
ಹೆಸರಿನಿಂದ 'ವಿಜಯ್' ಸರ್‌ನೇಮ್ ಔಟ್! ತಾಯಿ ಸಂಗೀತಾಗೆ ಬೆಂಬಲ ಸೂಚಿಸಿದ ಜೇಸನ್ ಸಂಜಯ್ ಎಸ್
ವಿಜಯ್‌ಗೆ ಪುತ್ರನಿಂದಲೇ ಶಾಕ್: ತಂದೆಯ ಹೆಸರನ್ನೇ ಕೈಬಿಟ್ಟರಾ ಜೇಸನ್ ಸಂಜಯ್?
Actor Vijay| ತಮಿಳು ಸೂಪರ್‌ಸ್ಟಾರ್ ವಿಜಯ್ ಮತ್ತು ಪತ್ನಿ ಸಂಗೀತ ನಡುವಿನ ಕೌಟುಂಬಿಕ ಕಲಹ ಈಗ ಬೀದಿಗೆ ಬಂದಿದೆ. ತಂದೆಯ ಹೆಸರನ್ನು ಕೈಬಿಟ್ಟು, ತಾಯಿ ಹೆಸರಿನ ಇನಿಶಿಯಲ್ ಬಳಸುವ ಮೂಲಕ ಮಗ ಜೇಸನ್ ಸಂಜಯ್ ಸಂಚಲನ ಮೂಡಿಸಿದ್ದಾರೆ.
ತಮಿಳು ಚಿತ್ರರಂಗದ ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಅವರ ನಿರ್ದೇಶನದ ಪದಾರ್ಪಣೆಗಿಂತಲೂ ಹೆಚ್ಚಾಗಿ, ಆ ಕುಟುಂಬದಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳು ಸದ್ಯ ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿವೆ. ಸಾಮಾನ್ಯವಾಗಿ ಸ್ಟಾರ್ ಕಿಡ್ಸ್ ತಮ್ಮ ತಂದೆಯ ಹೆಸರನ್ನು ಬಳಸಿಕೊಂಡು ಚಿತ್ರರಂಗಕ್ಕೆ ಬರುವುದು ರೂಢಿ. ಆದರೆ ಜೇಸನ್ ಸಂಜಯ್ ತಮ್ಮ ಚೊಚ್ಚಲ ಚಿತ್ರ 'ಸಿಗ್ಮಾ' ಮೂಲಕ ವಿಭಿನ್ನ ಹಾದಿ ತುಳಿದಿದ್ದಾರೆ.
ಈ ಹಿಂದೆ ಜೇಸನ್ ಸಂಜಯ್ ವಿ. ಎಂದು ಗುರುತಿಸಿಕೊಳ್ಳುತ್ತಿದ್ದ ಅವರು, ಈಗ ತಮ್ಮ ಹೆಸರನ್ನು ಜೇಸನ್ ಸಂಜಯ್ ಎಸ್. ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಧಿಕೃತ ದಾಖಲೆಗಳು ಮತ್ತು ಸಹಿಯಲ್ಲೂ ಅವರು ಇದನ್ನೇ ಬಳಸುತ್ತಿದ್ದು, ಇಲ್ಲಿ 'ಎಸ್' ಎಂಬ ಅಕ್ಷರವು ಅವರ ತಾಯಿ ಸಂಗೀತ ಅವರ ಹೆಸರನ್ನು ಸೂಚಿಸುತ್ತದೆ ಎಂದು ಸಿನಿಮಾ ಮೂಲಗಳು ತಿಳಿಸಿವೆ. ವಿಜಯ್ ಮತ್ತು ಸಂಗೀತ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವುದೇ ಮಗನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದ್ದು, ಈಗಾಗಲೇ ಜೇಸನ್ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆ ವಿಜಯ್ ಅವರನ್ನು ಅನ್‌ಫಾಲೋ ಮಾಡಿರುವುದು ಈ ಸಂಶಯಕ್ಕೆ ಪುಷ್ಟಿ ನೀಡಿದೆ.
