ಕನ್ನಡ ಚಿತ್ರರಂಗದಲ್ಲಿ ವರ್ಷದ ಮೊದಲಾರ್ಧ ಸೋಲು, ನಷ್ಟಗಳ ಸರಮಾಲೆ …
x

ಕನ್ನಡ ಚಿತ್ರರಂಗದಲ್ಲಿ ವರ್ಷದ ಮೊದಲಾರ್ಧ ಸೋಲು, ನಷ್ಟಗಳ ಸರಮಾಲೆ …

ಹೌದು, ಸೋಲು ಮತ್ತು ನಷ್ಟದ ಲೆಕ್ಕಾಚಾರ ಈ ವರ್ಷವೂ ಮುಂದುವರೆದಿದೆ. ಬಿಡುಗಡೆಯಾದ 125ಕ್ಕೂ ಹೆಚ್ಚು ಚಿತ್ರಗಳಿಗೆ ಹಾಕಿದ ಬಂಡವಾಳ ಸಹ ವಾಪಸ್ಸಾಗಿಲ್ಲ. ಬಿಡುಗಡೆಯಾದ ಚಿತ್ರಗಳಿಗೆ ಸುಮಾರು 200 ಕೋಟಿ ರೂ. ನಷ್ಟವಾಗಿದೆ


ವರ್ಷದ ಮೊದಲಾರ್ಧ ಮುಗಿದಿದೆ. 2025ರ ಮೊದಲ ಆರು ತಿಂಗಳುಗಳಲ್ಲಿ ಕನ್ನಡದಲ್ಲಿ 125ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ, ಎಷ್ಟು ಚಿತ್ರಗಳು ಹಿಟ್ ಆಗಿವೆ, ಎಷ್ಟು ಚಿತ್ರಗಳು ಹಾಕಿದ ದುಡ್ಡನ್ನು ವಾಪಸ್ಸು ಪಡೆದಿವೆ ಎಂಬಂತಹ ಲೆಕ್ಕಾಚಾರಗಳು ಶುರುವಾಗಿವೆ.

ಕಳೆದ ವರ್ಷ ಕನ್ನಡ ಚಿತ್ರರಂಗ ಸಾಕಷ್ಟು ಸೋಲು, ನಷ್ಟವನ್ನು ದಾಖಲಿಸಿತ್ತು. ಈ ವರ್ಷದ ಮೊದಲಾರ್ಧ ಅದು ಮುಂದುವರೆದಿದ್ದು, ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳಿಂದ ಸುಮಾರು 200 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಸೋಲು ಮತ್ತು ನಷ್ಟದ ಲೆಕ್ಕಾಚಾರ ಈ ವರ್ಷವೂ ಮುಂದುವರೆದಿದೆ. ಬಿಡುಗಡೆಯಾದ 125ಕ್ಕೂ ಹೆಚ್ಚು ಚಿತ್ರಗಳ ಪೈಕಿ ಎರಡು-ಮೂರು ಚಿತ್ರಗಳು ಹಾಕಿದ ಬಂಡವಾಳವನ್ನು ಪಡೆದು, ಸ್ವಲ್ಪ ಲಾಭ ಪಡೆದಿರುವುದು ಬಿಟ್ಟರೆ, ಮಿಕ್ಕ ಎಲ್ಲಾ ಚಿತ್ರಗಳಿಗೆ ಹಾಕಿದ ಬಂಡವಾಳ ಸಹ ವಾಪಸ್ಸಾಗಿಲ್ಲ. ಒಂದು ಕಡೆ ಸತತ ಸೋಲು ಮತ್ತು ನಷ್ಟ ಒಂದು ಕಡೆಯಾದರೆ, ಇನ್ನೊಂದು ಕಡೆ ಜನ ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ನೋಡುವುದು ಕಡಿಮೆಯಾಗಿದೆ. ಚಿತ್ರಮಂದಿರಗಳಲ್ಲಿ footfall ಕುಸಿದಿದೆ. ಇದು ಎಲ್ಲಾ ಚಿತ್ರರಂಗಗಳೂ ಎದುರಿಸುತ್ತಿರುವ ಸಮಸ್ಯೆ. ಆದರೆ, ಕನ್ನಡದಲ್ಲಿ ಈ ಸಮಸ್ಯೆ ಜಾಸ್ತಿಯೇ ಇದೆ.

