
ನಾಲ್ಕೇ ತಿಂಗಳಲ್ಲಿ 500 ಕೋಟಿ ಕಲೆಕ್ಷನ್ | ಮಲಯಾಳಂ ಚಿತ್ರರಂಗದ ಭರ್ಜರಿ ಆರಂಭ
ಮಲಯಾಳಂ ಚಿತ್ರರಂಗಕ್ಕೆ ಇದು ಬ್ಲಾಕ್ ಬಸ್ಟರ್ ವರ್ಷವಾಗಿದ್ದು, ವರ್ಷದ ಮೊದಲ ತ್ರೈಮಾಸಿಕದಲ್ಲೇ 500 ಕೋಟಿ ರೂ.ಗಿಂತಲೂ ಅಧಿಕ ಮೊತ್ತವನ್ನು ಈಗಾಗಲೇ ಚಿತ್ರರಂಗ ಬಾಚಿಕೊಂಡಿದೆ.
ಒಟಿಟಿ ಮೂಲಕ ಕನ್ನಡ, ತಮಿಳು, ತೆಲುಗು, ಹಿಂದಿ ಪ್ರೇಕ್ಷಕರನ್ನು ತಲುಪಿದ ಮಲಯಾಳಂ ಚಿತ್ರರಂಗ, ಇದೀಗ ಥಿಯೇಟರ್‌ಗಳ ಮೂಲಕ ಬ್ಯಾಕ್ ಟು ಬ್ಯಾಕ್ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ತೆರೆಗೆ ತರುತ್ತಿದೆ. 2024 ರಲ್ಲಿ ಮಲಯಾಳಂ ಚಿತ್ರರಂಗದ ಅದೃಷ್ಟವನ್ನು ಬದಲಿಸಿದ ಚಿತ್ರಗಳು ಇಲ್ಲಿವೆ:
ಆಡುಜೀವಿತಂ
ಪೃಥ್ವಿರಾಜ್ ಸುಕುಮಾರನ್ ಅವರ ಪ್ರೇಕ್ಷಕರ ಆತ್ಮವನ್ನು ಕಲಕುವ ಅಭಿನಯದ ಈ ಅದ್ಭುತ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಆಡುಜೀವಿತಂ ಸೌದಿ ಅರೇಬಿಯಾದ ಮರುಭೂಮಿಯ ಮಧ್ಯದಲ್ಲಿರುವ ಮೇಕೆ ಫಾರ್ಮ್‌ನಲ್ಲಿ ಗುಲಾಮರಂತೆ ಬದುಕುವ ನಜೀಬ್ ಎಂಬ ವ್ಯಕ್ತಿಯ ನೈಜ ಜೀವನದ ಕಥೆಯನ್ನು ಆಧರಿಸಿದೆ.
ʼಆಡುಜೀವಿತಂʼ ಹೆಸರಿನ ಬೆನ್ಯಾಮಿನ್ ಅವರ ಕಾದಂಬರಿಯನ್ನು ಆಧಾರಿಸಿ ಮಾಡಿದ ಈ ಸಿನಿಮಾವನ್ನು ನಿರ್ದೇಶಕ ಬ್ಲೆಸ್ಸಿ ಅದ್ಭುತ ಭಾವನಾತ್ಮಕ ಹೆಣಿಗೆಯ ಮೂಲಕ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
ನಜೀಬ್‌ನ ಸ್ನೇಹಿತನಾಗಿ ನಟಿಸಿರುವ ಗೋಕುಲ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಅಮಲಾ ಪೌಲ್ ಪ್ಲಾಷ್‌ಬ್ಯಾಕ್‌ನಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ರೋಮಾಂಚಕ ಸ್ಪರ್ಶ ನೀಡಿದ್ದಾರೆ. ಸಂಗೀತ ಮಾಂತ್ರಿಕ ಎಂದೇ ಪ್ರಸಿದ್ಧಿ ಪಡೆದಿರುವ ಎ ಆರ್ ರೆಹಮಾನ್ ಅವರ ಸಂಗೀತ ಪ್ರೇಕ್ಷಕರ ಹೃದಯವನ್ನೇ ತಟ್ಟುತ್ತದೆ.
ಸಿನಿಮಾ ಉದ್ಯಮದ ಹಣಕಾಸು ವಹಿವಾಟು ಬಲ್ಲವರ ಪ್ರಕಾರ ಈ ಚಿತ್ರ ಈವರೆಗೆ 115 ಕೋಟಿ ರೂಪಾಯಿ ಸಂಗ್ರಹಿಸಿದೆ.
ಮಂಜುಮಿಲ್ ಬಾಯ್ಸ್
ಎರ್ನಾಕುಲಂನಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿದ ʼಮಂಜುಮಿಲ್ ಬಾಯ್ಸ್ʼ ಸಿನಿಮಾ ಮೆಗಾ ಕಮರ್ಷಿಯಲ್ ಹಿಟ್ ಆಗಿ ಹೊರಹೊಮ್ಮಿದೆ. ಕೇವಲ ರೂ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಭಾರತದಲ್ಲಿ ₹102.18 ಕೋಟಿ ನಿವ್ವಳ ಲಾಭ ಗಳಿಸಿದೆ. ಒಟ್ಟಾರೆಯಾಗಿ ಇದು ವಿಶ್ವಾದ್ಯಂತ ಸುಮಾರು ₹ 230 ಕೋಟಿಗಳನ್ನು ಗಳಿಸಿದೆ. ಈ ಸಿನಿಮಾ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ದೊಡ್ಡ ಹಿಟ್ ಆಗಿ ಸಾಬೀತುಪಡಿಸಿವೆ.
