Golden Star Ganesh: ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಗೋಲ್ಡನ್  ಸ್ಟಾರ್ ಗಣೇಶ್​
x

Golden Star Ganesh: ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಗೋಲ್ಡನ್ ಸ್ಟಾರ್ ಗಣೇಶ್​

ʻಪಿನಾಕʼ ಹಾಗೂ ʻಯುವರ್ ಸಿನ್ಸಿಯರ್ಲಿ ರಾಮ್ʼ ಚಿತ್ರಗಳ ಚಿತ್ರೀಕರಣದಲ್ಲಿ ಗಣೇಶ್ ಅವರು ಪಾಲ್ಗೊಂಡಿರುವುದರಿಂದ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಳೆ, ಜುಲೈ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.

ಪ್ರತಿ ವರ್ಷವೂ ಗಣೇಶ್ ತಮ್ಮ ಮನೆಯ ಬಳಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರು ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ 'ಪಿನಾಕ' ಮತ್ತು 'ಯುವರ್ ಸಿನ್ಸಿಯರ್ಲಿ ರಾಮ್' ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿರುವುದರಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಗಣೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ತಮ್ಮ ನಾಯಕನ ಚಿತ್ರಗಳು ಯಶಸ್ವಿಯಾಗಬೇಕು ಮತ್ತು ಅವರನ್ನು ನೆಚ್ಚಿನ ಪಾತ್ರಗಳಲ್ಲಿ ನೋಡಬೇಕು ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಅಭಿಮಾನಿಗಳಿಗೆ ಬೇಕಾದದ್ದನ್ನು ನೀಡಲು ಕಲಾವಿದರು ಸಾಕಷ್ಟು ಶ್ರಮಪಡುತ್ತಾರೆ. ತಾವು ಅಂದುಕೊಂಡಂತೆ ಸಿನಿಮಾ ಬಂದು ಅಭಿಮಾನಿಗಳಿಗೆ ಅದು ಮೆಚ್ಚುಗೆಯಾಗಿ, ಅವರು ಚಿತ್ರಮಂದಿರಗಳಿಗೆ ಬಂದರೆ ಅದಕ್ಕಿಂತ ಖುಷಿ ಕಲಾವಿದರಿಗೆ ಮತ್ತೊಂದಿಲ್ಲ.

ಆದರೆ, ಈ ಬಾರಿಯ ಹುಟ್ಟುಹಬ್ಬಕ್ಕೆ ಗಣೇಶ್ ಅವರು ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕ ಮತ್ತು ಪ್ರಸ್ತುತ ಶಿಲ್ಪ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಸೆರೆಹಿಡಿದಿರುವ ಗಣೇಶ್ ಅವರ ಆಕರ್ಷಕ ಭಾವಚಿತ್ರಗಳನ್ನು ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರಮಂದಿರಗಳಿಗೆ ಜನರು ಬಾರದ ಪರಿಸ್ಥಿತಿಯ ನಡುವೆಯೂ ಕಳೆದ ವರ್ಷ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಈ ಚಿತ್ರದ ಮೂಲಕ ಮತ್ತೆ ಕುಟುಂಬ ಸಮೇತ ಜನರು ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ಈಗ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಿನಾಕ' ಮತ್ತು 'ಯುವರ್ ಸಿನ್ಸಿಯರ್ಲಿ ರಾಮ್' ಸೇರಿದಂತೆ ಇತರೆ ಚಿತ್ರಗಳ ಮೇಲೂ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Read More
Next Story