಸಮಸ್ಯೆ ಎದುರಾಗಿದೆ.
ನಾಳೆ (ಜನವರಿ 10) ಕನ್ನಡದ ನಾಲ್ಕು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶರಣ್ ಅಭಿನಯದ ‘ಛೂ ಮಂತರ್’, ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ‘ಟೆಡ್ಡಿ ಬೇರ್’ ಮತ್ತು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರಗಳು ತೆರೆಕಾಣುವುದಕ್ಕೆ ಸಜ್ಜಾಗಿವೆ. ಇದರ ಜೊತೆಗೆ ತೆಲುಗಿನ ನಿರೀಕ್ಷಿತ ಚಿತ್ರವಾದ ರಾಮ್‍ಚರಣ್ ತೇಜ ಅಭಿನಯದ ‘ಗೇಮ್ ಚೇಂಜರ್’ ಸಹ ಬಿಡುಗಡೆಯಾಗುತ್ತಿದೆ. ಈ ಚಿತ್ರದಿಂದ ಕನ್ನಡ ಚಿತ್ರಗಳಿಗೆ ಪ್ರದರ್ಶನವೇ ಸಿಗುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
‘ಗೇಮ್ ಚೇಂಜರ್’ ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಚಿತ್ರದ ಕನ್ನಡದ ಅವತರಣಿಕೆಯು ಬಿಡುಗಡೆಯಾಗುತ್ತಿದ್ದರೂ, ಅದಕ್ಕೆ ಸಿಕ್ಕಿರುವ ಪ್ರದರ್ಶನಗಳ ಸಂಖ್ಯೆ ಬೆರಳಣಿಕೆಯಷ್ಟು. ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಕನ್ನಡದ ಅವತರಣಿಕೆಯು ಪ್ರದರ್ಶನವಾಗುತ್ತಿದೆ. ಮಿಕ್ಕಂತೆ ತೆಲುಗು ಅವತರಣಿಕೆಗೆ ನೂರಾರು ಪ್ರದರ್ಶನಗಳು ಸಿಕ್ಕಿದ್ದು, ‘ಗೇಮ್ ಚೇಂಜರ್’ ಬೆಳಿಗ್ಗೆ 6.30ರಿಂದ ಪ್ರದರ್ಶನ ಪ್ರಾರಂಭವಾಗಲಿದೆ. ಇನ್ನು, ಟಿಕೆಟ್ ಬೆಲೆ ಸಹ ಹೆಚ್ಚಾಗಿದ್ದು, ಕೆಲವು ಚಿತ್ರಮಂದಿರಗಳಲ್ಲಿ 500 ರೂ.ವರೆಗೂ ಟಿಕೆಟ್ ಬೆಲೆಯನ್ನು ಏರಿಸಲಾಗಿದೆ.
ಇದರಿಂದ ನಾಳೆ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 02:30ಕ್ಕೆ ‘ಛೂ ಮಂತರ್’ ನಿರ್ಮಾಪಕ ತರುಣ್ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನು ಕ್ರಮ ಕೈಗೊಳ್ಳುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜೊತೆಗೆ ಮಾತನಾಡಿದ ತರುಣ್ ಶಿವಪ್ಪ, ‘ನಮ್ಮ ಚಿತ್ರಕ್ಕೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಬಹುತೇಕ ಚಿತ್ರಮಂದಿರಗಳು ಪರಭಾಷೆಯ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಕೊಟ್ಟು, ಕನ್ನಡ ಚಿತ್ರಗಳಿಗೆ ಒಂದು ಪ್ರದರ್ಶನವನ್ನು ಮೀಸಲಿಟ್ಟಿವೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೊಂದು ಪ್ರದರ್ಶನವಿದೆ. ನೆಲಮಂಗಲದ ರೂಪದ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನ ಸಿಕ್ಕಿದೆ. ಮೈಸೂರಿನಲ್ಲಿ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಮುಂತಾದ ನಗರಗಳಲ್ಲಿ ಚಿತ್ರಮಂದಿರಗಳು ಸತ್ತಿಲ್ಲ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾಲ್ಕು ದಿನಗಳ ಹಿಂದೆಯೇ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಲಿದ್ದೇವೆ’ ಎಂದರು.