ಚಿದಂಬರಂ ಅವರ ನಿರ್ದೇಶನದಲ್ಲಿ ಸೌಬಿನ್ ಶಾಹಿರ್, ಜೀನ್ ಪಾಲ್ ಲಾಲ್ ಜೂನಿಯರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ದೀಪಕ್ ಪರಂಬೋಲ್ ಮತ್ತು ಗಣಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಆಡುಜೀವಿತಂ' ಸೇರಿದಂತೆ ಬಿಗ್ ಬಜೆಟ್ ಮತ್ತು ಸ್ಟಾರ್ ನಟರ ತಾರಾಗಣದ ಸಿನಿಮಾಗಳ ಬಿಡುಗಡೆಯ ಹೊರತಾಗಿಯೂ, ಇದು ಜನರನ್ನು ಸೆಳೆಯುತ್ತಲೇ ಇದೆ.
2006 ರಲ್ಲಿ10 ಜನರ ಯುವಕರ ಗುಂಪೊಂದು ಕೊಡೈಕೆನಾಲ್ಗೆ ಪ್ರವಾಸಕ್ಕೆ ಹೋಗುತ್ತದೆ. ಈ ವೇಳೆ ಅವರ ಗುಂಪು ಕಮಲ್ ಹಾಸನ್ ಅವರ 1991 ರ ತಮಿಳು ಚಲನಚಿತ್ರ 'ಗುಣ' ಚಿತ್ರೀಕರಣಗೊಂಡ ಗುಣ ಗುಹೆಗಳಿಗೆ (ಡೆವಿಲ್ಸ್ ಕಿಚನ್) ಭೇಟಿ ನೀಡಲು ಹೋಗುತ್ತಾರೆ. ನಿಜವಾದ ಗುಹೆಯನ್ನು ಮುಚ್ಚಲಾಗಿದ್ದರೂ, ದ್ವಾರದಲ್ಲಿ ನಿಂತು ಗುಹೆಯ ಆಳ ನೋಡುವ ದುಃಸ್ಸಾಹಸಕ್ಕೆ ಮುಂದಾಗುತ್ತಾರೆ. ಈ ವೇಳೆ ಸುಬಾಷ್ (ಶ್ರೀನಾಥ್ ಭಾಸಿ) ಗುಹೆಯ ಆಳವಾದ ಹೊಂಡವೊಂದರಲ್ಲಿ ಬೀಳುತ್ತಾನೆ. ಬಿದ್ದ ಸ್ನೇಹಿತನನ್ನು ಉಳಿಸಲು ಒಂಬತ್ತು ಪುರುಷರ ಪ್ರಯತ್ನಗಳ ಮೇಲೆ ಸಿನಿಮಾ ಕೇಂದ್ರೀಕರಿಸುತ್ತದೆ. ಛಾಯಾಗ್ರಾಹಕ ಶೈಜು ಖಾಲಿದ್ ಕೆಲವು ಅದ್ಭುತ ದೃಶ್ಯಗಳನ್ನು ಒದಗಿಸಿದ್ದಾರೆ.
ಪ್ರೇಮಾಲು
10 ಕೋಟಿ ರೂಗಿಂತಲೂ ಕಡಿಮೆ ಬಜೆಟ್ನಲ್ಲಿ ಮೂಡಿಬಂದಿರುವ ಈ ಸಿನಿಮಾವು ರೊಮ್ಯಾಂಟಿಕ್ ಮತ್ತು ಕಾಮಿಡಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ₹ 135 ಕೋಟಿ ಗಳಿಸಿದೆ. ಫಹಾದ್ ಫಾಸಿಲ್, ದಿಲೀಶ್ ಪೋತನ್ ಮತ್ತು ಶ್ಯಾಮ್ ಪುಷ್ಕರನ್ ನಿರ್ಮಿಸಿರುವ ಇದು ಗಿರೀಶ್ ಎಡಿ ಅವರ ಮೂರನೇ ನಿರ್ದೇಶನದ ಸಿನಿಮಾವಾಗಿದೆ.
ನಸ್ಲೆನ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಪ್ರೇಮಲು' ಸಿನಿಮಾ ಮಲಯಾಳಂ ಸಿನಿಮಾವಾಗಿದ್ರೂ, ಕಥೆಯು ಹೈದರಬಾದ್ ಹಿನ್ನಲೆಯಲ್ಲಿ ನಡೆಯುತ್ತದೆ. ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.