ಕನ್ನಡದ ಸ್ಟಾರ್ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರು

ಇಷ್ಟಕ್ಕೂ ಯಾಕೆ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಮೊಬೈಲ್‍ ಫೋನ್‍ನಲ್ಲಿ ಸಿಗುತ್ತಿರುವ ಮನರಂಜನೆಯಿಂದ ಜನ ಬರುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ಮೊದಲ ಆರು ತಿಂಗಳಲ್ಲಿ ಯಾವದೇ ಸ್ಟಾರ್‍ ನಟರ ಚಿತ್ರಗಳು ಬಿಡುಗಡೆಯಾಗಿಲ್ಲ ಎಂಬುದನ್ನು ಗಮನಿಸಬಹುದು. ಕಳೆದ ವರ್ಷ ಕನ್ನಡದಲ್ಲಿ 230ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದರೂ, ಜನ ಬಂದಿದ್ದು, ಗೆಲ್ಲಿಸಿದ್ದು ಸ್ಟಾರ್‍ ನಟರ ಚಿತ್ರಗಳನ್ನು ಮಾತ್ರವೇ. ‘ದುನಿಯಾ’ ವಿಜಯ್‍ ಅಭಿನಯದ ‘ಭೀಮ’, ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’, ಶ್ರೀಮುರಳಿ ಅಭಿನಯದ ‘ಬಘೀರ’, ಶಿವರಾಜಕುಮಾರ್‍ ಅಭಿನಯದ ‘ಭೈರತಿ ರಣಗಲ್‍’, ಉಪೇಂದ್ರ ಅಭಿನಯದ ‘UI’ ಮತ್ತು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಚಿತ್ರ ನೋಡಿದ್ದು, ಗೆಲ್ಲಿಸಿದ್ದರು. ಅದು ಈ ವರ್ಷವೂ ಮುಂದುವರೆದ ಹಾಗೆ ಕಾಣುತ್ತಿದೆ. ಈ ವರ್ಷದ ಮೊದಲಾರ್ಧದಲ್ಲಿ ಶಿವರಾಜಕುಮಾರ್‍, ದರ್ಶನ್‍, ಸುದೀಪ್‍, ಧ್ರುವ ಸರ್ಜಾ, ಗಣೇಶ್‍, ವಿಜಯ್‍ ಸೇರಿದಂತೆ ಯಾವೊಬ್ಬ ದೊಡ್ಡ ಸ್ಟಾರ್‌ನ ಚಿತ್ರವೂ ಬಿಡುಗಡೆಯಾಗಿಲ್ಲ.

ಕನ್ನಡದಲ್ಲಿ ದೊಡ್ಡ ಹೀರೋಗಳು ಕೆಲಸ ಮಾಡಬೇಕು …

ಈ ಕುರಿತು ಮಾತನಾಡುವ ವಿತರಕ ಮತ್ತು ಪ್ರದರ್ಶಕ ಮಾರ್ಸ್ ಸುರೇಶ್‍, ‘ಜನಪ್ರಿಯ ಹೀರೋಗಳು ಚಿತ್ರಗಳನ್ನು ಮಾಡುತ್ತಿಲ್ಲ. ಎಲ್ಲರೂ ಪ್ಯಾನ್‍ ಇಂಡಿಯಾ ಚಿತ್ರಗಳತ್ತ ಗಮನಹರಿಸಿದರೆ, ಇನ್ನೂ ಕೆಲವರಿಗೆ ಸೋಲುವ ಭಯ. ಒಂದು ದೊಡ್ಡ ಚಿತ್ರ ಬಂದರೆ, ಅದರ ಸುತ್ತಮುತ್ತ ಬರುವ ಕೆಲವು ಚಿಕ್ಕ ಚಿತ್ರಗಳಿಗೂ ಬೇಡಿಕೆ ಇರುತ್ತದೆ. ಆದರೆ, ದೊಡ್ಡ ಚಿತ್ರಗಳೇ ಬರುತ್ತಿಲ್ಲ. ಹಾಗಾಗಿ, ಮೊದಲು ದೊಡ್ಡ ಹೀರೋಗಳು ಕೆಲಸ ಮಾಡಬೇಕು. ದೊಡ್ಡ ಚಿತ್ರಗಳ ಜೊತೆಗೆ ಗುಣಮಟ್ಟದ ಬಗ್ಗೆಯೂ ಹೆಚ್ಚು ಗಮನವಹಿಸಬೇಕು’ ಎನ್ನುತ್ತಾರೆ.

ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳ ಅವಶ್ಯಕತೆ ಇದೆ

ಮಿಕ್ಕಂತೆ ಪ್ರಜ್ವಲ್‍, ಅಜೇಯ್‍ ರಾವ್, ಶ್ರೀನಗರ ಕಿಟ್ಟಿ, ರಿಷಿ, ರಾಜವರ್ಧನ್‍, ಪೃಥ್ವಿ ಅಂಬಾರ್‍, ಯೋಗಿ, ದಿಗಂತ್‍, ಗುರುನಂದನ್‍, ಅಭಿಮನ್ಯು ಕಾಶೀನಾಥ್‍, ಧನ್ವೀರ್ ಗೌಡ, ಧರ್ಮ ಕೀರ್ತಿರಾಜ್‍, ವಿಜಯ್‍ ರಾಘವೇಂದ್ರ ಮುಂತಾದ ನಟರ ಚಿತ್ರಗಳು ಬಿಡಗುಡೆಯಾಗಿದ್ದರೂ, ಯಾವುದೂ ದೊಡ್ಡ ಹಿಟ್‍ ಆಗಿಲ್ಲ. ಹಾಗಾಗಿ, ಸದ್ಯದ ಮಟ್ಟಿಗೆ ಕನ್ನಡದಲ್ಲಿ ಒಬ್ಬ ಸ್ಟಾರ್ ನಟರ ಚಿತ್ರ ಬಿಡುಗಡೆಯಾಗಬೇಕಾದ ಅವಶ್ಯಕತೆ ಇದೆ. ಬಹುಶಃ ಸ್ಟಾರ್ ಚಿತ್ರ ಬಂದರೆ, ಚಿತ್ರರಂಗದ ಮತ್ತು ಚಿತ್ರಮಂದಿರಗಳ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂದು ಇಡೀ ಚಿತ್ರರಂಗ ಎದುರು ನೋಡುತ್ತಿದೆ.

ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು

ಇನ್ನು, ಈ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಶೇ. 80ರಷ್ಟು ಚಿತ್ರಗಳು ಹೊಸಬರ ಚಿತ್ರಗಳಾಗಿವೆ. ಇಲ್ಲಿ ಬರೀ ನಾಯಕ-ನಾಯಕಿಯರಷ್ಟೇ ಅಲ್ಲ, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಎಲ್ಲರೂ ಹೊಸಬರೇ. ಬಿಡುಗಡೆಯಾದ 125 ಪ್ಲಸ್‍ ಚಿತ್ರಗಳ ಪೈಕಿ ಸುಮಾರು 100 ಹೊಸಬರ ಚಿತ್ರಗಳೇ ಸಿಗುತ್ತವೆ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ, ತುಂಬಾ ಹಿಂದೆ ಹೋಗಬೇಕಿಲ್ಲ. ಸುಮ್ಮನ ಜೂನ್‍ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ನೋಡಿದರೆ ಸಾಕು. ‘ಸೀಸ್‍ ಕಡ್ಡಿ’, ‘ಸ್ಕೂಲ್‍ ರಾಮಾಯಣ’, ‘ಕಾಲೇಜು ಕಲಾವಿದ’, ‘ಮಾತೊಂದ ಹೇಳುವೆ’, ‘ಕಾಲವೇ ಮೋಸಗಾರ’, ‘ಡೆಡ್ಲಿ ಲವರ್ಸ್’, ‘ಬ್ಲಡಿ ಬಾಬು’, ‘ಅವನಿರಬೇಕಿತ್ತು’, ‘ಅಥಣಿ’ ಇವೆಲ್ಲಾ ಹೊಸಬರ ಚಿತ್ರಗಳಾಗಿವೆ.

ಕನ್ನಡದಲ್ಲಿ ವಾಪಸ್ಸು ಪಡೆದಿದ್ದು ಎರಡ್ಮೂರು ಚಿತ್ರಗಳು ಮಾತ್ರ

ಹಾಗಾದರೆ, ಈ ವರ್ಷ ಯಾವ ಚಿತ್ರವೂ ದುಡ್ಡು ಮಾಡಲಿಲ್ಲವಾ? ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ಮೂರ್ನಾಲ್ಕು ಚಿತ್ರಗಳು ದುಡ್ಡು ಮಾಡಿವೆ ಎಂದು ಹೇಳಲಾಗುತ್ತಿದೆ. ಈ ಪೈಕಿ, ವಿನೋದ್‍ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರವು ಚಿತ್ರಮಂದಿರಗಳಿಂದ ಒಂದೂವರೆ ಕೋಟಿ ಶೇರ್‍ ಪಡೆದಿದೆ ಎಂದು ಹೇಳಲಾಗುತ್ತಿದೆ. ಚಿತ್ರವು ಇತ್ತೀಚೆಗೆ 25 ದಿನಗಳ ಪ್ರದರ್ಶನವನ್ನು ಮುಗಿಸಿದ್ದು, ಈಗಲೂ ವಾರಾಂತ್ಯದ ಪ್ರದರ್ಶನಗಳು ಬಹುತೇಕ ಭರ್ತಿಯಾಗುತ್ತಿವೆ ಎಂದು ಸ್ವತಃ ವಿನೋದ್‍ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇನ್ನು, ‘ವೀರ ಚಂದ್ರಹಾಸ’ ಮತ್ತು ‘ಅಜ್ಞಾತವಾಸಿ’ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿವೆಯಂತೆ. ಇದು ಬರೀ ಚಿತ್ರಮಂದಿರಗಳಿಂದ ಮಾತ್ರ ಸಾಧ್ಯವಾಗಿಲ್ಲ. ಎರಡೂ ಚಿತ್ರಗಳ ಡಿಜಿಟಲ್‍ ಮತ್ತು ಸ್ಯಾಟಿಲೈಟ್‍ ಹಕ್ಕುಗಳು ಮಾರಾಟವಾಗಿದ್ದು, ಹಾಗಾಗಿ ಚಿತ್ರವು ನಿರ್ಮಾಪಕರಿಗೆ ನಷ್ಟ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಬಿಡುಗಡೆಯಾದ ಕನ್ನಡ ಸಿನಿಮಾಗಳ ಪೈಕಿ ಲೋ ಬಜೆಟ್ ಚಿತ್ರಗಳೇ ಹೆಚ್ಚು

ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಲೋ ಬಜೆಟ್‍ ಚಿತ್ರಗಳೇ ಹೆಚ್ಚು. ಒಂದರಿಂದ ಎರಡು ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಚಿತ್ರಗಳು ಈ ವರ್ಷ ಸಾಕಷ್ಟು ಬಂದಿವೆ. ಕೆಲವು ಚಿತ್ರಗಳ ಬಜೆಟ್‍ ಐದು ಕೋಟಿ ರೂ.ಗಳವರೆಗೂ ಆಗಿವೆ. ‘ಸಂಜು ವೆಡ್ಸ್ ಗೀತಾ 2’, ‘ಛೂ ಮಂತರ್’, ‘ಮಾದೇವ’, ‘ವಾಮನ’ ಸೇರಿದಂತೆ ಕೆಲವು ಚಿತ್ರಗಳ ಬಜೆಟ್ ಹೆಚ್ಚಾಗಿದ್ದು, ಈ ಪೈಕಿ ‘ಮಾದೇವ’ ಮಾತ್ರ ದುಡ್ಡು ವಾಪಸ್ಸು ಪಡೆದಿದ್ದು, ಮಿಕ್ಕಂತೆ ಹೆಚ್ಚು ಬಜೆಟ್‍ನ ಚಿತ್ರಗಳು ಹಾಕಿದ ದುಡ್ಡು ಪಡೆವಲ್ಲಿ ವಿಫಲವಾಗಿವೆ. ಎರಡು ಕೋಟಿ ರೂ.ವರೆಗಿನ ಚಿತ್ರಗಳು ಸಹ ದುಡ್ಡು ವಾಪಸ್ಸು ಪಡೆಯುವಲ್ಲಿ ವಿಫಲವಾಗಿವೆ.

ಜನಮೆಚ್ಚುಗೆ ಪಡೆದರೂ ಹಣ ಮಾಡಲಾಗಲಿಲ್ಲ

ಹಾಗಂತ ಸೋತ ಎಲ್ಲಾ ಚಿತ್ರಗಳು ಗುಣಮಟ್ಟದಲ್ಲಿ ಕಳಪೆಯಾಗಿದ್ದವು ಎಂದು ಹೇಳುವುದು ಕಷ್ಟ. ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ರುದ್ರ ಗರುಡ ಪುರಾಣ’, ‘ಪಾರು ಪಾರ್ವತಿ’, ‘ನೋಡಿದವರು ಏನಂತಾರೆ’, ‘ಭಾವ ತೀರ ಯಾನ’, ‘ವೀರ ಚಂದ್ರಹಾಸ’, ‘ಪಪ್ಪಿ’, ‘ತಿಮ್ಮನ ಮೊಟ್ಟೆಗಳು’, ‘X&Y’ ಮುಂತಾದ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತವಾದರೂ, ಚಿತ್ರಗಳು ದೊಡ್ಡ ಹಣವನ್ನೇನೂ ಮಾಡಲಿಲ್ಲ.

ಇಂಥ ಹಲವು ಕಾರಣಗಳಿಂದಾಗಿ ಕನ್ನಡ ಚಿತ್ರರಂಗ ಕುಂಟುತ್ತಾ ಸಾಗಿದೆ. ಸೋಲು ಮತ್ತು ನಷ್ಟದ ಪ್ರಮಾಣ ಹೆಚ್ಚಿದೆ. ಮುಂದಿನ ದಿನಗಳಲ್ಲಾದರೂ ಪರಿಸ್ಥಿತಿ ಸುಧಾರಿಸಬಹುದಾ? ಎಂದು ಕಾದು ನೋಡಬೇಕು.

Read More
Next Story