ಕೈವದ ಕಥೆ ಹುಟ್ಟಿದ್ದು ಶವ ಕತ್ತರಿಸುವ ಮೇಜಿನ ಮೇಲೆ!
ʼಕೈವʼ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಪ್ರೀತಿ, ಪ್ರೇಮ ಪ್ರಣಯದ ಸುತ್ತ ಸಮಾಜದ ಚಿತ್ರವನ್ನು ಕಟ್ಟುತ್ತಿದ್ದ ನಿರ್ದೇಶಕ ಜಯತೀರ್ಥ, ಮೊದಲ ಬಾರಿಗೆ ಆಕ್ಷನ್ ಚಿತ್ರಗಳತ್ತ ಹೊರಳಿರುವುದು ಈ ಚಿತ್ರದ ವಿಶೇಷ.
ʼಕೈವʼ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಪ್ರೀತಿ, ಪ್ರೇಮ ಪ್ರಣಯದ ಸುತ್ತ ಸಮಾಜದ ಚಿತ್ರವನ್ನು ಕಟ್ಟುತ್ತಿದ್ದ ನಿರ್ದೇಶಕ ಜಯತೀರ್ಥ, ಮೊದಲ ಬಾರಿಗೆ ಆಕ್ಷನ್ ಚಿತ್ರಗಳತ್ತ ಹೊರಳಿರುವುದು ಈ ಚಿತ್ರದ ವಿಶೇಷ. ಹಾಗೆ ಹೊರಳಲು ಅವರಿಗೆ ಕಥೆಯೊಂದು ಸಿಕ್ಕಿತು. ಅದು ಸಿಕ್ಕಿದ್ದು ಶವಾಗಾರವೊಂದರ ಹೆಣ ಕತ್ತರಿಸುವ ಮೇಜಿನ ಮೇಲೆ. ಈ ಚಿತ್ರದ ವಿಶೇಷವೆಂದರೆ ೮೦ರ ದಶಕದ ಬೆಂಗಳೂರಿನ ಭೂಗತ ಜಗತ್ತು, ಬೆಂಗಳೂರಿನ ಜಗದ್ವಿಖ್ಯಾತ ಕರಗ ಹಾಗೂ ಆ ಕಾಲಘಟ್ಟದಲ್ಲಿ ನಡೆದ ಗಂಗಾರಾಂ ಕಟ್ಟಡ ಕುಸಿತದ ದುರಂತ...ಎಲ್ಲವೂ ಮಿಳಿತಗೊಂಡ ಆ ಕಾಲದ ಪ್ರೇಮ ಕಥೆಯೊಂದರ ಅನಾವರಣ.
ಬೆಂಗಳೂರಿನ ಜಗದ್ವಿಖ್ಯಾತ ಕರಗ ತನ್ನೆಲ್ಲ ಸಪ್ತವರ್ಣಗಳೊಂದಿಗೆ ಅಕ್ಷರಶಃ ಅರ್ಥಶಃ ವಿವಾದರಹಿತವಾಗಿ ಹಿರಿ ತೆರೆಯ ಮೇಲೆ ಕಾಣಿಸಿಕೊಂಡಿದೆ. ಇದು ಜಯತೀರ್ಥ ಅವರ ದೃಶ್ಯ ಮಾಧ್ಯಮದ ಮೇಲಿನ ಹಿಡಿತದ ಸಂಕೇತವೆಂದು ಭಾವಿಸಬಹುದು. ಆದರೆ ಇದಕ್ಕೆ ಪೂರಕವಾಗಿ ಜಯತೀರ್ಥ ತಮ್ಮ ದೇಸಿ ತಿಳುವಳಿಕೆ, ಜಾನಪದ ಹಾಗೂ ರಂಗಭೂಮಿಯ ತಿಳುವಳಿಕೆಯನ್ನು ಬೆರೆಸಿ, ಅರ್ಥಪೂರ್ಣವಾಗಿ ದೃಶ್ಯಗಳನ್ನು ಕಟ್ಟುತ್ತಾರೆ.