ನಟ ವಿಜಯ್ ಅವರಿಗೆ ಮತ್ತೊಬ್ಬ ನಟಿಯ ಜೊತೆ ಸಂಬಂಧವಿದೆ ಎಂದು ಆರೋಪಿಸಿ ಪತ್ನಿ ಸಂಗೀತ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ ಈ ವಿವಾದ ಬಹಿರಂಗವಾಯಿತ್ತು.
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಜೊತೆಗಿನ ಸಂಬಂಧವೇ ಇದಕ್ಕೆ ಕಾರಣ ಎಂಬ ವದಂತಿಗಳಿದ್ದರೂ, ಸಂಗೀತ ನ್ಯಾಯಾಲಯದಲ್ಲಿ ನಟಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಇತ್ತೀಚೆಗೆ ವಿಜಯ್ ಮತ್ತು ತ್ರಿಶಾ ಒಂದೇ ಬಣ್ಣದ ಉಡುಪಿನಲ್ಲಿ ಮದುವೆಯೊಂದರಲ್ಲಿ ಭಾಗವಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ವಿಜಯ್ ತಮ್ಮನ್ನು ಮತ್ತು ಮಕ್ಕಳನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಸಂಗೀತ ನ್ಯಾಯಾಲಯಕ್ಕೆ ತಿಳಿಸಿದ್ದು, ಸದ್ಯ ಮಕ್ಕಳಿಬ್ಬರೂ ತಾಯಿಯ ಜೊತೆಯೇ ವಾಸಿಸುತ್ತಿದ್ದಾರೆ.
ರಾಜಕೀಯ ಪ್ರವೇಶ ಘೋಷಿಸಿರುವ ವಿಜಯ್ ಅವರಿಗೆ ಈ ಕೌಟುಂಬಿಕ ಸಮಸ್ಯೆಗಳು ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಪತ್ನಿ ಮಾಡಿರುವ ಗಂಭೀರ ಆರೋಪಗಳು ಮತದಾರರ ಮೇಲೆ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ. ಆದರೆ ಮಹಿಳಾ ದಿನಾಚರಣೆಯ ಭಾಷಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜಯ್, ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವುದಾಗಿ ಮತ್ತು ಅಭಿಮಾನಿಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದ್ದರು. ವಿಜಯ್ ಪೋಷಕರು ಸಂಧಾನಕ್ಕೆ ಪ್ರಯತ್ನಿಸುತ್ತಿದ್ದರೂ ಸಂಗೀತ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ ಜೇಸನ್ ಸಂಜಯ್ ಅವರ ಸರಳತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ಪಡೆಯುತ್ತಿದೆ. ಇರೋಡ್‌ನ ಫ್ಯಾಕ್ಟರಿಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಮಾನ್ಯ ಕಾರ್ಮಿಕರ ಜೊತೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಸಂಜಯ್ ಅವರ ಫೋಟೋ ವೈರಲ್ ಆಗಿದೆ. ತಂದೆಯ ಪ್ರಸಿದ್ಧಿಗಿಂತ ಹೆಚ್ಚಾಗಿ ಸಾಮಾನ್ಯ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಗುಣ ಸಂಜಯ್‌ಗಿದೆ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಸಂದೀಪ್ ಕಿಶನ್ ನಾಯಕನಾಗಿ ನಟಿಸುತ್ತಿರುವ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿದ್ದು, ಟೀಸರ್ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.
ನಟ ವಿಜಯ್ ಮತ್ತು ಸಂಗೀತ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ ಈ ಹಿಂದೆ ವಿಜಯ್ ಅವರ 'ವೇಟ್ಟೈಕಾರನ್' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರೆ, ಪುತ್ರಿ ದಿವ್ಯಾ 'ತೇರಿ' ಚಿತ್ರದಲ್ಲಿ ನಟಿಸಿದ್ದರು.