ಈ ಚಿತ್ರವು ಆತ್ಮವಿಶ್ವಾಸದ ಕೊರತೆಯಿರುವ ಸಚಿನ್ (ನಾಸ್ಲೆನ್) ಮೇಲೆ ಕೇಂದ್ರೀಕರಿಸುತ್ತದೆ. ನಟ ಹೈಪರ್-ಫೋಕಸ್ಡ್ ಐಟಿ ವೃತ್ತಿಪರರಾದ ರೀನು (ಮಮಿತಾ) ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅವನು ಆಕೆಯ ಪ್ರೀತಿಯನ್ನು ಗಳಿಸಲು ಯಾವೆಲ್ಲ ರೀತಿಯಲ್ಲಿ ಸರ್ಕಸ್ ಮಾಡಬೇಕಾಗುತ್ತದೆ ಎಂಬುವುದು ಈ ಸಿನಿಮಾದ ಕಥಾಹಂದರವಾಗಿದೆ. ರೊಮ್ಯಾಂಟಿಗ್ ಹಾಗೂ ಕಾಮಿಡಿಯನ್ನು ಹೊಂದಿರುವ ಈ ಸಿನಿಮಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸುತ್ತದೆ.
ಭ್ರಮಯುಗ
ರಾಹುಲ್ ಸದಾಶಿವನ್ ನಿರ್ದೇಶಿಸಿದ ಈ ಚಿತ್ರವು ಅದರ ಪ್ರಮುಖ ನಟರು, ಮುಖ್ಯವಾಗಿ ಮಮ್ಮುಟ್ಟಿ ಅವರ ಅಭಿನಯದಿಂದ ಹೆಚ್ಚಾಗಿ ನಡೆಸಲ್ಪಟ್ಟಿದೆ.
ಈ ಚಿತ್ರದ ಕಥೆ ನಡೆಯೋದು 17ನೇ ಶತಮಾನದಲ್ಲಿ. ತೇವನ್ ಹಾಗೂ ಕೋರನ್ ಒಂದು ಕಾಡಿಗೆ ಬಂದಿರುತ್ತಾರೆ. ರಾತ್ರಿ ವೇಳೆ ಒಂದು ನದಿ ತೀರದಲ್ಲಿ ಉಳಿದುಕೊಳ್ಳುತ್ತಾರೆ. ಕೋರನ್ ಯಕ್ಷಿಣಿಗೆ ಬಲಿಯಾದರೆ ತೇವನ್ ತಪ್ಪಿಸಿಕೊಂಡು ಒಂದು ಪಾಳುಬಿದ್ದ ಮಹಲಿಗೆ ಎಂಟ್ರಿಕೊಡುತ್ತಾನೆ. ಮಮ್ಮುಟ್ಟಿ ಕುಂಜುಮೋನ್ ಪೊಟ್ಟಿ ಎಂಬ ಭಯಂಕರ ಮುದುಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಕುಂಜುಮೋನ್ ಪೊಟ್ಟಿ ಯುವ ಜಾನಪದ ಗಾಯಕ ತೇವನ್ (ಅರ್ಜುನ್ ಅಶೋಕನ್) ಅನ್ನು ತನ್ನ ಭವನದಲ್ಲಿ ಗುಲಾಮರನ್ನಾಗಿ ಮಾಡುತ್ತಾನೆ. ಅಷ್ಟಕ್ಕೂ ಆ ಮಹಲಿನಲ್ಲಿರುವ ಕೊಡುಮೋನ್ ಪೊಟ್ಟಿ (ಮಮ್ಮುಟ್ಟಿ) ಯಾರು, ತೇವನ್‌ನ ಗತಿ ನಂತರ ಏನಾಗುತ್ತದೆ ಎಂಬುದು ಸಿನಿಮಾದಲ್ಲಿದೆ.
ಕಲಿಯುಗ ಆದಮೇಲೆ ಬರೋದು ಭ್ರಮಯುಗ. ಇಲ್ಲಿ ದೇವರು ಇರುವುದಿಲ್ಲ. ನೀನು ಎಷ್ಟೇ ಕೂಗಿದರೂ ಆ ದೇವರಿಗೆ ನಿನ್ನ ಕೂಗು ಕೇಳಿಸುವುದಿಲ್ಲ’ ಎಂದು ಹೇಳುವ ಡೈಲಾಗ್ ಸಿನಿಮಾ ಟೈಟಲ್ನ ಸಮರ್ಥಿಸಿಕೊಳ್ಳುವಂತಿದೆ.
ಶೆಹನಾದ್ ಜಲಾಲ್ ಅವರ ಕ್ಯಾಮೆರಾ ಕೆಲಸವು ಶಫೀಕ್ ಮೊಹಮ್ಮದ್ ಅಲಿ ಅವರ ಸಂಕಲನದಿಂದ ಸಂಪೂರ್ಣವಾಗಿ ಪೂರಕವಾಗಿದೆ. ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತವೂ ಅದ್ಭುತವಾಗಿದೆ.
ಕಲರ್ಫುಲ್ ಸಿನಿಮಾಗಳ ಕಾಲದಲ್ಲೂ ಚಿತ್ರ ಸಂಪೂರ್ಣವಾಗಿ ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿ ಮೂಡಿ ಬಂದಿರೋದು ವಿಶೇಷ.