ಕಸ್ತೂರಿ ಮಾಸಿಕದಲ್ಲಿ ಬಂದ ಮೊಪಾಸನ ಸಣ್ಣ ಕಥೆ ಆಧರಿಸಿದ ಕಿರುಚಿತ್ರ ನಿರ್ಮಿಸಿ, ಆ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯತೀರ್ಥ, ಇಂದು ಏಳು ಚಿತ್ರಗಳಷ್ಟು ಹಳಬರು. ʼಒಲವೇ ಮಂದಾರʼ, ʼಟೋನಿʼ, ʼಬುಲೆಟ್ ಬಸ್ಯಾʼ, ʼಬೆಲ್ ಬಾಟಮ್ʼ, ʼಬನಾರಸ್ʼ, ʼವೆನ್ನಿಲಾʼ ಚಿತ್ರಗಳ ನಂತರ ಈಗ ʼಕೈವʼ. ʼಕೈವʼದಲ್ಲಿ ಬೆಂಗಳೂರು ಕರಗದ ಹಿನ್ನೆಲೆಯಲ್ಲಿ ಗಾಢ ಪ್ರೇಮದ ಚಿತ್ರಣವೊಂದಿದೆ. ಇಡೀ ಪ್ರೇಮ ಕಥೆ ಕರಗದ ಹಿನ್ನೆಲೆಯಲ್ಲಿ ಆರಂಭವಾಗಿ ಕರಗ ಮುಗಿಯುವುದರೊಂದಿಗೆ ಮುಕ್ತಾಯವಾಗುತ್ತದೆ.
ಕರಗ, ಗಂಗಾರಾಂ ಕಟ್ಟಡ ದುರಂತ ಹಾಗೂ ಭೂಗತ ಜಗತ್ತು
ನವೆಂಬರ್ ೨೭ರಂದು ಬಿಡುಗಡೆಯಾದ ʼಕೈವʼ ಚಿತ್ರದ ಟ್ರೇರ್ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿತ್ತು. ಏಕೆಂದರೆ ಟ್ರೇರ್‍ನ ಚಲಿಸುವ ದೃಶ್ಯಗಳು ಪ್ರೇಕ್ಷಕರಿಗೆ ೮೦ರ ದಶಕದ ಕಾಲಘಟ್ಟವನ್ನು ನೆನಪಿಸುತ್ತದೆ. ಒಂದು ನೆಲೆಯಲ್ಲಿ ಕರಗ, ಮತ್ತೊಂದು ನೆಲೆಯಲ್ಲಿ ಬೆಂಗಳೂರಿನ ಭೂಗತ ಜಗತ್ತು, ಇಂದಿರಾ ಬ್ರಿಗೇಡ್ನ ಎಂ ಪಿ. ಜಯರಾಜ್, ಕೋತ್ವಾಲ್ ರಾಮಚಂದ್ರ, ಮುತ್ತಪ್ಪ ರೈ, ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ರ್ನೆಂದು ನೆಲೆಯಲ್ಲಿ, ಸೆಪ್ಟೆಂಬರ್ ೧೨, ೧೯೮೩ರಂದು ಧರೆಗುರುಳಿದ ಗಂಗಾರಾಂ ಕಟ್ಟಡ, ಈ ದುರಂತದಲ್ಲಿ ಬಲಿಯಾದ ೧೨೩ ಜೀವಗಳು, ಗಾಯಗೊಂಡ ನೂರಾರು ಮಂದಿಯ ಬದುಕಿನ ಹಿನ್ನೆಲೆ ಎಲ್ಲವನ್ನೂ ಪ್ರೇಕ್ಷಕರಿಗೆ ನೆನಪಿಸುತ್ತಲೇ, ಸುಂದರ ಪ್ರೇಮಕಥೆಯನ್ನು ಹೇಳುತ್ತದೆ. ಗಂಗಾರಾಂ ಕಟ್ಟಡ ಕುಸಿತವನ್ನು ಇಂದಿಗೂ ಬೆಂಗಳೂರಿನ ಅತ್ಯಂತ ಘೋರ ದುರಂತ ಎಂದೇ ಭಾವಿಸಲಾಗುತ್ತಿದೆ.
