
ವಿಜಯ್ ಅಭಿನಯದ 'ಜನ ನಾಯಕನ್' ಸಿನಿಮಾ ಮೂರು ದಿನಗಳಲ್ಲಿ ವಿಶ್ವದಾದ್ಯಂತ 171.84 ಕೋಟಿ ರೂ. ಗಳಿಸಿದೆ.
'ಜನ ನಾಯಕನ್' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ; 200 ಕೋಟಿ ರೂ. ಕ್ಲಬ್‌ಗೆ ದಾಪುಗಾಲು
ವಿಜಯ್ ಅಭಿನಯದ 'ಜನ ನಾಯಕನ್' ಸಿನಿಮಾ ಮೂರು ದಿನಗಳಲ್ಲಿ ವಿಶ್ವದಾದ್ಯಂತ 171.84 ಕೋಟಿ ರೂ. ಗಳಿಸಿದ್ದು, ಭಾರತದಲ್ಲಿ 74.44 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ 200 ಕೋಟಿ ರೂ. ಕ್ಲಬ್‌ನತ್ತ ಮುನ್ನಡೆದಿದೆ.
ನಟ ವಿಜಯ್ ಅಭಿನಯದ 'ಜನ ನಾಯಕನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಹಲವು ತಿಂಗಳ ವಿಳಂಬ ಮತ್ತು ವಿವಾದಗಳ ಬಳಿಕ ಬಿಡುಗಡೆಯಾದ ಈ ಚಿತ್ರವು ಕೇವಲ ಮೂರು ದಿನಗಳಲ್ಲಿ ವಿಶ್ವದಾದ್ಯಂತ 171.84 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 200 ಕೋಟಿ ರೂ. ಕ್ಲಬ್‌ನತ್ತ ವೇಗವಾಗಿ ಮುನ್ನಡೆಯುತ್ತಿದೆ.
ಟ್ರೇಡ್ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ಮೊದಲ ದಿನ42.70 ಕೋಟಿ ರೂ. ನೆಟ್ ಗಳಿಸಿದ್ದ ಸಿನಿಮಾ, ಎರಡನೇ ದಿನ 21.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಮೂರನೇ ದಿನ ಭಾನುವಾರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ28.50 ಕೋಟಿ ರೂ.ನೆಟ್ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಮೂರು ದಿನಗಳ ಒಟ್ಟು ನೆಟ್ ಕಲೆಕ್ಷನ್ 74.44 ಕೋಟಿ ರೂ.ಗೆ ಹಾಗೂ ಗ್ರಾಸ್ ಕಲೆಕ್ಷನ್ 87.50 ಕೋಟಿ ರೂ.ಗೆ ಏರಿಕೆಯಾಗಿದೆ.
ಭಾನುವಾರ ಚಿತ್ರವು ತಮಿಳು ಆವೃತ್ತಿಯಲ್ಲಿ ಒಟ್ಟಾರೆ 61.04 ಶೇಕಡಾ ಆಸನ ಭರ್ತಿಯನ್ನು ದಾಖಲಿಸಿದೆ. ಬೆಳಗಿನ ಪ್ರದರ್ಶನಗಳಲ್ಲಿ 42.92 ಶೇಕಡಾ, ಮಧ್ಯಾಹ್ನ 59.31 ಶೇಕಡಾ, ಸಂಜೆ 67 ಶೇಕಡಾ ಹಾಗೂ ರಾತ್ರಿ ಪ್ರದರ್ಶನಗಳಲ್ಲಿ 74.92 ಶೇಕಡಾ ಆಸನ ಭರ್ತಿಯಾಗಿದ್ದು, ದಿನವಿಡೀ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ.
ಪ್ರಮುಖ ನಗರಗಳಲ್ಲಿ ಚೆನ್ನೈ ಅತ್ಯಧಿಕ ಪ್ರತಿಕ್ರಿಯೆ ನೀಡಿದ್ದು, 1,046 ಪ್ರದರ್ಶನಗಳಲ್ಲಿ 86.8 ಶೇಕಡಾ ಆಸನ ಭರ್ತಿಯಾಗಿದೆ. ಬೆಂಗಳೂರಿನಲ್ಲಿ 707 ಪ್ರದರ್ಶನಗಳಲ್ಲಿ 48.5 ಶೇಕಡಾ ಆಸನ ಭರ್ತಿಯಾಗಿದೆ.
ಚಿತ್ರದ ಪ್ರತಿಕ್ರಿಯೆ ಕುರಿತು ಮಾತನಾಡಿದ ನಿರ್ದೇಶಕ ಎಚ್. ವಿನೋತ್, ವಿಜಯ್ ಅವರ ಸಿನಿಮಾ ಬಿಡುಗಡೆಯಾದಾಗ ಆರಂಭದಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಆದರೆ ಕೆಲವು ತಿಂಗಳ ಬಳಿಕ ಅದೇ ಸಿನಿಮಾ ದೊಡ್ಡ ಯಶಸ್ಸು ಗಳಿಸುತ್ತದೆ ಎಂದು ಹೇಳಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ 'ಜನ ನಾಯಕನ್' ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಮಮಿತಾ ಬೈಜು, ನಾಸರ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಈಗಾಗಲೇ ವಿಶ್ವದಾದ್ಯಂತ 171.84 ಕೋಟಿ ರೂ.ಗಳಿಸಿದ್ದು, ಶೀಘ್ರದಲ್ಲೇ 200 ಕೋಟಿ ರೂ.ಗಡಿ ದಾಟುವ ನಿರೀಕ್ಷೆ ಮೂಡಿಸಿದೆ.

