ಸಿಬಿಎಸ್‌ಸಿ ತಡೆ| ವಿವಾದಗ್ರಸ್ಥ 'ಎಮರ್ಜೆನ್ಸಿ' ಸಿನೆಮಾ ಬಿಡುಗಡೆ ಮುಂದಕ್ಕೆ
ಸಿಖ್ ಸಮುದಾಯದ 'ಆಕ್ಷೇಪಾರ್ಹ ಚಿತ್ರಣ' ಮತ್ತುʻತಪ್ಪು ದಾರಿಗೆ ಎಳೆಯುವಂತಿದೆʼ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಕಂಗನಾ ರನೌತ್ ಅವರ ಹೊಸ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ಮುಂದಕ್ಕೆ ಹೋಗಿದೆ.
1975 ರ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಬಿಜೆಪಿ ಸಂಸದ ರನೌತ್ ನಟಿಸಿರುವ ಚಿತ್ರ ಸೆಪ್ಟೆಂಬರ್ 6 ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಬಿಡುಗಡೆ ಮುಂದೆ ಹೋಗಿದೆ ಮತ್ತು ಹೊಸ ದಿನಾಂಕವನ್ನು ಘೋಷಿಸಿಲ್ಲ.
ಸಮುದಾಯಗಳ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ(ಸಿಬಿಎಫ್‌ಸಿ) ಹೇಳಿದೆ. ಚಿತ್ರದ ಟ್ರೇಲರ್ ಪಂಜಾಬಿನಲ್ಲಿ ವಿವಾದಕ್ಕೆ ನಾಂದಿ ಹಾಡಿತ್ತು.
ಸಿಖ್ಖರ ಅಸಮಾಧಾನ: ಕೆಲವು ವಾರಗಳ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಗಲಾಟೆ ಶುರುವಾಗಿತ್ತು. ಖಲಿಸ್ತಾನ್ ಚಳವಳಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರು ಪ್ರತ್ಯೇಕ ಸಿಖ್ ರಾಜ್ಯ ನೀಡಿದಲ್ಲಿ ಇಂದಿರಾ ಅವರ ರಾಜಕೀಯ ಪಕ್ಷವಾದ ಕಾಂಗ್ರೆಸ್‌ಗೆ ಮತ ಹಾಕಿಸುವ ಭರವಸೆ ನೀಡಿದ್ದರು ಎಂದು ಚಿತ್ರದಲ್ಲಿ ತೋರಿಸಲಾಗಿದೆ.
ಶಿರೋಮಣಿ ಅಕಾಲಿದಳದ ದೆಹಲಿ ಘಟಕವು ಚಿತ್ರದಲ್ಲಿ ಸಿಖ್ಖರ ಚಿತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿ, ಚಲನಚಿತ್ರದ ಬಿಡುಗಡೆಯನ್ನು ನಿಲ್ಲಿಸುವಂತೆ ಸಿಬಿಎಫ್‌ಸಿಗೆ ಆಗಸ್ಟ್ 27ರಂದು ನೋಟಿಸ್ ಕಳುಹಿಸಿತ್ತು. ಟ್ರೇಲರ್ ಅಕಾಲ್ ತಖ್ತ್, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಸೇರಿದಂತೆ ಇತರ ಸಿಖ್ ಸಂಘಟನೆಗಳನ್ನು ಅಸಮಾಧಾನಗೊಳಿಸಿದೆ.
ʻಇಂಥ ಚಿತ್ರಗಳು ದಾರಿ ತಪ್ಪಿಸುತ್ತವೆ. ಪಂಜಾಬ್ ಮತ್ತು ಇಡೀ ರಾಷ್ಟ್ರದ ಸಾಮಾಜಿಕ ರಚನೆಗೆ ಹಾನಿ ಮಾಡುತ್ತವೆ. ರನೌತ್ ಅವರ ಗುರಿ ಇಂದಿರಾ ಗಾಂಧಿ ಅಲ್ಲ; ಸಿಖ್ ಸಮುದಾಯ. ಸಿನೆಮಾ ಸಿಖ್ ಸಮುದಾಯವನ್ನು ತಪ್ಪು ಮತ್ತು ನಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುತ್ತದೆʼ ಎಂದು ಹೇಳಿದೆ.
ರನೌತ್ ಸಮರ್ಥನೆ: ಚಿತ್ರವನ್ನು ಸಮರ್ಥಿಸಿಕೊಂಡಿರುವ ರನೌತ್, ನ್ಯಾಯಾಲಯದ ಮೊರೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ʻಇಂದಿ ರಾ ಗಾಂಧಿ ಹತ್ಯೆ, ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಪಂಜಾಬ್ ಗಲಭೆಗಳನ್ನು ತೋರಿಸದಂತೆ ತಮ್ಮ ಮೇಲೆ ಒತ್ತಡವಿದೆ,ʼ ಎಂದು ಈ ಹಿಂದೆ ಎಕ್ಸ್ ನಲ್ಲಿ ಹೇಳಿದ್ದರು. ʻಇದು ನಂಬಲಾಗದ ಸಮಯ ಮತ್ತು ಈ ದೇಶದ ಪರಿಸ್ಥಿತಿ ಬಗ್ಗೆ ವಿಷಾದಿಸುತ್ತೇನೆ,ʼ ಎಂದು ಹೇಳಿದ್ದಾರೆ.
ʻಸಮಸ್ಯೆಯ ಸೂಕ್ಷ್ಮತೆಯಿಂದಾಗಿ ಸಿನೆಮಾದ ಪ್ರಮಾಣೀಕರಣ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ,ʼ ಎಂದು ತಿಳಿದುಬಂದಿದೆ.