ಕನ್ನಡಿಗರ ಕಣ್ಮಣಿ ʻಪುನೀತ್‌ʼ ಪುಣ್ಯಸ್ಮರಣೆ ಇಂದು; ಅಭಿಮಾನಿಗಳಲ್ಲಿ ಮಾಸದ ನೋವು
x

ಪುನೀತ್‌ ರಾಜ್‌ಕುಮಾರ್‌

ಕನ್ನಡಿಗರ ಕಣ್ಮಣಿ ʻಪುನೀತ್‌ʼ ಪುಣ್ಯಸ್ಮರಣೆ ಇಂದು; ಅಭಿಮಾನಿಗಳಲ್ಲಿ ಮಾಸದ ನೋವು

2021ರ ಆ ಕರಾಳ ಶುಕ್ರವಾರದ ಮಧ್ಯಾಹ್ನ ಸಂಭವಿಸಿದ ಆಘಾತಕಾರಿ ಘಟನೆ ಇಂದಿಗೂ ಕನ್ನಡಿಗರ ಹೃದಯದಲ್ಲಿ ಮಾಸದ ನೋವನ್ನುಂಟು ಮಾಡಿದೆ. ಜನರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದ ವೇಳೆ 'ಪುನೀತ್‌' ಇನ್ನಿಲ್ಲ ಎಂಬ ಘೋರ ಸುದ್ದಿ ಸಿಡಿಲಿನಂತೆ ಬಡಿದಿತ್ತು.


Click the Play button to hear this message in audio format

'ಪವರ್ ಸ್ಟಾರ್', ಕರ್ನಾಟಕ ರತ್ನ,ಕೋಟ್ಯಂತರ ಜನರ ಪ್ರೀತಿಯ ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ದಿನ ಅಕ್ಟೋಬರ್ 29. 2021ರ ಆ ಕರಾಳ ಶುಕ್ರವಾರದ ಮಧ್ಯಾಹ್ನ ಸಂಭವಿಸಿದ ಆಘಾತಕಾರಿ ಘಟನೆ ಇಂದಿಗೂ ಕನ್ನಡಿಗರ ಹೃದಯದಲ್ಲಿ ಮಾಸದ ನೋವನ್ನುಂಟು ಮಾಡಿದೆ. ಜನರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದ ವೇಳೆ 46 ರ ಪ್ರಾಯದ 'ಪುನೀತ್‌' ಇನ್ನಿಲ್ಲ ಎಂಬ ಘೋರ ಸುದ್ದಿ ಸಿಡಿಲಿನಂತೆ ಬಡಿದಿತ್ತು.

ಕೋಟ್ಯಂತರ ಅಭಿಮಾನಿಗಳು 'ಅಪ್ಪು' ಇನ್ನಿಲ್ಲ ಎಂಬುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕಂಗೆಟ್ಟಿದ್ದರು. ಆದರೆ, ಹೃದಯ ಸ್ತಂಭನದಿಂದ ಅಪ್ಪು ಎಲ್ಲರನ್ನು ಅಗಲಿದ್ದು ವಾಸ್ತವವಾಗಿತ್ತು. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಪುನೀತ್ ರಾಜ್‌ಕುಮಾರ್ ತಮ್ಮ ಪತ್ನಿ ಅಶ್ವಿನಿ, ಮಕ್ಕಳು ಧೃತಿ, ವಂದಿತಾ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಇಂದಿಗೂ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗಿ ನಾಲ್ಕು ವರ್ಷಗಳಾಗಿದೆ. ಆದರೂ ಅವರ ನೆನಪು ಮಾತ್ರ ಮಾಸಿಲ್ಲ.

ಬಾಲನಟನಿಂದ 'ಪವರ್ ಸ್ಟಾರ್'ವರೆಗೆ

ಬಾಲ್ಯದಲ್ಲೇ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಪಯಣ ಆರಂಭವಾಯಿತು. 'ಬೆಟ್ಟದ ಹೂವು' ಚಿತ್ರದಲ್ಲಿ ಅತ್ಯುತ್ತಮ ಬಾಲ ಕಲಾವಿದನಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. 2002ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಚಿತ್ರ ʻಅಪ್ಪುʼ ಸಿನಿಮಾ ಮೂಲಕ ಅವರು ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಈ ಚಿತ್ರದ ಯಶಸ್ಸು ಅವರ ಅಸಾಧಾರಣ ವೃತ್ತಿಜೀವನಕ್ಕೆ ನಾಂದಿ ಹಾಡಿತು. 'ಅಪ್ಪು' ಎಂಬ ಹೆಸರು ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ಅಡ್ಡ ಹೆಸರಾಯಿತು.

