ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವಾಘಚಿಪಾಣಿ’ ಆಯ್ಕೆ
‘ವಾಘಾಚಿಪಾಣಿ’, ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಇದಕ್ಕೂ ಮೊದಲು ಅವರು ನಿರ್ದೇಶನ ಮಾಡಿದ ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು.
ಕಳೆದ ವರ್ಷ ಗಿರೀಶ್ ಕಾಸರವಳ್ಳಿ ಅವರ ಮೊದಲ ಚಿತ್ರ ‘ಘಟಶ್ರಾದ್ಧ’ ಬಿಡುಗಡೆಯಾಗಿ 46 ವರ್ಷಗಳ ನಂತರ ವೆನೀಸ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಜಯಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ ಎರೆಹಂಚಿನಾಳ’ ಚಿತ್ರವು ಬುಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವುದರ ಜೊತೆಗೆ ನ್ಯೂ ಕರೆಂಟ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈಗ ಕನ್ನಡದ ಇನ್ನೊಂದು ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.
ನಟೇಶ್ ಹೆಗಡೆ ನಿರ್ದೇಶನದ ‘ವಾಘಾಚಿಪಾಣಿ’ (Tiger's Pond) ಚಿತ್ರವು ಇದೀಗ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಫೋರಂ ವಿಭಾಗಕ್ಕೆ ಆಯ್ಕೆಯಾಗಿದ್ದು, ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಈ ಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ.
‘ವಾಘಾಚಿಪಾಣಿ’, ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಇದಕ್ಕೂ ಮೊದಲು ಅವರು ನಿರ್ದೇಶನ ಮಾಡಿದ ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿತ್ತು.
‘ವಾಘಾಚಿಪಾಣಿ’, ಅಮರೇಶ ನುಗಡೋಣಿಯವರ ಜನಪ್ರಿಯ ಕಥೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ಹಿಂದೆ ಗಿರೀಶ್ ಕಾಸರವಳ್ಳಿ ಅವರು ಅಮರೇಶ್ ನುಗಡೋಣಿ ಅವರ ‘ಸವಾರಿ’ ಕಥೆಯನ್ನು ಆಧರಿಸಿ ‘ಕನಸೆಂಬ ಕುದುರೆಯನೇರಿ’ ಚಿತ್ರ ಮಾಡಿದ್ದರು. ಈಗ ‘ವಾಘಾಚಿಪಾಣಿ’ ಚಿತ್ರವಾಗಿದೆ. ಹಾಗಂತ ಇದು ಸಂಪೂರ್ಣ ಅವರ ಕಥೆಯಲ್ಲ. ಅವರ ಕಥೆಯಿಂದ ಸ್ಫೂರ್ತಿ ಪಡೆದು ಚಿತ್ರ ಮಾಡಲಾಗಿದೆ.
ಈ ಕುರಿತು ‘ದಿ ಫೆಡರಲ್ ಕನ್ನಡ’ ಜೊತೆಗೆ ಮಾತನಾಡಿದ ನಿರ್ದೇಶಕ ನಟೇಶ್ ಹೆಗ್ಡೆ, ‘ಅಮರೇಶ ನುಗಡೋಣಿ ಅವರ ಕಥೆಯಿಂದ ಸ್ಫೂರ್ತಿಗೊಂಡು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಶಿರಸಿ ಬಳಿಯ ಒಂದು ಹಳ್ಳಿಯಲ್ಲಿ ಪಾಥಿ ಎಂಬ ಮಾನಸಿಕ ಅಸ್ವಸ್ಥ ಮಹಿಳೆ ಗರ್ಭಿಣಿಯಾಗುತ್ತಾಳೆ. ಈ ವಿಷಯವನ್ನು ಯಾರು, ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎನ್ನುವುದು ಚಿತ್ರದ ಕಥೆ. ‘ವಾಘಾಚಿಪಾಣಿ’ ಎಂಬುದು ಹಳ್ಳಿಯ ಹೆಸರು. ಈ ಚಿತ್ರವನ್ನು ನಾವು 16 MMನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ಕೊಡುತ್ತಾರೆ.
ಈ ಕಥೆ ಇವತ್ತಿನ ಕಾಲಘಟ್ಟಕ್ಕೆ ಬಹಳ ಮಹತ್ವದ್ದು ಎನ್ನುವ ನಟೇಶ್, ‘ಯಾರೇ ಆಗಲಿ, ಏನೇ ಆಗಿರಲಿ, ಜೀವ ಬಹಳ ಮುಖ್ಯ. ಆದರೆ, ಜೀವಕ್ಕೆ ಬೆಲೆ ಇಲ್ಲ. ಈಗಿನ ಕಾಲಘಟ್ಟದಲ್ಲಿ ಜೀವ ಎನ್ನುವುದು ಒಂದು ಸಂಖ್ಯೆಯಾಗಿಬಿಟ್ಟಿದೆ. ನಾವೆಲ್ಲರೂ ಒಂದೊಂದು ಸಂಖ್ಯೆಗಳಾಗುತ್ತಿದ್ದೇವೆಯೇ ಹೊರತು, ಅದಕ್ಕಿಂತ ಹೆಚ್ಚು ಮಹತ್ವ ಸಿಗುತ್ತಿಲ್ಲ. ನಾವು ಸಂಖ್ಯೆಯಲ್ಲ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಟೇಶ್ ಹೆಗ್ಡೆ.
ದಿಲೀಶ್ ಪೋತನ್, ಅಚ್ಯುತ್ ಕುಮಾರ್, ನಟೇಶ್ ಹೆಗ್ಡೆ, ಗೋಪಾಲ್ ಹೆಗ್ಡೆ, ಸುಮಿತ್ರಾ, ಜಹಂಗೀರ್, ಬಿಂದು ರಕ್ಸಿಡಿ, ಸಂಧ್ಯಾ ಅರೆಕೆರೆ ಮುಂತಾದವರು ನಟಿಸಿರುವ ‘ವಾಘಾಚಿಪಾಣಿ’ ಚಿತ್ರವನ್ನು ಮೊದಲು ಪ್ರಾರಂಭಿಸಿದ್ದು ರಿಷಭ್ ಶೆಟ್ಟಿ. ಅವರು ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಪ್ರಾರಂಭಿಸಿದ್ದರು. ಆದರೆ, ಕಾರಣಾಂತರಗಳಿಂದ ಅವರು ನಿರ್ಮಾಣದಿಂದ ಹಿಂದೆ ಸರಿದಿದ್ದು, ಈಗ ಚಿತ್ರವನ್ನು ಹಿಂದಿಯ ಜನಪ್ರಿಯ ನಟ-ನಿರ್ದೇಶಕ ಅನುರಾಗ್ ಕಶ್ಯಪ್, ರಂಜನ್ ಸಿಂಗ್ ಮತ್ತು ನಟೇಶ್ ಹೆಗ್ಡೆ ಜಂಟಿಯಾಗಿ ನಿರ್ಮಿಸಿದ್ದಾರೆ.
ನಿರ್ಮಾಪಕರು ಬದಲಾಗಿದ್ದಕ್ಕೆ ಕಾರಣ ತಿಳಿಸುವ ನಟೇಶ್ ಹೆಗ್ಡೆ, ‘ರಿಷಭ್ ಶೆಟ್ಟಿ ಅವರು ‘ಕಾಂತಾರ – ಅಧ್ಯಾಯ 1’ರ ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಈ ಚಿತ್ರಕ್ಕೆ ಸಾಕಷ್ಟು ಸಮಯ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ತರಹದ ಚಿತ್ರಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಚೆನ್ನಾಗಿ ಪೋಷಣೆ ಮಾಡಬೇಕು. ಅಂತಾರಾಷ್ಟ್ರೀ ಚಿತ್ರೋತ್ಸವಗಳಿಗೆ ಕಳಿಸುವುದು, ಅದರ ಮಾರ್ಕೆಟಿಂಗ್, ಮಾರಾಟ ಇದಕ್ಕೆಲ್ಲಾ ಸಾಕಷ್ಟು ಸಮಯ ಹಿಡಿಯುತ್ತದೆ. ಸದ್ಯ ರಿಷಭ್ ಶೆಟ್ಟಿ ಅವರಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನುರಾಗ್ ಕಶ್ಯಪ್ ಜೊತೆಗೆ ಚಿತ್ರೋತ್ಸವವೊಂದರಲ್ಲಿ ಭೇಟಿಯಾಯಿತು. ಅವರು ನನ್ನ ‘ಪೆಡ್ರೋ’ ಚಿತ್ರವನ್ನು ನೋಡಿದ್ದರು. ಅವರೊಂದಿಗೆ ಒಳ್ಳೆಯ ಗೆಳೆತನವಿತ್ತು. ಅವರು ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದರು’ ಎನ್ನುತ್ತಾರೆ ನಟೇಶ್.