ʼಕೈವʼದಲ್ಲಿ ಧನ್ವೀರ್ ಹಾಗೂ ಮೇಘಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಶ್ವೇತಪ್ರಿಯ ಮೊದಲಬಾರಿಗೆ ಕ್ಯಾಮರಾ ಹಿಡಿದಿದ್ದಾರೆ. ಶ್ವೇತಪ್ರಿಯ ೮೦ರ ದಶಕದ ಕಾಲಘಟ್ಟವನ್ನು ಯಶಸ್ವಿಯಾಗಿ ದೃಶ್ಯದಲ್ಲಿ ಮೂಡಿಸಿದ್ದಾರೆ. ಪ್ರತಿ ಫ್ರೇಮ್ ಕೂಡ ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ಚಿತ್ರ ನೋಡಿದ ಅಂದಿನವರಿಗೆ ತಮ್ಮ ಕಾಲಕ್ಕೆ ಹಿಂದಿರುಗಿದ ಅನುಭವವಾಗುತ್ತದೆ ಎನ್ನುತ್ತಾರೆ ಜಯತೀರ್ಥ. ಜಯತೀರ್ಥ ʼದ ಫೆಡರಲ್ʼ ಜೊತೆ ವಿಶೇಷವಾಗಿ ಚಿತ್ರ ಕುರಿತ ತಮ್ಮ ಅನಿಸಿಕೆಗಳು, ಚಿತ್ರಕಥೆ ಹುಟ್ಟಿದ ರೀತಿ ಎಲ್ಲವನ್ನೂ ಹಂಚಿಕೊಂಡಿದ್ದಾರೆ.
ಕಥೆ ಹುಟ್ಟಿದ ಸಮಯ-ಸಂದರ್ಭ
ನೀವು ನಂಬಲಿಕ್ಕಿಲ್ಲ. ಈ ಕಥೆ ಹುಟ್ಟಿದ್ದು ಬೆಂಗಳೂರಿನ ಶವಾಗಾರವೊಂದರ ಹೆಣಗಳನ್ನು ಕೊಯ್ಯುವ ಮೇಜಿನ ಮೇಲೆ. ೨೦೧೯ರಲ್ಲಿ ಬೆಲ್ ಬಾಟಮ್ ಚಿತ್ರ ಮಾಡುವಾಗ, ಒಂದು ದೃಶ್ಯಕ್ಕಾಗಿ ಹೆಣ ಕೊಳೆತಾಗ ಹುಟ್ಟುವ ಹುಳಗಳು (ಮ್ಯಾಗಟ್ಸ್)ಗಾಗಿ ನಾನು ಶವಾಗಾರವೊಂದಕ್ಕೆ ಹೋಗಿದ್ದೆ. ಆಗ ಹೆಣ ಕೊಯ್ಯುವವನೊಂದಿಗೆ ಮಾತನಾಡುತ್ತಾ... ಹೆಣ ಕತ್ತರಿಸುವಾಗ ನಿನಗೆ ಭಯವಾಗುವುದಿಲ್ಲವೇ? ಎಂದು ಕೇಳಿದೆ. ಆಗ ಅವನು; ನಲವತ್ತು ವರ್ಷದಿಂದ ಹೆಣ ಕೊಯ್ಯುತ್ತಿದ್ದೇನೆ. ನನಗೆಂಥ ಭಯ. ಆದರೆ ಒಮ್ಮೆ ಮಾತ್ರ ನನಗೆ ಭಯ, ಜಿಗುಪ್ಸೆ ಎರಡೂ ಆಗಿತ್ತು. ಒಂದು ಹೆಣದ ದೇಹದ ಮೇಲ್ಭಾಗವನ್ನು ಕೊಚ್ಚಿ ಹಾಕಿದ್ದರು. ಗುರುತಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದ. ಆ ದೇಹವನ್ನು ಆ ರೀತಿ ಕೊಚ್ಚಿದ್ದು ಯಾರು? ಎಂದು ಕೇಳಿದೆ. ಆಗ ಅವನು; ಓ ಅವನೊಬ್ಬ ಪಾಗಲ್ ಪ್ರೇಮಿ. ತನ್ನ ಪ್ರೀತಿಗಾಗಿ ಆ ಪಾಟಿ ಕೊಚ್ಚಿ ಹಾಕಿದ್ದ ಎಂದು ಹೇಳಿದ. ನನಗೆ ಕುತೂಹಲ ಹೆಚ್ಚಾಯಿತು. ಅವನು ಆ ಪಾಗಲ್ ಪ್ರೇಮಿಯ ಕಥೆಯನ್ನು ಹೇಳಿದ. ಅವನಿನ್ನೂ ಬದುಕಿದ್ದಾನೆ ಎಂದು ಕೂಡ ಹೇಳಿದ. ಆದರೆ ವಿವರಗಳನ್ನು ನೀಡಲು ಹೆದರಿದ.
