
ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಜೇಸನ್ ಸಂಜಯ್,
'ಕೆಜಿಎಫ್' ಸಿನಿಮಾಗೆ ತಮಿಳುನಾಡು ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಫಿದಾ
ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಜೇಸನ್ ಸಂಜಯ್, ಯಶ್ ಅಭಿನಯದ KGF ತಮ್ಮ ನೆಚ್ಚಿನ ಕಮರ್ಷಿಯಲ್ ಸಿನಿಮಾ ಎಂದು ಹೇಳಿ ಪ್ರಶಾಂತ್ ನೀಲ್ ಅವರ ನಿರ್ದೇಶನವನ್ನು ಶ್ಲಾಘಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ-ರಾಜಕಾರಣಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ನಿರ್ದೇಶನದ ಮೊದಲ ಸಿನಿಮಾ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದ್ದಾರೆ. ಇದೇ ವೇಳೆ ಚಿತ್ರದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ, ಯಶ್ ಅಭಿನಯದ 'ಕೆಜಿಎಫ್' ಚಿತ್ರವನ್ನು ತಮ್ಮ ನೆಚ್ಚಿನ ಕಮರ್ಷಿಯಲ್ ಸಿನಿಮಾ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಚಲನಚಿತ್ರ ನಿರ್ಮಾಣದ ಶಿಕ್ಷಣ ಪಡೆದಿರುವ ಜೇಸನ್ ಸಂಜಯ್, ಈ ಹಿಂದೆ ತಂದೆ ವಿಜಯ್ ಅವರ ಕೆಲವು ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ 'ಸಿಗ್ಮಾ' ಚಿತ್ರದ ಮೂಲಕ ನಿರ್ದೇಶಕರಾಗಿ ಹಾಗೂ ನಟನಾಗಿಯೂ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
'KGF' ಬಗ್ಗೆ ಜೇಸನ್ ಏನಂದ್ರು?
ಸಂದರ್ಶನದಲ್ಲಿ ಮಾತನಾಡಿದ ಜೇಸನ್, "ಕೆಜಿಎಫ್ ನನ್ನ ಅತ್ಯಂತ ನೆಚ್ಚಿನ ಕಮರ್ಷಿಯಲ್ ಸಿನಿಮಾ. ಇದು ಐತಿಹಾಸಿಕ ಹಿನ್ನೆಲೆಯೊಂದಿಗೆ ಹೆಣೆದ ಕಾಲ್ಪನಿಕ ಕಥೆಯಾಗಿದ್ದರೂ, ಪ್ರೇಕ್ಷಕರನ್ನು ಸಂಪೂರ್ಣವಾಗಿ ನಂಬಿಸುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ಮಾಸ್ ಅಂಶಗಳನ್ನು ಉಳಿಸಿಕೊಂಡೇ ಕಥೆಯನ್ನು ಹೇಳಿರುವ ವಿಧಾನ ಅದ್ಭುತವಾಗಿದೆ. ಚಿತ್ರದ ಒಟ್ಟಾರೆ ಟೋನ್ ನನಗೆ ತುಂಬಾ ಇಷ್ಟ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕಥೆ ಮತ್ತು ಜಾನರ್‌ಗೆ ಸಂಪೂರ್ಣವಾಗಿ ಬದ್ಧರಾಗಿರುವುದು ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಕಾಣುತ್ತದೆ," ಎಂದು ಹೇಳಿದ್ದಾರೆ.
KGF ಸೃಷ್ಟಿಸಿದ ಹೊಸ ದಾಖಲೆ
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ 'ಕೆಜಿಎಫ್: ಅಧ್ಯಾಯ 1' ಹಾಗೂ 'ಕೆಜಿಎಫ್: ಅಧ್ಯಾಯ 2' ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆದಿವೆ. ಯಶ್ ಅವರನ್ನು ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಆಗಿ ರೂಪಿಸಿದ ಈ ಫ್ರಾಂಚೈಸಿ, ಅದ್ದೂರಿ ಮೇಕಿಂಗ್, ಭವ್ಯ ದೃಶ್ಯ ವೈಭವ, ವಿಶ್ವ ನಿರ್ಮಾಣ ಮತ್ತು ಮಾಸ್ ಕಥನ ಶೈಲಿಯಿಂದ ದೇಶದಾದ್ಯಂತ ಅಪಾರ ಯಶಸ್ಸು ಗಳಿಸಿತ್ತು. ಅನೇಕ ನಿರ್ದೇಶಕರು ಹಾಗೂ ಚಿತ್ರರಂಗದ ತಜ್ಞರಿಗೂ ಈ ಚಿತ್ರಗಳು ಸ್ಫೂರ್ತಿಯಾಗಿವೆ.