ನಟೇಶ್ ಅಭಿನಯದ ಮೊದಲ ಚಿತ್ರ ‘ಪೆದ್ರೋ’ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದರೂ, ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲ. ಕೆಲವು ಪ್ರದರ್ಶನಗಳಾಗಿದ್ದು ಬಿಟ್ಟರೆ, ಹೆಚ್ಚು ಜನ ನೋಡಲಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೇ ಚಿತ್ರ ಪ್ರದರ್ಶನವಾಗಲಿಲ್ಲ. ಈ ಕುರಿತು ಮಾತನಾಡುವ ನಟೇಶ್, ‘ಎರಡು ವರ್ಷಗಳ ಹಿಂದೆ ಚಿತ್ರೋತ್ಸವ ಸಮಿತಿಯವರು ಚಿತ್ರವನ್ನು ಕೇಳಿದ್ದರು. ನಾವು ಚಿತ್ರವನ್ನೂ ಕಳಿಸಿದ್ದೆವು. ಆದರೆ, ರಾಜಕೀಯ ಸಮಸ್ಯೆ ಎದುರಾಗಬಹುದು ಎಂದು ಚಿತ್ರ ಪ್ರದರ್ಶನ ಮಾಡಲಿಲ್ಲ. ಕಳೆದ ವರ್ಷ ಮತ್ತೆ ಚಿತ್ರ ಕಳಿಸಿದ್ದೆವು. ಮತ್ತೆ ಏನೋ ಕಾರಣ ಹೇಳಿದರು. ಚಿತ್ರದಿಂದ ಯಾವುದೇ ಸಮಸ್ಯೆ ಇಲ್ಲ. ಸೆನ್ಸಾರ್ ಸಮಿತಿಯವರು ಚಿತ್ರ ನೋಡಿ, 'U/A' ಪ್ರಮಾಣಪತ್ರ ಕೊಟ್ಟಿದ್ದಾರೆ. ಗಿರೀಶ್ ಕಾಸರವಳ್ಳಿ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ, ಚಿತ್ರದ ಜೊತೆಗೆ ನಿಂತಿದ್ದರು. ಹಾಗಿರುವಾಗ, ಏನು ಸಮಸ್ಯೆ ಆಗುತ್ತದೋ ಗೊತ್ತಿಲ್ಲ. ಯಾಕೆ ಚಿತ್ರವನ್ನು ಪ್ರದರ್ಶನ ಮಾಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಪೆದ್ರೋ’ ಬಿಡುಗಡೆಯಾಗದಿದ್ದರೂ, ‘ವಾಘಾಚಿಪಾಣಿ’ ಚಿತ್ರವನ್ನು ಚಿತ್ರೋತ್ಸವ ಸಮಿತಿಗೆ ಕಳುಹಿಸುವುದಾಗಿ ಹೇಳುವ ನಟೇಶ್ ಹೆಗ್ಡೆ, ‘ಭಾರತೀಯ ಪ್ರೀಮಿಯರ್ ಮಾಡುವುದಕ್ಕೆ ಎಲ್ಲೆಲ್ಲಿ ಅವಕಾಶ ಸಿಗುತ್ತದೋ, ಅಲ್ಲಿಗೆಲ್ಲಾ ಚಿತ್ರವನ್ನು ಕಳುಹಿಸುತ್ತೇನೆ. ಬೆಂಗಳೂರು ಚಿತ್ರೋತ್ಸವಕ್ಕೂ ಕಳಿಸುತ್ತೇವೆ’ ಎನ್ನುತ್ತಾರೆ.
‘ವಾಘಾಚಿಪಾಣಿ’ ಚಿತ್ರಕ್ಕೆ ವಿಕಾಸ್ ಅರಸ್ ಛಾಯಾಗ್ರಹಣ ಮತ್ತು ಲಿಯೋ ಹೆಬ್ಲಮ್ ಅವರ ಸಂಗೀತವಿದೆ.