ಅಂತರ್-ಧರ್ಮೀಯ ಪ್ರೇಮ
ಅವನು ಹೇಳಿದ ಕಥೆಯ ಜಾಡನ್ನು ಹಿಡಿದು ಹೊರಟಾಗ ಸಿಕ್ಕ ಕಥೆಯನ್ನು ನಾನು ಸಿನಿಮೀಯವಾಗಿ ರೂಪಿಸಿದೆ. ಆ ಪಾಗಲ್ ಪ್ರೇಮಿಗಳು ಈಗಲೂ ಇದ್ದಾರೆ. ಸಂತೋಷವಾಗಿದ್ದಾರೆ. ಭೂಗತ ಜಗತ್ತಿನ ಜೊತೆಗಿನ ಎಲ್ಲ ಸಂಬಂಧ ಕಳೆದುಕೊಂಡು ನಮ್ಮ ನಿಮ್ಮಂತೆ ಜೀವಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಆ ಹುಚ್ಚು ಪ್ರೇಮಿಗಳು ಬೇರೆಬೇರೆ ಧರ್ಮಕ್ಕೆ ಸೇರಿದ್ದು. ಅದು ಸಮಾಜದ ಕೆಲವರಲ್ಲಿ ಅಸಮಾಧಾನ ಮೂಡಿಸಿತ್ತು. ಆದರೆ ಯಾವುದೇ ಶಕ್ತಿ ಆ ಅಂತರ್-ಧರ್ಮೀಯ ಪ್ರೇಮಿಗಳನ್ನು ಬೇರೆ ಮಾಡಲು ಸಾಧ್ಯವೇ ಆಗಲಿಲ್ಲ.
ಈ ಹಿಂದೆ ʼಹೆಡ್‌ಬುಷ್ʼ ಚಿತ್ರ ಮಾಡಿದಾಗ ಅದರಲ್ಲಿ ಕರಗ ತೋರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ನೀವು ಕರಗ ತೋರಿಸಿದ್ದೀರಿ. ನಿಮಗೆ ಇದು ವಿವಾದಾತ್ಮಕವಾಗುವ ಭಯವೇನಾದರೂ ಕಾಡುತ್ತಿದೆಯೇ? ಎಂದು ಕೇಳಿದರೆ; ಇಲ್ಲ ಅಂಥ ಭಯವೇನಿಲ್ಲ. ಏಕೆಂದರೆ ಈ ಚಿತ್ರ ಮಾಡುವ ಮುನ್ನ ಧರ್ಮರಾಯನ ಕರಗದ ದತ್ತಿ ಸಮಿತಿಯವರನ್ನು ಭೇಟಿ ಮಾಡಿದ್ದೆ. ಅವರಿಂದ ಪಡೆದ ಮಾಹಿತಿಯನ್ನು ಆಧರಿಸಿಯೇ ಚಿತ್ರ ಮಾಡಿದ್ದೇನೆ. ಅವರಿಗೂ ಸಂತೋಷವಾಗಿದೆ. ಅವರೇ ಪತ್ರಿಕಾಗೋಷ್ಠಿ ಕರೆದು, ಇದರ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಕೊಟ್ಟಿದ್ದಾರೆ. ಇನ್ನೇನು ಬೇಕು ಎಂದು ಜಯತೀರ್ಥ ಮುಗುಳ್ನಗುತ್ತಾರೆ.
ನಿಮ್ಮ ಚಿತ್ರದಲ್ಲಿ ಹೊಸಬರಿಗೆ ಆದ್ಯತೆ. ಸ್ಟಾರ್ ನಟರೊಂದಿಗೆ ಚಿತ್ರ ಮಾಡುವುದಿಲ್ಲ ಏಕೆ? ಎಂಬ ಪ್ರಶ್ನೆಗೆ; ಹೊಸಬರನ್ನು ನನಗೆ ಹೇಗೆ ಬೇಕೋ ಹಾಗೆ ನಾನು ಪಳಗಿಸಿಕೊಳ್ಳಬಹುದು. ಅವರ ಡೇಟ್ಸ್ಗಳ ಸಮಸ್ಯೆ ಇರುವುದಿಲ್ಲ ಎನ್ನುವ ಜಯತೀರ್ಥ ಅವರ ಚಿತ್ರಗಳಲ್ಲಿ ಜಾನಪದ, ದೇಸಿ ಸಂಸ್ಕೃತಿಯ ನೇಯ್ಗೆಯ ಬಗ್ಗೆ ಕೇಳಿದರೆ; ನಾನು ರಂಗಭೂಮಿಯಿಂದ ಬಂದವನು. ಜಾನಪದ ನನ್ನ ಅವಿಭಾಜ್ಯ ಅಂಗ. ಹಾಗಾಗಿ ದೇಸಿತನ ಹಾಗೂ ಜಾನಪದ ನಿರುದ್ದಿಶ್ಯವಾಗಿ ನನ್ನೆಲ್ಲ ಚಿತ್ರಗಳ ಭಾಗವಾಗುತ್ತದೆ ಎನ್ನುತ್ತಾರೆ. ಅವರ ʼಒಲವೇ ಮಂದಾರʼದಲ್ಲಿ ಅಸ್ಸಾಂನ ಬಿಹು ಸಂಸ್ಕೃತಿ ಹಾಗೂ ಅಸ್ಸಾಮಿ ಜಾನಪದದ ಸೊಗಡಿದೆ. ʼಬೆಲ್ ಬಾಟಮ್ʼನಲ್ಲಿ ನೀಲಗಾರರಿದ್ದಾರೆ. ʼಟೋನಿʼಯಲ್ಲಿ ಗರತಿಯ ಹಾಡಿದೆ. ʼಬನಾರಸ್ʼನಲ್ಲಿ ಉತ್ತರ ಪ್ರದೇಶದ ಕಾಶಿಯ ಜಾನಪದವಿದೆ. ʼಕೈವʼದಲ್ಲಿ ಕರಗವಿದೆ.
ಇದರಲ್ಲಿ ನಾನು ಕರಗದ ಕಥೆ ಹೇಳಲು ಚರ್ಮದ ಬೊಂಬೆಗಳನ್ನು ಬಳಸಿದ್ದೇನೆ. ನನಗಾಗಿ ಪದ್ಮಶ್ರೀ ವಿಜೇತ ಕಲಾವಿದ ಬೆಳಗಲ್ ವೀರಣ್ಣ ತೊಗಲು ಬೊಂಬೆಯನ್ನು ತಯಾರಿಸಿಕೊಟ್ಟರು. ಅವರಿಗೆ ನಾನು ಋಣಿ ಎನ್ನುತ್ತಾರೆ.
ಕೈವ ಮುಗಿಯಿತು. ಮುಂದೇನು? ಎಂದು ಕೇಳಿದರೆ; ಆದ್ದರಿಂದ.. ಎಂದು ತಲೆಕೆರೆದುಕೊಳ್ಳುತ್ತಾರೆ. ʼಆದ್ದರಿಂದʼ ಚಿತ್ರವನ್ನು ಐದು ಮಂದಿ ನಿರ್ದೇಶಕರು ಮಾಡಿದ್ದೇವೆ. ಒಬ್ಬರ ಕಥೆಯ ಪಾತ್ರ ಇನ್ನೊಬ್ಬರ ಕಥೆಯಲ್ಲಿ ಮುಂದುವರಿಯುತ್ತದೆ. ನಾನು, ಯೋಗರಾಜ ಭಟ್, ಶಶಾಂಕ್, ಕೆ.ಎಂ. ಚೈತನ್ಯ ಚಿತ್ರಗಳನ್ನು ನಿರ್ದೇಶಿಸಿದ್ದೇವೆ. ನಮ್ಮೆಲ್ಲರ ಕಥೆಗೆ ಪವನ್ ಕುಮಾರ್ ಅಂತ್ಯ ಹಾಡುತ್ತಾರೆ, ಎನ್ನುವ ಜಯತೀರ್ಥ, ʼಆದ್ದರಿಂದʼ..ವನ್ನು ಹಿಂಬಾಲಿಸುತ್ತಾರೆ