ಸುದೀಪ್ ಕಿಚ್ಚನಾದರೆ, ಅಕ್ಕನ ಮಗ ಸಂಚಿ ಈಗ ‘ಮ್ಯಾಂಗೋ ಪಚ್ಚ’
x
ಮ್ಯಾಂಗೋ ಪಚ್ಚ

ಸುದೀಪ್ ಕಿಚ್ಚನಾದರೆ, ಅಕ್ಕನ ಮಗ ಸಂಚಿ ಈಗ ‘ಮ್ಯಾಂಗೋ ಪಚ್ಚ’

ಬುಧವಾರ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ.


‘ಹುಚ್ಚ’ ಚಿತ್ರದಲ್ಲಿ ಸುದೀಪ್‍, ಕಿಚ್ಚ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು. ಆ ಪಾತ್ರ ಜನಪ್ರಿಯವಾಗಿ ಕಿಚ್ಚ ಎಂಬ ಹೆಸರು ಸುದೀಪ್‍‌ ಹೆಸರಿನೊಂದಿಗೆ ಅಂಟಿಕೊಂಡಿತು. ಇದೀಗ ಸುದೀಪ್‍ ಅವರ ಅಕ್ಕನ ಮಗ ಸಂಚಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ʼಪಚ್ಚʼ ಎಂಬ ಹೆಸರಿನಿಂದ ಜನಪ್ರಿಯವಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಸುದೀಪ್‍ ಅವರ ಅಕ್ಕನ ಮಗ ಸಂಚಿತ್ ಸಂಜೀವ್‍ ಅಲಿಯಾಸ್‍ ಸಂಚಿ ಅಭಿನಯದಲ್ಲಿ ಇತ್ತೀಚೆಗಷ್ಟೇ ಹೊಸ ಚಿತ್ರ ಪ್ರಾರಂಭವಾಗಿತ್ತು. ಈ ಚಿತ್ರದ ಮುಹೂರ್ತಕ್ಕೆ ಸುದೀಪ್‍ ಕುಟುಂಬದ ಸದಸ್ಯರಲ್ಲದೆ, ಅಶ್ವಿನಿ ಪುನೀತ್‍ ರಾಜಕುಮಾರ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು.

ಆದರೆ, ಚಿತ್ರದ ಮುಹೂರ್ತವಾದರೂ ಚಿತ್ರದ ಹೆಸರು ಘೋಷಣೆಯಾಗಿರಲಿಲ್ಲ. ಫೆಬ್ರವರಿ 5ರಂದು ಸಂಚಿ ಹುಟ್ಟುಹಬ್ಬವಿದ್ದು, ಈ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಣೆ ಮಾಡುವುದಾಗಿ ಚಿತ್ರತಂಡಕ್ಕೆ ಹೇಳಿಕೊಂಡಿತ್ತು. ಅದರಂತೆ, ಬುಧವಾರ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂಬ ಹೆಸರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್‌ ಸಹ ಬಿಡುಗಡೆ ಮಾಡಲಾಗಿದೆ.

ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್‍ಗೆ ಎಂಟ್ರಿ ಕೊಡುವ ಫಾರಿನ್ ಲೇಡಿಗೆ, ಡಿವಿಡಿ ಅಂಗಡಿ ಮಾಲೀಕನ ಬಗ್ಗೆ ಕಥೆ ಹೇಳುವ ಮೂಲಕ ಪ್ರೋಮೋ ಪ್ರಾರಂಭವಾಗುತ್ತದೆ. ಖಾಲಿ ಇರುವ ಟೇಬಲ್ ಯಾರದ್ದು? ಎಂದು ಕೇಳುವ ಫಾರಿನ್ ಲೇಡಿಗೆ ‘ಮ್ಯಾಂಗೋ ಪಚ್ಚ’ನನ್ನು ಪರಿಚಯಿಸಲಾಗುತ್ತದೆ. ಸಂಚಿಗೆ ನಾಯಕಿಯಾಗಿ ‘ಪೆಪೆ’ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ.

‘ಮ್ಯಾಂಗೋ ಪಚ್ಚ’ ಚಿತ್ರವನ್ನು ಸುದೀಪ್‍ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಮತ್ತು KRG Studios ಜೊತೆಯಾಗಿ ನಿರ್ಮಿಸಿದರೆ, ಮೈಸೂರಿನ ವಿವೇಕ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಮೈಸೂರು ಮೂಲದ ಕಥೆಯಾಗಿದ್ದು, 2001ರಿಂದ 2011ರವರೆಗೂ ನಡೆಯುವ ಘಟನಾವಳಿಗಳು ಈ ಚಿತ್ರದಲ್ಲಿ ಇರುತ್ತದಂತೆ.

ಈ ಚಿತ್ರದಲ್ಲಿ ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಾಹಣವಿದೆ.

Read More
Next Story