
ಇಂದ್ರಜಿತ್ ಲಂಕೇಶ್ ಹುಟ್ಟುಹಬ್ಬದಂದು ‘ಜೈ ಹಿಂದ್, ಜೈ ಸಿಂಧ್’ ಸಿನಿಮಾ ಘೋಷಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಇಂದ್ರಜಿತ್ ಲಂಕೇಶ್: ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ
‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಕೇವಲ ಪ್ರೇಮಕಥೆಗೆ ಸೀಮಿತವಾಗದೆ, ಮನುಷ್ಯನ ಬೇರುಗಳು, ಕುಟುಂಬ ಮತ್ತು ‘ಮನೆ’ ಎಂಬ ಭಾವನೆಯ ಸುತ್ತ ಸಾಗುವ ಕಥೆಯನ್ನು ಹೊಂದಿದೆ.
ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
'ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ' ಎಂಬ ಶೀರ್ಷಿಕೆಯಡಿ ತಮ್ಮ ಹೊಸ ಬಿಗ್ ಬಜೆಟ್ ಸಿನಿಮಾವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಪ್ರೀತಿ, ಭಾವನಾತ್ಮಕ ಬಾಂಧವ್ಯ, ಕೌಟುಂಬಿಕ ಮೌಲ್ಯಗಳು ಹಾಗೂ ಹುಟ್ಟಿದ ಮಣ್ಣಿನೊಂದಿಗಿನ ಅವಿನಾಭಾವ ನಂಟಿನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸ್ಯಾಮಿ ನಾನ್ವಾನಿ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಸಿದ್ಧವಾಗುತ್ತಿದೆ.
ಈ ಸಿನೆಮಾದ ಮತ್ತೊಂದು ವಿಶೇಷತೆಯೆಂದರೆ ಭಾರತೀಯ ಚಿತ್ರರಂಗದ ಹೆಸರಾಂತ ದಿಗ್ಗಜ ಕಲಾವಿದರ ಬಳಗವೇ ಇಲ್ಲಿದೆ. ಹಿರಿಯ ನಟರಾದ ಮಹೇಶ್ ಮಂಜ್ರೇಕರ್, ಜಯಪ್ರದಾ, ಛಾಯಾ ಕದಂ, ರಾಹುಲ್ ದೇವ್, ವಿಕ್ರಮ್ ಕೊಚ್ಚರ್ ಹಾಗೂ ಜರೀನಾ ವಹಾಬ್ ಮುಖ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಇವರೊಂದಿಗೆ ಯುವ ಪ್ರತಿಭೆಗಳಾದ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ಪ್ರಮುಖ ಭೂಮಿಕೆಯಲ್ಲಿ ತೆರೆಹಂಚಿಕೊಳ್ಳುತ್ತಿದ್ದಾರೆ.
ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಇಂದ್ರಜಿತ್ ಲಂಕೇಶ್, ಈ ಚಿತ್ರದ ಮೂಲಕ ಅಕೈಶಾ ವಾಟ್ಸ್ ಅವರನ್ನು ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕರೆತರುತ್ತಿದ್ದಾರೆ. ಹೊಸ ನಟ-ನಟಿಯರಲ್ಲಿರುವ ಸಹಜತೆ ಮತ್ತು ಮುಗ್ಧತೆ - ಪಾತ್ರಗಳನ್ನು ಮತ್ತಷ್ಟು ವಿಭಿನ್ನವಾಗಿ ಮೂಡಿಸಲು ನೆರವಾಗುತ್ತದೆ ಎಂಬುದು ನಿರ್ದೇಶಕರ ನಂಬಿಕೆ. ಈ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಪರಿಚಯಿಸಿದ್ದ ದಿನಗಳನ್ನು ಸ್ಮರಿಸಿದ ಅವರು, ಹೊಸ ಪ್ರತಿಭೆಗಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವುದು ತಮ್ಮ ಚಿತ್ರಪಯಣದ ಹೆಮ್ಮೆಯ ಭಾಗ ಎಂದಿದ್ದಾರೆ.
ಚಿತ್ರದ ಪ್ರಚಾರ ಕಾರ್ಯಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, 'ರುಬಾರು' ಎಂಬ ಮೊದಲ ಗೀತೆ ಬಿಡುಗಡೆಯಾಗಿ ಸಂಗೀತಪ್ರಿಯರ ಮನಗೆದ್ದಿದೆ. ಜೆ. ಅನೂಪ್ ಸೀಳಿನ್ ಅವರ ಜಾದೂಯಿ ಸಂಗೀತ, ಕುಮಾರ್ ಅವರ ಅರ್ಥಪೂರ್ಣ ಸಾಹಿತ್ಯ ಹಾಗೂ ಎಂಡಿ ಇರ್ಫಾನ್ ಮತ್ತು ಶಿವಾನಿ ಶರ್ಮಾ ಅವರ ಮಧುರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಗೌರವ್ ಮತ್ತು ಅಕೈಶಾ ಅವರ ಪ್ರೇಮಕಥೆಯ ಸುಂದರ ನೋಟವನ್ನು ಒದಗಿಸುತ್ತದೆ.
ಕೇವಲ ಪ್ರಣಯ ಕಥೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ಜೀವನದ ಮೂಲ ಬೇರುಗಳು ಮತ್ತು 'ಮನೆ' ಎಂಬ ಕಲ್ಪನೆಯ ಸುತ್ತ ಸಾಗುವ ಈ ಭಾವನಾತ್ಮಕ ಪಯಣವು ಅಕ್ಟೋಬರ್ 2026ರ ವೇಳೆಗೆ ವಿಶ್ವದಾದ್ಯಂತ ದೊಡ್ಡ ಪರದೆಯ ಮೇಲೆ ಸದ್ದು ಮಾಡಲು ಸಜ್ಜಾಗುತ್ತಿದೆ.