'ಅಪ್ಪು' ನಂತರ ಪುನೀತ್ ಅವರು ಸತತ ಹಿಟ್‌ ಚಿತ್ರಗಳನ್ನು ನೀಡುತ್ತಾ ಹೋದರು. ಮಹೇಶ್ ಬಾಬು ನಿರ್ದೇಶನದ 'ಅರಸು', ಮೋಹನ್‌ಲಾಲ್ ಅವರೊಂದಿಗೆ ನಟಿಸಿದ 'ಮೈತ್ರಿ', ಹಾಗೂ ಆಕ್ಷನ್ ಚಿತ್ರಗಳಾದ 'ಪೃಥ್ವಿ', 'ವಂಶಿ', 'ಹುಡುಗರು', 'ರಣ ವಿಕ್ರಮ', 'ರಾಜಕುಮಾರ', 'ಜಾಕಿ' ಮುಂತಾದ ಚಿತ್ರಗಳಲ್ಲಿನ ಅವರ ಪಾತ್ರಗಳು ಅವರ ನಟನೆಯ ವಿಸ್ತಾರ ಮತ್ತು ವರ್ಚಸ್ಸನ್ನು ಸಾಬೀತುಪಡಿಸಿದವು.

ವಿನಯಶೀಲತೆ ಮತ್ತು ಜನಮನದ ನಾಯಕ

ತಮ್ಮ ಅಪಾರ ಜನಪ್ರಿಯತೆ ಹೊರತಾಗಿಯೂ, ಪುನೀತ್ ರಾಜ್‌ಕುಮಾರ್ ಯಾವಾಗಲೂ ವಿನಮ್ರರಾಗಿ ಉಳಿದಿದ್ದರು. ಅಭಿಮಾನಿಗಳೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ಸರಳವಾಗಿ ಬಟ್ಟೆ ಧರಿಸುವುದರಿಂದ ತಮ್ಮ ಅಭಿಮಾನಿಗಳು ಸುಲಭವಾಗಿ ತಮ್ಮೊಂದಿಗೆ ಬೆರೆಯಲು, ಸರಳವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಪುನೀತ್‌ ಒಮ್ಮೆ ಹೇಳಿದ್ದರು. ಈ ವಿನಮ್ರತೆಯು ಅವರನ್ನು ಕೇವಲ ಸೂಪರ್‌ಸ್ಟಾರ್ ಆಗಿ ಮಾತ್ರವಲ್ಲದೆ, ನಿಜವಾದ ಜನ ನಾಯಕರನ್ನಾಗಿ ಮಾಡಿತ್ತು.

ಅಗಲುವ ಮುನ್ನ ಆ ಕೊನೆಯ ನಗು

ಪುನೀತ್ ಅವರು ನಿಧನರಾಗುವ ಕೇವಲ ಎರಡು ದಿನಗಳ ಮೊದಲು, ಸಹೋದರ ಶಿವರಾಜ್‌ಕುಮಾರ್ ಅವರ ʻಭಜರಂಗಿ 2ʼ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಅಲ್ಲಿ ಶಿವರಾಜ್‌ಕುಮಾರ್ ಮತ್ತು ಯಶ್ ಅವರೊಂದಿಗೆ ನಕ್ಕು, ಕುಣಿದ ಕೊನೆಯ ಕ್ಷಣಗಳು ಇಂದಿಗೂ ಅಭಿಮಾನಿಗಳ ಕಣ್ಣಲ್ಲಿ ಹಸಿರಾಗಿವೆ. ಆ ಸಂಭ್ರಮದ ನಂತರ ಅದೆಂತಹ ದುರಂತ ಕಾದಿತ್ತು ಎಂಬುದನ್ನು ನೆನೆದರೆ ಮನಸ್ಸು ಮಮ್ಮಲ ಮರುಗುತ್ತದೆ.

ಇಂದಿಗೂ ಪುನೀತ್‌ ಸ್ಮರಣಾರ್ಥ ಅವರ ಅಭಿಮಾನಿಗಳು ವಿಶೇಷ ಚಲನಚಿತ್ರ ಪ್ರದರ್ಶನಗಳು, ದತ್ತಿ ಕಾರ್ಯಗಳು ಮತ್ತು ಅವರ ಮೌಲ್ಯಗಳನ್ನು ಸಾರುವ 'ಪಿಆರ್‌ಕೆ ಆ್ಯಪ್'‌ ನಂತಹ ಡಿಜಿಟಲ್ ಗೌರವಗಳ ಮೂಲಕ ಅವರನ್ನು ಸ್ಮರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೇಲೆ ಅವರ ಪ್ರಭಾವ ಎಂದಿಗೂ ಅಳಿಯದು. ಅಭಿಮಾನಿಗಳು, ರಾಜಕಾರಣಿಗಳು, ಮತ್ತು ಸಿನಿ ಗಣ್ಯರು ಇಂದು ಪುನೀತ್‌ ಅವರನ್ನು ಸ್ಮರಿಸಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು ಪುನೀತ್‌ ರಾಜಕುಮಾರ್‌ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ. ಅವರ ಸಮಾಧಿ ಮುಂದೆ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇಡೀ ದಿನ ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Read More
Next Story