ʻEmergencyʼ Dispute| ಸೆ.25 ರೊಳಗೆ ನಿರ್ಧಾರ ತೆಗೆದುಕೊಳ್ಳಲು ಸೆನ್ಸಾರ್‌ ಮಂಡಳಿಗೆ ಸೂಚನೆ
x

ʻEmergencyʼ Dispute| ಸೆ.25 ರೊಳಗೆ ನಿರ್ಧಾರ ತೆಗೆದುಕೊಳ್ಳಲು ಸೆನ್ಸಾರ್‌ ಮಂಡಳಿಗೆ ಸೂಚನೆ


ಮುಂಬೈ: ಸೃಜನಾತ್ಮಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಆಗುವುದಿಲ್ಲ.ಸೆನ್ಸಾರ್ ಮಂಡಳಿಯು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆತಂಕದಿಂದ ಚಲನಚಿತ್ರವೊಂದರ ಪ್ರಮಾಣೀಕರಣವನ್ನು ನಿರಾಕರಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.

ಕಂಗನಾ ರನೌತ್ ಅಭಿನಯದ 'ಎಮರ್ಜೆನ್ಸಿ' ಚಿತ್ರಕ್ಕೆ ಪ್ರಮಾಣಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 25 ರೊಳಗೆ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕೆಂದು ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ ಆದೇಶ ನೀಡಿದೆ.

ʻದೇಶದ ಜನರು ಸಿನಿಮಾದಲ್ಲಿ ತೋರಿಸಿದ್ದನ್ನೆಲ್ಲ ನಂಬುವಷ್ಟು ಮುಗ್ಧರು ಎಂದು ಸಿಬಿಎಫ್‌ಸಿ ಭಾವಿಸುತ್ತದೆಯೇ?ʼ ಎಂದು ಪೀಠ ಪ್ರಶ್ನಿಸಿದೆ.

ʻರಾಜಕೀಯ ಕಾರಣಗಳಿಂದಾಗಿ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆʼ ಎಂಬ ಅರ್ಜಿದಾರರ ಹೇಳಿಕೆಗೆ ಪ್ರತಿಕ್ರಿಯಿಸಿ,ʻಚಿತ್ರದ ಸಹ ನಿರ್ಮಾಪಕರಾದ ರನೌತ್ ಬಿಜೆಪಿ ಹಾಲಿ ಸಂಸದರಾಗಿದ್ದು, ಆಡಳಿತ ಪಕ್ಷ ತನ್ನದೇ ಸಂಸದರ ವಿರುದ್ಧ ವರ್ತಿಸುತ್ತಿದೆಯೇ?ʼ ಎಂದು ಪ್ರಶ್ನಿಸಿತು.

ʻನೀವು (ಸಿಬಿಎಫ್‌ಸಿ) ಒಂದಲ್ಲ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು. ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದು ಹೇಳುವ ಧೈರ್ಯ ಇರಬೇಕು. ಬೇಲಿ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲʼ ಎಂದು ಹೇಳಿತು.

ನ್ಯಾಯಾಲಯ ಝೀ ಎಂಟರ್‌ಟೇನ್ಮೆಂಟ್‌ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ಸಿಬಿಎಫ್‌ಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್, ಸಿಬಿಎಫ್‌ಸಿ ಅಧ್ಯಕ್ಷರು ಚಲನಚಿತ್ರವನ್ನು ಪರಿಷ್ಕರಣೆ ಸಮಿತಿಗೆ ಕಳಿಸಿದ್ದಾರೆ ಎಂದು ತಿಳಿಸಿದರು.

ಝೀ ಎಂಟರ್‌ಟೈನ್‌ಮೆಂಟ್ ಪರ ವಕೀಲ ವೆಂಕಟೇಶ್ ಧೋಂಡ್, ಅಕ್ಟೋಬರ್‌ನಲ್ಲಿ ಹರ್ಯಾಣ ಚುನಾವಣೆ ನಡೆಯಲಿದ್ದು, ಅದಕ್ಕೆ ಮೊದಲು ಚಿತ್ರ ಬಿಡುಗಡೆಯಾಗದಂತೆ ತಡೆಯಲಾಗುತ್ತಿದೆ ಎಂದು ಹೇಳಿದರು.

ʻಜನ ಏಕೆ ಬಹಳ ಸೂಕ್ಷ್ಮವಾಗಿದ್ದಾರೆ ಎಂದು ಗೊತ್ತಾಗುತ್ತಿಲ್ಲ.ನನ್ನ ಸಮುದಾಯವನ್ನು ಚಲನಚಿತ್ರಗಳಲ್ಲಿ ಗೇಲಿ ಮಾಡಲಾಗುತ್ತದೆ. ನಾವು ಏನನ್ನೂ ಹೇಳುವುದಿಲ್ಲ. ನಗುತ್ತೇವೆ ಮತ್ತು ಮುಂದೆ ಹೋಗುತ್ತೇವೆ,ʼ ಎಂದು ನ್ಯಾಯಮೂರ್ತಿ ಕೊಲಬಾವಾಲಾ ಹಗುರವಾದ ಧಾಟಿಯಲ್ಲಿ ಹೇಳಿದರು.

ಅಭಿನವ್ ಚಂದ್ರಚೂಡ್ ಎರಡು ವಾರಗಳ ಕಾಲಾವಕಾಶ ಕೋರಿದರು. ಆದರೆ, ಸೆಪ್ಟೆಂಬರ್ 25 ರೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.

Read More
Next Story