
ಪತಿಯ ನೆನಪಿನಲ್ಲಿ ಹೇಮಾಮಾಲಿನಿ ಭಾವುಕ ಪತ್ರ; 'ನನ್ನ ಪಾಲಿನ ಎಲ್ಲವೂ' ಎಂದ ಡ್ರೀಮ್ ಗರ್ಲ್
ವರ್ಷಗಳ ಕಾಲ ಬಾಳಪಯಣದಲ್ಲಿ ಅನೇಕ ವಿಶೇಷ ಕ್ಷಣಗಳನ್ನು ಮೆಲುಕು ಹಾಕಲು ನೂರಾರು ನೆನಪುಗಳು ಮಾತ್ರ ಉಳಿದಿವೆ ಎಂದು ಹೇಮಾ ಮಾಲಿನಿ ಭಾವುಕ ಪತ್ರ ಬರೆದಿದ್ದಾರೆ.
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನದ ನಂತರ ಅವರ ಪತ್ನಿ, ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ 'X' ಖಾತೆಯಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.
ನ.24 ರಂದು 89ನೇ ವಯಸ್ಸಿನಲ್ಲಿ ತಮ್ಮ ನಿವಾಸದಲ್ಲಿ ನಿಧನರಾದ ಧರ್ಮೇಂದ್ರ ಅವರ ಕುರಿತು ಮೂರು ದಿನಗಳ ನಂತರ ಹೇಮಾಮಾಲಿನಿ ಈ ಪತ್ರ ಬರೆದಿದ್ದಾರೆ. ಧರ್ಮೇಂದ್ರ ಮತ್ತು ತಮ್ಮ ಹೆಣ್ಣುಮಕ್ಕಳಾದ ಇಶಾ ಮತ್ತು ಅಹಾನಾ ಅವರೊಂದಿಗಿನ ಅನೇಕ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಹೇಮಾಮಾಲಿನಿ ಅವರು ಧರ್ಮೇಂದ್ರ ಅವರನ್ನು ʻನನ್ನ ಪಾಲಿನ ಎಲ್ಲವೂʼ ಎಂದು ಬಣ್ಣಿಸಿದ್ದು, ಧರಂ ಅವರು ನನಗೆ ಹಲವು ರೂಪದಲ್ಲಿದ್ದರು. ಪ್ರೀತಿಯ ಗಂಡ, ನಮ್ಮ ಇಬ್ಬರು ಹೆಣ್ಣುಮಕ್ಕಳಾದ ಇಶಾ ಮತ್ತು ಅಹಾನಾಳ ಪ್ರೀತಿಯ ತಂದೆ, ಸ್ನೇಹಿತ, ಮಾರ್ಗದರ್ಶಕ, ಕವಿ, ಯಾವುದೇ ಸಂದರ್ಭದಲ್ಲೂ ನನ್ನ 'ನೆರವಿಗೆ ಬರುವ ವ್ಯಕ್ತಿ'. ನಿಜವಾಗಿ ಅವರು ನನಗೆ ಎಲ್ಲವೂ ಆಗಿದ್ದರು. ಒಳಿತು-ಕೆಡಕುಗಳ ಸಂದರ್ಭದಲ್ಲಿ ಸದಾ ನನ್ನೊಂದಿಗಿದ್ದರು ಎಂದು ಬರೆದಿದ್ದಾರೆ.
ಧರಂ ಅವರ ಸರಳ ಮತ್ತು ಸ್ನೇಹಪರ ಸ್ವಭಾವದಿಂದಾಗಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು ಎಂದು ಹೇಮಾ ಮಾಲಿನಿ ಹೇಳಿಕೊಂಡಿದ್ದಾರೆ.
ಅದ್ವಿತೀಯ ಪ್ರತಿಭೆ
ಸಾರ್ವಜನಿಕ ವ್ಯಕ್ತಿಯಾಗಿ ಅವರ ಪ್ರತಿಭೆ, ಜನಪ್ರಿಯತೆಯ ಹೊರತಾಗಿಯೂ ಅವರ ವಿನಮ್ರತೆ ಮತ್ತು ಅವರ ಆಕರ್ಷಣೆಯು ಅವರನ್ನು ಎಲ್ಲಾ ದಿಗ್ಗಜರಲ್ಲಿ ಒಬ್ಬ ಅದ್ವಿತೀಯ ವ್ಯಕ್ತಿಯನ್ನಾಗಿ ಗುರುತಿಸುವಂತೆ ಮಾಡಿತ್ತು. ಚಲನಚಿತ್ರೋದ್ಯಮದಲ್ಲಿ ಅವರ ಶಾಶ್ವತ ಖ್ಯಾತಿ ಮತ್ತು ಸಾಧನೆಗಳು ಎಂದೆಂದಿಗೂ ಉಳಿಯುತ್ತವೆ ಎಂದು ಅವರು ಬರೆದಿದ್ದಾರೆ.
ತಮ್ಮ ಪತ್ರವನ್ನು ಕೊನೆಗೊಳಿಸುತ್ತಾ ಹೇಮಾ ಮಾಲಿನಿ, ತಮ್ಮ ʻವೈಯಕ್ತಿಕ ನಷ್ಟʼವನ್ನು ವಿವರಿಸಿದ್ದಾರೆ. ನನ್ನ ವೈಯಕ್ತಿಕ ನಷ್ಟ ಹೇಳತೀರದಾಗಿದೆ. ಶೂನ್ಯತೆಯು ನನ್ನ ಜೀವನದುದ್ದಕ್ಕೂ ಇರಲಿದೆ. ವರ್ಷಗಳ ಕಾಲ ಜೊತೆಯಾಗಿದ್ದ ಅವಧಿಯಲ್ಲಿನ ಅನೇಕ ವಿಶೇಷ ಕ್ಷಣಗಳನ್ನು ಮೆಲುಕು ಹಾಕಲು ನೆನಪುಗಳು ಮಾತ್ರ ಉಳಿದಿವೆ ಎಂದು ಬರೆದಿದ್ದಾರೆ.
ಕುಟುಂಬ ಮತ್ತು ವೃತ್ತಿಜೀವನ
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ 1980 ರಲ್ಲಿ ವಿವಾಹವಾದರು. ಅವರಿಗೆ ಇಶಾ ಮತ್ತು ಅಹಾನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಧರ್ಮೇಂದ್ರ ಅವರು ಮೊದಲೇ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದು, ಅವರಿಗೆ ಸನ್ನಿ, ಅಜೀತಾ, ವಿಜಯತಾ ಮತ್ತು ಬಾಬಿ ಎಂಬ ನಾಲ್ವರು ಮಕ್ಕಳಿದ್ದರು. ಮದುವೆಯ ನಂತರವೂ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರೂ ಅವರ ಸಂಬಂಧ ಮುಂದುವರಿದಿತ್ತು.
'ಶರಾಫತ್', 'ತುಮ್ ಹಸೀನ್ ಮೈನ್ ಜವಾನ್', 'ನಯಾ ಜಮಾನಾ', 'ಸೀತಾ ಔರ್ ಗೀತಾ', 'ರಾಜಾ ಜಾನಿ', 'ಜುಗ್ನು', 'ಪತ್ಥರ್ ಔರ್ ಪಾಯಲ್', 'ಪ್ರತಿಜ್ಞಾ', 'ಶೋಲೆ' ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.

