
ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ನಟಿ ಇನ್ನಿಲ್ಲ
ಕಿರುತೆರೆ ನಟಿ ರಶ್ಮಿಲೀಲಾ ಅವರು ಸೋಮವಾರ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಕಿರುತೆರೆ ನಟಿ ರಶ್ಮಿಲೀಲಾ ಅವರು ಸೋಮವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಅವರು ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದರು. ಈ ವಿಷಯವನ್ನು ಅವರ ಪತಿ ಸಾರಕ್ಕಿ ಮಂಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಲೀಲಾ ಅವರು ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರು 2019 ರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಈ ಕಾಯಿಲೆ ಗುಣವಾಗಲು ಶ್ವಾಸಕೋಶ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆರ್ಥಿಕ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದರು. ಕಳೆದ ಫೆಬ್ರವರಿಯಲ್ಲಿ ಶ್ವಾಸಕೋಶ ಕಸಿ ಚಿಕಿತ್ಸೆ ಕೂಡ ಆಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.
ಪತಿ ಸಾರಕ್ಕಿ ಮಂಜು ಅವರು ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಯಾರ ಪ್ರಾರ್ಥನೆಯೂ ಫಲಿಸಿಲ್ಲ, ಚಿಕಿತ್ಸೆಯೂ ಫಲಿಸಿಲ್ಲ. ಕೊನೆಗೂ ಕಾಲನ ಕರೆಗೆ ಓಗುಟ್ಟು ರಶ್ಮಿಲೀಲಾ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ನಟಿ ಸೊಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, “ಆತ್ಮೀಯ ಸ್ನೇಹಿತರೇ, ನಾನು ತುಂಬಾ ವೈಯಕ್ತಿಕ ಮತ್ತು ತುರ್ತು ವಿಷಯವನ್ನು ಹಂಚಿಕೊಳ್ಳಲು ಭಾರವಾದ ಹೃದಯದಿಂದ ಕೈ ಚಾಚುತ್ತಿದ್ದೇನೆ. ನಾನು ಗಂಭೀರ ಶ್ವಾಸಕೋಶದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದೇನೆ ಮತ್ತು ನನ್ನ ವೈದ್ಯರು ಈಗ ಬದುಕುಳಿಯಲು ಶ್ವಾಸಕೋಶ ಕಸಿ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಇದು ಜೀವ ಉಳಿಸುವ ಆದರೆ ತುಂಬಾ ದುಬಾರಿ ವಿಧಾನವಾಗಿದೆ.
ಇದು ನಾನು ಅಥವಾ ನನ್ನ ಕುಟುಂಬವು ನಾವೇ ನಿರ್ವಹಿಸಬಹುದಾದದ್ದಕ್ಕಿಂತ ಮೀರಿದೆ. ನಾನು ನಿಮ್ಮ ಸಹಾಯವನ್ನು ವಿನಮ್ರವಾಗಿ ವಿನಂತಿಸುತ್ತಿದ್ದೇನೆ, ನಿಮ್ಮಿಂದ ಒಂದು ಸಣ್ಣ ಕೊಡುಗೆ ಕೂಡ ನನ್ನ ಜೀವನ ಹೋರಾಟದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ಬೆಂಬಲ ಮತ್ತು ಪ್ರಾರ್ಥನೆಗಳು ನನಗೆ ಜಗತ್ತನ್ನು ಅರ್ಥೈಸುತ್ತವೆ. ಈ ನಿರ್ಣಾಯಕ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದಕ್ಕಾಗಿ ತುಂಬಾ ಧನ್ಯವಾದಗಳು, ರಾಘವ ಲಾರೆನ್ಸ್ ಹಾಗೂ ಕಿಚ್ಚ ಸುದೀಪ್ ಎಂದು ತಮ್ಮ ಸೋಶಿಯಲ್ ಎಂದು ಬರೆದುಕೊಂಡಿದ್ದರು. ಚಿಕಿತ್ಸೆಗೆ 19 ಲಕ್ಷ ರೂಪಾಯಿಗಳು ಅಗತ್ಯವಿದೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ನಿಮ್ಮೆಲ್ಲರ ಸಹಾಯಕ್ಕಾಗಿ ಮುಂದೆ ನೋಡುತ್ತಿದ್ದೇನೆ ಎಂದು ನಟಿ ಬರೆದುಕೊಂಡಿದ್ದರು. ಆದರೆ ಸೋಮವಾರ ನಟಿ ರಶ್ಮಿ ಲೀಲಾ ವಿಧಿವಶರಾಗಿದ್ದಾರೆ.

