
ಜಾಲಿ ಎಲ್ಎಲ್.ಬಿ 3 ಟ್ರೇಲರ್ ಬಿಡುಗಡೆಯಾಗಿದೆ.
ಜಾಲಿ ಎಲ್ಎಲ್‌ಬಿ- 3 ಟ್ರೇಲರ್ ಬಿಡುಗಡೆ; ರಂಜಿಸಲು ಬರುತ್ತಿದೆ ವಕೀಲ್ ಜೋಡಿ
ಮೀರತ್‌ನಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಾತ್ರವರ್ಗ ಮತ್ತು ಸಿಬ್ಬಂದಿ ಮಾಧ್ಯಮ ಹಾಗೂ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
ಬಹುನಿರೀಕ್ಷಿತ ಜಾಲಿ ಎಲ್ಎಲ್‌ಬಿ- 3 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದರೊಂದಿಗೆ ಕೋರ್ಟ್ ರೂಂನ ಹಾಸ್ಯಭರಿತ ವೈಶಿಷ್ಟ್ಯವು ಮತ್ತೊಮ್ಮೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅವರೇ ಅಭಿನಯಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಮೀರತ್‌ನಲ್ಲಿ ಈಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದ ಕಲಾವಿದರು ಮಾಧ್ಯಮ ಹಾಗೂ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡ ಅಕ್ಷಯ್ ಕುಮಾರ್, “ಜಾಲಿ ಮಿಶ್ರಾ ಆಗಿ ಮರಳಿರುವುದು ನನಗೆ ವಿಶೇಷ. ಅರ್ಷದ್ ಅಭಿನಯಿಸಿರುವ ಮತ್ತೊಂದು ಜಾಲಿಯ ವಿರುದ್ಧ ಕೋರ್ಟ್‌ನಲ್ಲಿ ನಿಲ್ಲುವುದೇ ವಿಭಿನ್ನ ಅನುಭವ. ಟ್ರೇಲರ್ ಆ ಹುಚ್ಚುತನದ ಒಂದು ನೋಟ ಮಾತ್ರ, ನಿಜವಾದ ಮೋಜು ಸೆ. 19ರಿಂದ ಪ್ರಾರಂಭವಾಗಲಿದೆ ಎಂದರು.
ಅರ್ಷದ್ ವಾರ್ಸಿ ಮಾತನಾಡಿ, ಜಾಲಿ ತ್ಯಾಗಿ ನನಗೆ ಎಲ್ಲವನ್ನೂ ಕೊಟ್ಟ ಪಾತ್ರ. ಹಲವು ವರ್ಷಗಳ ಬಳಿಕ ಅವನ ಬಳಿಗೆ ಮರಳುವುದು ಹಳೆಯ ಸ್ನೇಹಿತನನ್ನು ಭೇಟಿಯಾದಂತೆ. ಆದರೆ ಈ ಬಾರಿ ಆ ಸ್ನೇಹಿತ ಅಕ್ಷಯ್‌ನ ಜಾಲಿ ಮಿಶ್ರಾ ಎದುರಾಳಿ! ವಾದಗಳು, ತಮಾಷೆಗಳು, ಹಾಸ್ಯ ಹಾಗೂ ಭಾವನೆಗಳಿಂದ ತುಂಬಿರುವ ಈ ಚಿತ್ರ ಪ್ರೇಕ್ಷಕರನ್ನು ಖಂಡಿತ ರಂಜಿಸುತ್ತದೆ ಎಂದು ಹೇಳಿದರು.
ಟ್ರೇಲರ್‌ನಲ್ಲಿ ಜಾಲಿ ಮಿಶ್ರಾ ಮತ್ತು ಜಾಲಿ ತ್ಯಾಗಿಗಳ ನಡುವೆ ತೀವ್ರ ಘರ್ಷಣೆ ತೋರಿಸಲಾಗಿದ್ದು, ಜಡ್ಜ್ ತ್ರಿಪಾಠಿ ಪಾತ್ರದಲ್ಲಿ ಸೌರಭ್ ಶುಕ್ಲಾ ಕಾಣಿಸಿಕೊಳ್ಳುತ್ತಿದ್ದಾರೆ. ಹುಮಾ ಖುರೇಷಿ, ಅಮೃತಾ ರಾವ್ ಮತ್ತು ಗಜರಾಜ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸುಭಾಷ್ ಕಪೂರ್ ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಅಜಿತ್ ಅಂಧಾರೆ ನಿರ್ಮಾಣ ಮಾಡಿದ್ದಾರೆ. ಜಾಲಿ ಎಲ್ಎಲ್.ಬಿ 3 ಸೆಪ್ಟೆಂಬರ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.