ಹಳ್ಳಿ ಹುಡುಗ, ಹಾಡುಗಾರ ಹನುಮಂತ ಲಮಾಣಿ ಬಿಗ್ ಬಾಸ್
ಕಿಚ್ಚ ಸುದೀಪ್ ಅವರು ಕೊನೆಯಹಂತಕ್ಕೆ ಬಂದ ಬಿಗ್‌ಬಾಸ್ ಸ್ಪರ್ಧಿಗಳಾದ ಹನುಮಂತ ಮತ್ತು ತ್ರಿವಿಕ್ರಮ್ ಅವರ ನಡುವೆ ನಿಂತು, ಹನುಮಂತ ಕೈಯನ್ನು ಮೇಲೆತ್ತುವ ಮೂಲಕ ಜಯಶೀಲ ಸ್ಪರ್ಧಿಯ ಹೆಸರನ್ನು ಘೋಷಿಸಿದರು.
ಖಾಸಗಿ ವಾಹಿನಿಯಲ್ಲಿ ಭಾನುವಾರ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರಾಂಡ್ ಫಿನಾಲೆಯಲ್ಲಿ ವಿಜೇತರಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಳ್ಳಿ ಹುಡುಗನೆಂದೇ ಪ್ರೀತಿ ಪಾತ್ರರಾದ ಹನುಮಂತ ಲಮಾಣಿ ಆಯ್ಕೆಯಾಗಿದ್ದಾರೆ.
ಕಿಚ್ಚ ಸುದೀಪ್ ಅವರು ಕೊನೆಯಹಂತಕ್ಕೆ ಬಂದ ಬಿಗ್‌ಬಾಸ್ ಸ್ಪರ್ಧಿಗಳಾದ ಹನುಮಂತ ಮತ್ತು ತ್ರಿವಿಕ್ರಮ್ ಅವರ ನಡುವೆ ನಿಂತು, ಹನುಮಂತ ಕೈಯನ್ನು ಮೇಲೆತ್ತುವ ಮೂಲಕ ಜಯಶೀಲ ಸ್ಪರ್ಧಿಯ ಹೆಸರನ್ನು ಘೋಷಿಸಿದರು.
ಅತ್ಯಧಿಕ ಅಂದರೆ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದ ಅವರು ಈ ಹಿಂದೆ ಇನ್ನೊಂದು ಖಾಸಗಿ ವಾಹಿನಿ ನಡೆಸಿದ ಸರಿಗಮಪ ಶೋನಲ್ಲೂ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
ಆ ಮೂಲಕ ಅವರು ಐವತ್ತು ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಸದಾ ಲುಂಗಿ ಉಟ್ಟುಕೊಂಡೇ ಇದ್ದ ಈ ಹಳ್ಳಿ ಹುಡುಗ ಘಟಾನುಘಟಿ ಸ್ಪರ್ಧಿಗಳನ್ನು ಮಣಿಸಿ ಅತ್ಯಧಿಕ ಮತಗಳನ್ನು ಪಡೆದು ದಾಖಲೆ ಸೃಷ್ಟಿಸಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಹನುಮಂತ ತಮ್ಮ ಸರಳತೆ, ದೈವದತ್ತವಾಗಿ ಬಂದ ಕಂಠಸಿರಿ, ಹಾಸ್ಯಪ್ರಜ್ಞೆ ಹಾಗೂ ಚತುರತೆಯಿಂದ ಮನರಂಜಿಸಿದ್ದೇ ಅಲ್ಲದೆ ಎಲ್ಲರ ಮನ ಗೆದ್ದಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ.
ಒಟ್ಟು 20 ಸ್ಪರ್ಧಿಗಳಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಬಿಗ್ ಬಾಸ್ ಕಪ್ ತಮ್ಮದಾಗಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದ ಅವರು ಬಿಗ್ ಬಾಸ್‌ನಲ್ಲಿ ಎದುರಾದ ಎಲ್ಲ ಸ್ಪರ್ಧೆಗಳನ್ನು ಲೀಲಾಜಾಲವಾಗಿ ಎದುರಿಸಿದ್ದರು. ತಮ್ಮ ಎದುರಾಳಿ ಸ್ಪರ್ಧಿಗಳಾದ ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯ ಗೌಡ, ಉಗ್ರಂ ಮಂಜು ಮೊದಲಾದವರನ್ನು ಮಣಿಸಿದ್ದಾರೆ.
ಯಾರು ಹನುಮಂತ ?
ಹನುಮಂತ ಲಮಾಣಿ ಈ ಮೊದಲು ಖ್ಯಾತಿ ಪಡೆದಿದ್ದು, ತಮ್ಮ ಸುಶ್ರಾವ್ಯ ಗಾಯನದಿಂದ. ಬಂಜಾರ ಸಮೂದಾಯದ ಈ ಹುಡುಗ ಅಪ್ಪಟ ಹಳ್ಳಿಗಾಡಿನ ದೈತ್ಯ ಪ್ರತಿಭೆ. ಸರಿಗಮಪ ರಿಯಾಲಿಟಿ ಶೋನಲ್ಲಿ ರನ್ನರ್‌ಅಪ್ ಆಗಿದ್ದ ಹನುಮಂತ ತಮ್ಮ ಗ್ರಾಮ್ಯ ಸೊಗಡಿನಿಂದಲೇ ಶಾಸ್ತ್ರೀಯ ಸಂಗೀತ ಕಲಿತ ಪ್ರತಿಭೆಗಳಿಗೆ ಸೆಡ್ಡುಹೊಡೆದ ಪ್ರತಿಭಾವಂತ. ಭಜನೆ ಪದಗಳನ್ನು ಹಾಡುತ್ತ, ಸಂಗೀತದಲ್ಲಿ ಮುಂದುವರಿದು ಗುರುತಿಸಿಕೊಂಡ ಈ ಯುವಕ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಅನ್ನೋ ತಾಂಡಾದಿಂದ ಬಂದ ಪ್ರತಿಭೆ.
1993ರ ಅಕ್ಟೋಬರ್ 7ರಂದು ಜನಿಸಿರುವ ಹನುಮಂತ, ಸರಿಗಮಪ ಮಾತ್ರವಲ್ಲದೆ, ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲೂ ಸೆಮಿ ಫೈನಲ್ ಪ್ರವೇಶಿದ ಛಲಗಾರ. ಈಗ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಮೂಲಕ ಮನೆ ಮಾತಾಗಿದ್ದಾರೆ ಹನುಮಂತ. ತಮ್ಮ ಹಾಡಿಯಲ್ಲಿ ಕುರಿಗಳನ್ನು ಮೇಯಿಸುತ್ತಲೇ, ಹಳ್ಳಿಯ ಆಂಜನೇಯ ಗುಡಿಯಲ್ಲಿ ಭಜನೆ ಮಾಡುತ್ತಾ ಹಾಡು ಕಲಿತ ಈ ಹನುಮಂತ ಈಗ ಕರ್ನಾಟಕದ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.