
ಕಾಜಲ್ ಅಗರ್ವಾಲ್
ಕಾಜಲ್ ಅಗರ್ವಾಲ್ ಸಾವಿನ ವದಂತಿ: ನಟಿ ಕೊಟ್ಟ ಸ್ಪಷ್ಟನೆ ಏನು?
ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, 'ನಾನು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದೇನೆ ಎಂದು ಹೇಳುವ ಕೆಲವು ಆಧಾರರಹಿತ ವರದಿಗಳಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ತುಂಬಾ ತಮಾಷೆಯಾಗಿದೆ ಎಂದು ಬರೆದಿದ್ದಾರೆ.
ಚಲನಚಿತ್ರ ನಟಿ ಕಾಜಲ್ ಅಗರ್ವಾಲ್ ಅವರ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಸುಳ್ಳು ಸುದ್ದಿಯು ಅವರ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿತ್ತು. ರಸ್ತೆ ಅಪಘಾತದಲ್ಲಿ ಕಾಜಲ್ ಮೃತಪಟ್ಟಿದ್ದಾರೆ ಎಂಬ ವದಂತಿಯು ಕಾಡ್ಗಿಚ್ಚಿನಂತೆ ಹರಡಿ, ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ನಟಿ ಕಾಜಲ್, ತಾವೂ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ ಕಾಜಲ್
ತಮ್ಮ ಸಾವಿನ ಸುಳ್ಳು ಸುದ್ದಿಯ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ ಕಾಜಲ್, "ನಾನು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದೇನೆ ಎಂದು ಹೇಳುವ ಕೆಲವು ಆಧಾರರಹಿತ ವರದಿಗಳು ಹರಿದಾಡುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ತಮಾಷೆಯಾಗಿದೆ. ನಾನು ಸುರಕ್ಷಿತವಾಗಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ ಮತ್ತು ನಂಬಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕಾಜಲ್
ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾಜಲ್ ಅಗರ್ವಾಲ್, ಇತ್ತೀಚೆಗೆ ವಿಷ್ಣು ಮಂಚು ಅವರ 'ಕಣ್ಣಪ್ಪ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' ಚಿತ್ರದಲ್ಲೂ ಅವರು ನಟಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಮಲ್ ಹಾಸನ್ ಅವರ ಬಹುನಿರೀಕ್ಷಿತ ಚಿತ್ರ 'ಇಂಡಿಯನ್ 3'ರಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ 'ರಾಮಾಯಣ' ಚಿತ್ರದಲ್ಲಿಯೂ ಅವರು ಅಭಿನಯಿಸಲಿದ್ದು, ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವರದಿಗಳಿವೆ.